Read - < 1 minute
ಜಮ್ಮು:ಸೆ:30: ಜಮ್ಮು ಮತ್ತು ಕಾಶ್ಮೀರದ ಅಖನೂರ್ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೈನಿಕರು ಮಧ್ಯರಾತ್ರಿ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ.
ಪಾಕ್ ಸೈನಿಕರು ಲಘು ಶಸ್ತ್ರಾಸ್ತ್ರ ಬಳಸಿ ಗುಂಡು ಹಾರಿಸಿದ್ದಾರೆ. ಮಧ್ಯರಾತ್ರಿ 12.30ರ ವೇಳೆಗೆ ಗುಂಡಿನ ದಾಳಿ ಪ್ರಾರಂಭವಾಗಿದ್ದು, ರಾತ್ರಿ 1.30ರ ವೇಳೆಗೆ ಗುಂಡಿನ ದಾಳಿ ನಿಂತಿದೆ. ಗುಂಡಿನ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಮತ್ತು ಕಟ್ಟಡಗಳಿಗೆ ಹಾನಿಯಾದ ಕುರಿತು ಮಾಹಿತಿ ಲಭ್ಯವಾಗಿಲ್ಲ, ಪ್ರಸ್ತುತ ಗಡಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಭಾರತ ಬುಧವಾರ ರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿದ ಘಟನೆಯ ಬಳಿಕ ಭಾರತ ಮತ್ತು ಪಾಕ್ ನಡುವೆ ಸಂಘರ್ಷ ಮತ್ತಷ್ಟು ಹೆಚ್ಚಾಗಿದೆ. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ ಭಾರತೀಯ ಸೇನೆ ಅಲ್ಲಿದ್ದ 7 ಉಗ್ರ ಕ್ಯಾಂಪ್ ಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದೆ. ಕೇವಲ 4 ಗಂಟೆಯಲ್ಲಿ 36 ಉಗ್ರರು ಹಾಗೂ 6 ಪಾಕ್ ಸೈನಿಕರನ್ನು ಹತ್ಯೆಮಾಡಿ ಯಶಸ್ವಿಯಾಗಿ ವಾಪಸ್ಸಾಗಿದೆ. ಈ ಹಿನ್ನೆಲೆಯಲ್ಲಿ ಪಾಕ್ ನ ಅಪ್ರಚೋದಿತ ಗುಂಡಿನ ದಾಳಿ ನಡೆಸಲು ಮುಂದಾಗಿದೆ. ಪಾಕಿಸ್ತಾನ ಕಳೆದ 48 ಗಂಟೆಗಳಲ್ಲಿ 5 ಬಾರಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎನ್ನಲಾಗಿದೆ.
Discussion about this post