ಬೆಳಗಾವಿ, ಅ.4: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ತಯಾರಿ ಆರಂಭಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ನಂತರವಷ್ಟೇ ನಾನು ಮನೆಗೆ ಹೋಗುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಎರಡು ದಿನಗಳ ಬಿಜೆಪಿ ಕಾರ್ಯಕಾರಣಿಯಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ದಿನದಿಂದ ಮನೆಗೆ ಹೋಗಿಲ್ಲ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದ ನಂತರವಷ್ಟೇ ನಾನು ಮನೆಗೆ ಹೋಗುತ್ತೇನೆ ಎಂದರು.
ಪಕ್ಷದ ಸಂಘಟನೆಗಾಗಿ ನಿರಂತರವಾಗಿ ದುಡಿಯುತ್ತಿದ್ದೇನೆ. ಎಂತಹುದ್ದೇ ಪರಿಸ್ಥಿತಿ ಬಂದರೂ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ಹೇಳುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ರೈತರಿಗಾಗಿ ನೀರು ಬಿಡುತ್ತಿರುವುದಕ್ಕೆ ಸಹಮತ
ರೈತರಿಗಾಗಿ ನೀರು ಬಿಡುತ್ತಿರುವ ಬಗ್ಗೆ ಸರ್ಕಾರ ಹೇಳಿದೆ. ಅದಕ್ಕೆ ಬಿಜೆಪಿ ಸಹಮತವಿದೆ. ನಾರಿಮನ್ ಬಗ್ಗೆ ನಮಗೆ ಸಂಪೂರ್ಣ ಗೌರವವಿದೆ. ಮೊನ್ನೆ ನಾರಿಮನ್ ನಡೆಸಿದ ವಾದ ಅಸಮಾಧಾನ ತಂದಿತ್ತು, ಅವರನ್ನ ಮುಂದುವರಿಸುವುದು, ಬಿಡುವುದು ಸರ್ಕಾರ ನಿರ್ಧರಿಸಲಿದೆ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯದ ಉದ್ದಗಲಕ್ಕೂ ಭಾರಿ ಪ್ರಮಾಣದಲ್ಲಿ ಮುಖಂಡರು, ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ.ಕಾಂಗ್ರೆಸ್ ಶಶಿಕಾಂತ ಸಿದ್ನಾಳ ಸೇರಿ ಹಲವು ಮುಖಂಡರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಈಗ ಬಿಜೆಪಿಗೆ ಆನೆಬಲ ಬಂದಿದೆ. ಪಕ್ಷವನ್ನು ಬೂತ್ ಮಟ್ಟದಲ್ಲಿ ಗಟ್ಟಿಗೊಳಿಸಲಾಗುವುದು, ಮುಂದಿನ ಕಾರ್ಯಕಾರಿಣಿ ಕಲಬುರ್ಗದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇನ್ನಷ್ಟೆ ದಿನಾಂಕ ನಿಗದಿ ಪಡಿಸಬೇಕಿದೆ ಎಂದರು.
Discussion about this post