Read - < 1 minute
ನವದೆಹಲಿ, ಅ.9: ದೇಶದಾದ್ಯಂತ ನವರಾತ್ರಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿಜಯದಶಮಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಉಗ್ರರು ದೇಶದ ಜನನಿಬಿಡ ಪ್ರದೇಶ, ಪ್ರವಾಸಿ ಹಾಗೂ ಐತಿಹಾಸಿಕ ತಾಣಗಳನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಈ ಹಿನ್ನಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ನವರಾತ್ರಿ ಹಾಗೂ ವಿಜಯದಶಮಿ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುವ ಹಿನ್ನಲೆಯಲ್ಲಿ ಭಯೋತ್ಪಾದಕರ ದಾಳಿ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿ ನೀಡಿದೆ. ಜನನಿಬಿಡ ಪ್ರದೇಶ ಹಾಗೂ ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ಪ್ರಮುಖ ಪ್ರವಾಸಿ ತಾಣಗಳ ಮೇಲೆ ನಿಗಾ ಇರಿಸಲಾಗಿದ್ದು, ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಶ್ವ ವಿಖ್ಯಾತ ತಾಜ್‍ಮಹಲ್ ಸೇರಿದಂತೆ ದೇಶದ ಪ್ರಮುಖ ಪ್ರವಾಸಿ ತಾಣಗಳು ಮತ್ತು ಐತಿಹಾಸಿಕ ಸ್ಮಾರಕಗಳಿಗೆ ವ್ಯಾಪಕ ಭದ್ರತೆ ಒದಗಿಸಲಾಗಿದೆ. ದೆಹಲಿ, ಮುಂಬೈ, ಉತ್ತರ ಪ್ರದೇಶದ ಪ್ರಮುಖ ನಗರಗಳು ಬೆಂಗಳೂರು ಸೇರಿದಂತೆ ಅನೇಕ ನಗರ, ಪಟ್ಟಣಗಳಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ದುರ್ಗಾಪೂಜೆ, ದಸರಾ ಮತ್ತು ಮೊಹರಂ ಹಬ್ಬಗಳಂಥ ಪ್ರಮುಖ ಆಚರಣೆಗಳ ಹಿನ್ನೆಲೆಯಲ್ಲಿ ಲಕ್ನೋ. ಆಗ್ರಾ, ಕಾನ್ಪುರ, ಮೊರದಾಬಾದ್, ಬರೇಲಿ, ಮೀರತ್, ಮುಜಾಫರ್‍ನಗರ, ವಾರಣಾಸಿ ಮತ್ತು ಅಲಹಾಬಾದ್ ನಗರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ದೇಶ-ವಿದೇಶಗಳ ಪ್ರವಾಸಿಗಳ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾದ ತಾಜ್‍ಮಹಲ್ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ 36 ಹೆಚ್ಚುವರಿ ಕಮ್ಯಾಂಡೋಗಳನ್ನು ನಿಯೋಗಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
Discussion about this post