ಇದೀಗ ಬಹುಭಾಷಾ ತಾರೆಯಾಗಿ, ಭಾರೀ ಬ್ಯುಸಿಯಾಗಿದ್ದರೂ ಆಗಾಗ ಹೊಸಾ ಪ್ರಯೋಗಗಳಲ್ಲಿ ತಲ್ಲೀನರಾಗುವುದು ಪ್ರಕಾಶ್ ರೈ ಸ್ಪೆಷಾಲಿಟಿ. ಅಂಥಾಪ್ರಯೋಗಗಳೆಲ್ಲ ಕನ್ನಡದ ಭೂಮಿಕೆಯಲ್ಲಿಯೇ ನಡೆಯುತ್ತವೆಂಬುದು ಅವರ ನೆಲದ ನಂಟಿನ ಪ್ರತೀಕವೂ ಹೌದು. ನಾನೂ ನನ್ನ ಕನಸು ಮುಂತಾದ ಸದಭಿರುಚಿಯ ಕಾಡುವ ಚಿತ್ರಗಳನ್ನು ಪ್ರಕಾಶ್ ರೈ ಇಂಥಾದ್ದೊಂದು ಪ್ರೀತಿಯಿಂದಲೇ ಕಟ್ಟಿ ಕೊಟ್ಟಿದ್ದಾರೆ. ಇದೀಗ ಅವರ ಕಡೆಯಿಂದ ತಯಾರಾಗಿರುವ ಮತ್ತೊಂದು ಚಿತ್ರ `ಇದೊಳ್ಳೆ ರಾಮಾಯಣ’ ದಸರಾ ಹಬ್ಬದಂದು ತೆರೆ ಕಾಣಲಿದೆ.
ಅಕ್ಟೋಬರ್ ಏಳನೇ ತಾರೀಕಿನಂದು ಇದೊಳ್ಳೆ ರಾಮಾಯಣ ತೆರೆ ಕಾಣಲಿದೆ ಎಂಬುದನ್ನು ಪ್ರಕಾಶ್ ರೈ ಖಚಿತಪಡಿಸಿದ್ದಾರೆ.
ಇದೀಗಲೇ ಬಿಡುಗಡೆಯಾಗಿರುವ ಟ್ರೈಲರ್ ಮೂಲಕವೇ ಭಾರೀ ಕುತೂಹಲ ಕೆರಳಿಸಿರುವ ಈ ಚಿತ್ರ ಎಲ್ಲರ ಗಮನ ಸೆಳೆದಿರೋದಂತೂ ಸತ್ಯ. ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ಬಿಡುಗಡೆಯಾಗಲಿದೆ. ಅಂದಹಾಗೆ ತೆಲುಗಿನಲ್ಲಿದು `ಮನ ಊರಿ ರಾಮಾಯಣಂ’ ಹೆಸರಲ್ಲಿ ತಯಾರಾಗಿದೆ. ಪ್ರಿಯಾಮಣಿ ಎರಡೂ ಭಾಷೆಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಪ್ರತಿಭಾವಂತರ ದಂಡೇ ನೆರೆದಿದೆ. ರಂಗಭೂಮಿಯ ಪ್ರತಿಭೆಗಳೂ ಇಲ್ಲಿ ಅದೃಷ್ಟಪರೀಕ್ಷೆಗಿಳಿದಿದ್ದಾರೆ.
ಶಶಿಧರ ಅಡಪ, ಜೋಗಿ ಮುಂತಾದವರ ಇರುವಿಕೆಯಲ್ಲಿ ಮೂಡಿ ಬಂದಿರೋ ಇದೊಳ್ಳೆ ರಾಮಾಯಣದ ನಿರೂಪಣಾ ಶೈಲಿಯೇ ಭಿನ್ನವಾಗಿದೆ, ಅದರಲ್ಲೇನೋ ಹೊಸತನವಿದೆ ಎಂಬ ಅಂಶ ಟ್ರೈಲರ್ ಮೂಲಕವೇ ಜಾಹೀರಾಗಿದೆ. ಯಾವ ಕೆಲಸವನ್ನೇ ಮಾಡಿದರೂ ಭಿನ್ನವಾಗಿ, ಕ್ರಿಯಾಶೀಲವಾಗಿ ಮಾಡುವ ಪ್ರಕಾಶ್ ರೈ `ಇದೊಳ್ಳೆ ರಾಮಾಯಣ’ದ ಮೂಲಕ ಮತ್ತೊಂದು ಮೈಲಿಗಲ್ಲು ನೆಡುವ ಸೂಚನೆಗಳೇ ದಟ್ಟವಾಗಿವೆ!
Discussion about this post