ಲಖನೌ: ಅ:24; ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಇತ್ತ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷ ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿದ್ದು, ಅಖಿಲೇಶ್ -ಶಿವಪಾಲ್ ವಿರುದ್ದದ ಕಲಹ ಶಮನಕ್ಕೆ ಮುಲಾಯಂ ಸಿಂಗ್ ಮುಲಾಮಿನಿಂದ ಕಡಿಮೆಯಾಗಿಲ್ಲ.
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಚಿಕ್ಕಪ್ಪ ಶಿವಪಾಲ್ ಯಾದವ್ ವಿರುದ್ಧದ ದ್ವೇಷ ಜಗಜ್ಜಾಹೀರಾಗಿರುವುದಲ್ಲದೇ, ತಮ್ಮ ಕಾರ್ಯಕರ್ತರ ಮೇಲೂ ಪರಿಣಾಮ ಬೀರಿದೆ.
ಲಖನೌನಲ್ಲಿ ಸೋಮವಾರ ಹೈಡ್ರಾಮ ನಡೆಯಿತು. ಯಾದವೀ ಬಣಗಳ ಕಾರ್ಯಕರ್ತರ ನಡುವೆ ಒಂದೆಡೆ ಹೊಡೆದಾಟ ನಡೆದರೆ, ಇನ್ನೊಂದೆಡೆ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನವಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಾವು ಯಾವುದೇ ಪಕ್ಷ ರಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ತಮ್ಮ ತಂದೆ ಮತ್ತು ಅಧಿನಾಯಕ ಮುಲಾಯಂ ಬಯಸಿದರೆ ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಸಿದ್ದ ಎಂದೂ ಭಾವೋದ್ವೇಗದಿಂದ ಹೇಳಿದ್ದಾರೆ.
ಈಗ ನಾವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ನಮ್ಮ ದೌರ್ಬಲ್ಯಗಳನ್ನು ತೊಡೆದುಹಾಕಬೇಕು ಮತ್ತು ಪರಸ್ಪರ ಜಗಳವಾಡದೇ ಮುಂಬರುವ ವಿಧಾನಸಭೆ ಚುನಾವಣೆಯತ್ತ ಗಮನಹರಿಸಬೇಕೆಂದು ಮುಲಾಯಂ ಸಿಂಗ್ ಬಿಕ್ಕಟ್ಟಿಗೆ ತೇಪೆ ಹಾಕುವ ಪ್ರಯತ್ನವನ್ನೂ ಮಾಡಿದ್ದಾರೆ. ಅಲ್ಲದೇ ತಮ್ಮ ಸಹೋದರ ಶಿವಪಾಲ್ ಯಾದವ್ ಸಿಂಗ್ ಮತ್ತು ಅಮರ್ ಸಿಂಗ್ ಪರ ಬ್ಯಾಟಿಂಗ್ ಮಾಡಿ ಬಹಿರಂಗವಾಗಿಯೇ ಮಗನಿಗೆ ಬುದ್ಧಿ ಹೇಳಿದ್ದಾರೆ. ನನ್ನ ಆಪ್ತರನ್ನು ಪಕ್ಷದಿಂದ ಕೈಬಿಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ರಾಜಧಾನಿ ಲಖನೌ ಇಂದು ಹೊಸ ಬೆಳವಣಿಗೆಗೆ ಸಾಕ್ಷಿಯಾಯಿತು. ಮುಲಾಯಂ ಸಿಂಗ್ ಯಾದವ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಸಂಸದರು, ಸಚಿವರು ಮತ್ತು ಶಾಸಕರ ಮಹತ್ವದ ಸಭೆ ಕರೆದಿದ್ದರು. ಅಖಿಲೇಶ್ ಮತ್ತು ಅವರ ಚಿಕ್ಕಪ್ಪ ಉಚ್ಚಾಟಿತ ಶಿವಪಾಲ್ ಸಿಂಗ್ ಯಾದವ್ ಬೆಂಬಲಿಗರು ಅಲ್ಲಿ ಜಮಾಯಿಸಿದ್ದರು.
ಪರ-ವಿರೋಧಿ ಘೋಷಣೆ ನಡುವೆ ಮಾತಿನ ಚಕಮಕಿ ನಡೆದು ಕೈ-ಕೈ ಮಿಲಾಯಿಸಿದರು. ಪೊಲೀಸರೊಂದಿಗೂ ವಾಗ್ವಾದಕ್ಕಿಳಿದರು. ಇನ್ನೊಂದು ಉದ್ರಿಕ್ತ ಗುಂಪು ಬ್ಯಾರಿಕೇಡ್ಗಳನ್ನು ಭೇದಿಸಿ ಪಕ್ಷದ ಕಚೇರಿಯತ್ತ ನುಗ್ಗಲು ಯತ್ನಿಸಿತ್ತು. ಉದ್ವಿಗ್ನ ಸ್ಥಿತಿ ನಿಯಂತ್ರಿಲು ಪೊಲೀಸರು ಬಲಪ್ರಯೋಗ ಮಾಡಿದರು. ಘರ್ಷಣೆ ಮತ್ತು ಬಲಪ್ರಯೋಗದಲ್ಲಿ ಎರಡು ಬಣಗಳ ಕೆಲವು ಕಾರ್ಯಕರ್ತರಿಗೆ ಗಾಯಗಳಾದವು.
