Read - < 1 minute
ಪಣಜಿ, ಅ.13; ಪಾಕಿಸ್ಥಾನ ಬೆಂಬಲಿತ ಉಗ್ರಗಾಮಿಗಳ ದಾಳಿ ಆತಂಕದ ನಡುವೆ ಗೋವಾ ರಾಜಧಾನಿ ಪಣಜಿಯಲ್ಲಿ ಅ.15 ಮತ್ತು 16ರಂದು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ದೇಶಗಳ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, 13 ರಾಷ್ಟ್ರಗಳ ನಾಯಕರ ಈ ಸಭೆಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸರ್ಜಿಕಲ್ ದಾಳಿಯಿಂದ ತೀವ್ರ ಹತಾಶರಾಗಿರುವ ಭಯೋತ್ಪಾದಕರು ಸಮಾವೇಶಕ್ಕೆ ಪೂರ್ವಭಾವಿಯಾಗಿ ಅ.12 ಮತ್ತು 14ರ ನಡುವೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಕರಾವಳಿ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ದುಷ್ಕೃತ್ಯ ಆತಂಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಉಸ್ತುವಾರಿಯಲ್ಲಿ ಸಮಾವೇಶಕ್ಕೆ ಅಭೂತಪೂರ್ವ ಬಿಗಿ ಭದ್ರತೆ ಒದಗಿಸಲಾಗಿದೆ.
ಬ್ರಿಕ್ಸ್ ಮತ್ತು ಬ್ರಿಮ್ ಸ್ಟೆಕ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಜಿನ್ಪಿಂಗ್ ಸೇರಿದಂತೆ 13 ದೇಶಗಳ ಮುಖ್ಯಸ್ಥರು ಆಗಮಿಸುತ್ತಿದ್ದು, ಗೋವಾ ರಾಜ್ಯದಾದ್ಯಂತ ಸೂಕ್ತ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.
ಅಜಿತ್ ಧೋವಲ್ ಈಗಾಗಲೇ ನೌಕಾಪಡೆ, ಕರಾವಳಿ ರಕ್ಷಣಾ ಪಡೆ ಮತ್ತು ಭದ್ರತಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಗೋವಾ ವಿಮಾನನಿಲ್ದಾಣ ಮತ್ತು ಸಾಗರ ಪ್ರದೇಶಗಳಲ್ಲಿ ಮಾರ್ಕೋಸ್ ಕಮ್ಯಾಂಡೋಗಳನ್ನು ನಿಯೋಜಿಸಲಾಗಿದೆ. ಉಗ್ರರ ಚಲನವಲನಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲು ಮಹಾರಾಷ್ಟ್ರ ಪೊಲೀಸರ ನೆರವು ಪಡೆಯಲಾಗಿದೆ.
ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಅತಿಗಣ್ಯರು ವಾಸ್ತವ್ಯ ಹೂಡಲಿರುವ ಪಂಚತಾರಾ ಮತ್ತು ಸಪ್ತತಾರಾ ಹೋಟೆಲ್ಗಳ ಸುತ್ತ ಇಂಡೋ ಟಿಬೆಟಿಯನ್ ಪೊಲೀಸ್ ಫೋರ್ಸ್ ಮತ್ತು ವಿಶೇಷ ಶ್ವಾನದಳವನ್ನು ನೇಮಿಸಲಾಗಿದೆ.
Discussion about this post