Read - < 1 minute
ಬೆಂಗಳೂರು, ಅ.10: ದಸರಾ ಸಂಭ್ರಮದ ನಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿಗಳ ಕೊಡುಗೆ ದಕ್ಕಲಿದೆ.
ಈ ಬಾರಿ 120ಕ್ಕೂ ಹೆಚ್ಚು ನಿಗಮ ಮಂಡಳಿಗಳಿಗೆ ಕಾರ್ಯಕರ್ತರು, ಮುಖಂಡರು, ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕರು ಮತ್ತು ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ನೇಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಶೇ.40ಕ್ಕೂ ಮೇಲ್ಪಟ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ವಾರಾಂತ್ಯದೊಳಗೆ ಮುಖ್ಯಮಂತ್ರಿಗಳು ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ನಾಯಕರ ಜತೆ ಚರ್ಚೆ ನಡೆಸಿ ನಿಗಮ ಮಂಡಳಿ ನೇಮಕಾತಿಯನ್ನು ಅಂತಿಮಗೊಳಿಸಲಿದ್ದಾರೆ.
ಈಗಾಗಲೇ ಸಿದ್ಧಪಡಿಸಿದ್ದ ನೇಮಕಾತಿ ಪಟ್ಟಿಯನ್ನು ಹೈಕಮಾಂಡ್ ನಾಯಕರು ಬದಲಾಯಿಸಿದ್ದು, ಹೊಸದಾಗಿ ಮಾರ್ಗಸೂಚಿಗಳನ್ನು ನೀಡಿ ಅದರಂತೆ ಆಯ್ಕೆ ಮಾಡಲು ತಾಕೀತು ಮಾಡಿದರು.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಜತೆ ಎರಡು ಸುತ್ತಿನ ಮಾತುಕತೆ ನಡೆಸಿರುವ ಮುಖ್ಯಮಂತ್ರಿಗಳು, ಅಳೆದೂ ತೂಗಿ ನಿಗಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ.
ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಉತ್ತರ ಕರ್ನಾಟಕ ಭಾಗದ ವೀರಶೈವ ಸಮುದಾಯಕ್ಕೆ ಒತ್ತು ನೀಡಲಾಗಿದೆ. ಮಹಿಳಾ ನಾಯಕಿಯರ ಆಯ್ಕೆಯಲ್ಲೂ ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಲೆಕ್ಕಾಚಾರಗಳನ್ನು ತಾಳೆ ಹಾಕಿ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
ಸಿದ್ದಗೊಂಡಿರುವ ಪಟ್ಟಿಗೆ ಹೈಕಮಾಂಡ್ ಅಂಕಿತ ಹಾಕಿದರೆ ತಿಂಗಳಾಂತ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕಾತಿಯಾಗಲಿದ್ದು, ಹೊಸ ಅಧ್ಯಕ್ಷರು-ಉಪಾಧ್ಯಕ್ಷರಿಗೆ ಒಂದು ವರ್ಷ 8 ತಿಂಗಳ ಅಧಿಕಾರಾವಧಿ ಸಿಗಲಿದೆ.
ಸಿದ್ದರಾಮಯ್ಯ ಅವರ ಸರ್ಕಾರದ ಅಂತಿಮ ಅವಧಿಯ ನಿಗಮ ಮಂಡಳಿಗಳಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದ್ದು, ಭಾರೀ ಲಾಬಿಯೂ ನಡೆಯುತ್ತಿದೆ. ಕೆಲ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಿ ಹುದ್ದೆ ಗಿಟ್ಟಿಸುವ ಪ್ರಯತ್ನ ನಡೆಸಿದ್ದಾರೆ.
Discussion about this post