ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವೆಂದು(?) ಹೆಮ್ಮೆಯಿಂದ ಬೀಗುವ ಕಾಂಗ್ರೆಸ್, ತನ್ನ ನೇತೃತ್ವದಲ್ಲಿ ರೂಪಿಸಿದ ಸಂವಿಧಾನದ ಮೂಲ ಆಶಯಗಳಲ್ಲಿ ಒಂದಾದ ಜಾತ್ಯತೀ ತತೆಯನ್ನು ಗಾಳಿಗೆ ತೂರಿ ದಶಕಗಳೇ ಕಳೆದಿವೆ. ಇದನ್ನು ಸಿದ್ಧ ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನೂಚಾನವಾಗಿ ಪಾಲಿಸಿಕೊಂಡು ಬಂದಿದ್ದು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜಾತ್ಯತೀತತೆ ಅರ್ಥವನ್ನೇ ತಿರುಚಿದೆ.
ಈಗ ಇಂತಹ ಕಾರ್ಯಕ್ಕೆ ಹೊಸ ಸೇರ್ಪಡೆ ಕೃಷಿ ಕಾರ್ಮಿಕರಿಗೆ ಫಾರಿನ್ ಟೂರ್ ಭಾಗ್ಯ. ನಿನ್ನೆ ಮಾತನಾಡಿರುವ ಸಮಾಜ ಕಲ್ಯಾಣ ಸಚಿವ ಆಂಜನೇಯ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ 2500 ಕೃಷಿ ಕಾರ್ಮಿಕರನ್ನು ಅಧ್ಯಯನಕ್ಕಾಗಿ ಚೀನಾ ಹಾಗೂ ಇಸ್ರೇಲ್ ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಂದ ಬಂದ ನಂತರ ಭೂ ರಹಿತರಿಗೆ ತಲಾ 2 ಎಕರೆ ಭೂಮಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಯಾಕಿಷ್ಟು ಬೇಧ ಭಾವದ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ? ಮಳೆ ಕೊರತೆ, ಬೆಂಬಲ ಬೆಲೆ ಕೊರತೆ ಯಿಂದಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಕೊಂಡು ಇಳುವರಿ ಹೆಚ್ಚಿಸಿಕೊಂಡು, ಸಮಸ್ಯೆಯಿಂದ ಪಾರಾಗಲಿ ಎಂಬ ಉದ್ದೇಶದ ಅಧ್ಯಯನ ಸರಿಯಾಗಿದೆ.
ಆದರೆ, ಇದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದವರಿಗೆ ಮಾತ್ರ ಯಾಕೆ ಎನ್ನುವುದು ಪ್ರಶ್ನೆ. ಕೃಷಿ ಕಾರ್ಮಿಕರು ಎಂದರೆ, ಕೃಷಿ ಕಾರ್ಮಿಕರಷ್ಟೆ. ಅದರಲ್ಲಿ ಜಾತಿ ಆಧಾರದಲ್ಲಿ ನೀವು ಸಹಾಯ ಮಾಡುತ್ತೀರಾದರೆ, ಮುಂದುವರೆದ ಜಾತಿಗೆ ಸೇರಿದ ಕೃಷಿ ಕಾರ್ಮಿಕರೇನು ಮಾಡಬೇಕು. ಲಾಭ ನಷ್ಟಗಳು ಜಾತಿಯನ್ನು ನೋಡಿಕೊಂಡು ಬರುತ್ತವೆಯೇ? ಎಲ್ಲ ಸಮುದಾಯಕ್ಕೆ ಸೇರಿದ ಕೃಷಿ ಕಾರ್ಮಿಕರೂ ಇಂದು ಸಂಕಷ್ಟದಲ್ಲಿದ್ದಾರೆ. ಆದರೆ, ನಿಮ್ಮ ವೋಟ್ ಬ್ಯಾಂಕ್ ರಾಜ ಕಾರಣಕ್ಕಾಗಿ ಕೇವಲ ಎಸ್‌ಸಿ ಎಸ್‌ಟಿ ವರ್ಗದವರಿಗೆ ಮಾತ್ರ ಈ ಪ್ರವಾಸ ಹಾಗೂ 2 ಎಕರೆ ಭೂಮಿ ಎಂದರೆ, ಮುಂದು ವರೆದ ಸಮುದಾಯಕ್ಕೆ ಸೇರಿದ ಬಡ ರೈತ ಏನು ಮಾಡಬೇಕು?
ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು, ಜಾತೀಯತೆಯನ್ನು ಬೆಳೆಸಿದ ಕೀರ್ತಿ 60 ವರ್ಷ ರಾಷ್ಟ್ರವನ್ನಾಳಿದ ಕಾಂಗ್ರೆಸ್‌ಗೆ ಸಲ್ಲಬೇಕು. ಹೀಗಿದ್ದಾಗ್ಯೂ ಜಾತ್ಯತೀತತೆ ಎಂದು ಬೊಬ್ಬಿರಿಯುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಜಾತಿಯತೆಯನ್ನು ಅಳಿಸಿಹಾಕಬೇಕು ಎಂದಾದರೆ, ಮೊದಲು ಜಾತಿ ಆಧಾರದಲ್ಲಿ ಮೀಸಲಾತಿ, ಸವಲತ್ತುಗಳನ್ನು ಕೊಡುವುದನ್ನು ನಿಲ್ಲಿಸಿ. ಬದಲಾಗಿ ಅರ್ಹತೆ ಹಾಗೂ ಅಗತ್ಯತೆ ಆಧಾರದಲ್ಲಿ ನೀಡುವ ತಾಕತ್ತು ತೋರಿ. ಆಗ ಜಾತ್ಯತೀತ ಪದಕ್ಕೆ ಅರ್ಥ ಬರುತ್ತದೆ.
Discussion about this post