ಗಳಗಳನೇ ಅತ್ತ ಅಖಿಲೇಶ್ :
ಇತ್ತ ಮುಲಾಯಂ ಸಿಂಗ್ ಕರೆದಿದ್ದ ಸಭೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ ಅಖಿಲೇಶ್ ಒಂದು ಹಂತದಲ್ಲಿ ಗಳಗಳನೇ ಅತ್ತರು. ತಾವು ಹೊಸ ಪಕ್ಷ ರಚಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಫಷ್ಟಪಡಿಸಿದ ಅವರು, ನೇತಾಜಿ (ಮುಲಾಯಂ) ಬಯಸಿದರೆ ಮುಖ್ಯಮಂತ್ರಿ ಪದವಿ ತ್ಯಜಿಸಲು ಸಿದ್ಧ. ಅವರಿಗೆ ಸಮರ್ಥರೆನಿಸಿದವರು ಮುಖ್ಯಮಂತ್ರಿಯಾಗಲಿ ಎಂದರು.
ನನ್ನ ತಂದೆಯೇ ನನಗೆ ಗುರು. ನನ್ನನ್ನು ರಾಜಕೀಯವಾಗಿ ಮುಗಿಸಲು ಪಕ್ಷದಲ್ಲಿನ ಕೆಲವರು ಪಿತೂರಿ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಸಕರ್ಾರದ ಯೋಜನೆಗಳನ್ನು ಮುಂದಿಟ್ಟುಕೊಂಡು ನಾನು ಚುನಾವಣೆ ಎದುರಿಸುತ್ತೇನೆ. ನನ್ನ ಸಾಧನೆಗಳನ್ನು ಜನರಿಗೆ ತಿಳಿಸುತ್ತೇನೆ ಎಂದು ಅವರು ಸಭೆಯಲ್ಲಿ ಭಾವುಕರಾಗಿ ಮಾತನಾಡಿದರು.
ಯಾದವೀ ಕಲಹದ ಕೇಂದ್ರ ಬಿಂದುವಾಗಿರುವ ಶಿವಪಾಲ್ಸಿಂಗ್ ಯಾದವ್ (ಅಖಿಲೇಶ್ ಚಿಕ್ಕಪ್ಪ) ಮಾತನಾಡಿ, ನನ್ನ ತಪ್ಪಿಲ್ಲದಿದ್ದರೂ ಅಧಿಕಾರವನ್ನು ಕಸಿದುಕೊಳ್ಳಲಾಯಿತು. ನಾನು ತಪ್ಪು ಮಾಡಿಲ್ಲ ಎಂಬುದನ್ನು ಗಂಗಾಜಲ ಮುಟ್ಟಿ ಪ್ರಮಾಣ ಮಾಡುತ್ತೇನೆ. ನೇತಾಜಿ ಅಣತಿಯಂತೆ ನಾನು ಸಾಗುತ್ತೇನೆ ಎಂದು ಅವರು ಪುನರುಚ್ಚರಿಸಿದರು.
ನನ್ನ ಕುಟುಂಬದಲ್ಲೇ ಈ ಬೆಳವಣಿಗೆ ನಡೆದಿರುವುದು ನನಗೆ ಅತೀವ ನೋವುಂಟು ಮಾಡಿದೆ. ಜೈಲಿಗೆ ಹೋಗಿದ್ದಾಗಲೂ ನನಗೆ ಇಷ್ಟು ಯಾತನೆಯಾಗಿರಲಿಲ್ಲ ಎಂದು ಮುಲಾಯಂ ಹೇಳಿದರು.
ತಮ್ಮ ಸಹೋದರ ಪರ ಮಾತನಾಡಿದ ಅವರು, ಶಿವಪಾಲ್ ಉತ್ತಮ ಜನನಾಯಕ. ಅವರು ಪಕ್ಷಕ್ಕಾಗಿ ಶ್ರಮಿಸಿದ್ದಾರೆ. ಶಿವಪಾಲ್ ಯಾದವ್ ಸಿಂಗ್ ಮತ್ತು ಅಮರ್ ಸಿಂಗ್ ನನ್ನ ಆಪ್ತರು ಅವರನ್ನು ಪಕ್ಷದಿಂದ ಕೈಬಿಡುವುದಿಲ್ಲ, ಪಕ್ಷದಲ್ಲಿ ಅಶಿಸ್ತು ಸಹಿಸುವುದಿಲ್ಲ, ಕೆಲವರಿಗೆ ಅಧಿಕಾರ ಲಭಿಸಿದ ತಕ್ಷಣ ತಲೆ ಕೆಟ್ಟಿದೆ. ಅಂಥವರ ವಿರುದ್ಧ ಯಔಉದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ಪಿತೂರಿ ರಾಜಕೀಯ ಮಾಡುವವರನ್ನು ಪಕ್ಷದಿಂದ ಹೊರಗಟ್ಟುತ್ತೇವೆ ಎಂದರು.
ಈ ಎಲ್ಲ ಬೆಳವಣಿಗೆಗಳೊಂದಿಗೆ ಪಕ್ಷದ ಬಿಕ್ಕಟ್ಟಿಗೆ ತೇಪೆ ಹಾಕುವ ಕಾರ್ಯವು ಮುಂದುವರಿದಂತಾಗಿದೆ.
Discussion about this post