Read - < 1 minute
ಬೆಂಗಳೂರು, ಸೆ.17: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಆರ್‌ಎಸ್‌ಎಸ್ ಕೈವಾಡವಾದ ಶಂಕೆ ವ್ಯಕ್ತವಾಗಿದೆ ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿರಂತೆ ಇಂದು ಮಾತನಾಡಿರುವ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪರಮೇಶ್ವರ್ ಅವರ ಮೇಲೆ ಒಂದಷ್ಟು ಗೌರವವಿದೆ. ಅದನ್ನು ಅವರು ಉಳಿಸಿಕೊಳ್ಳಬೇಕು. ದೇಶ ಭಕ್ತ ಸಂಘಟನೆ ಆರ್‌ಎಸ್‌ಎಸ್ ವಿರುದ್ಧ ತಮ್ಮ ಸ್ಥಾನದ ಜವಾಬ್ದಾರಿ ಮರೆತುಹೇಳಿಕೆ ನೀಡಿರುವ ಅವರು, ರಾಜ್ಯದ ಜನತೆಯ ಬಳಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಮಾತನಾಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವರು ಬಾಲಿಶ ಹೇಳಿಕೆ ನೀಡಿದ್ದಾರೆ. ಕಾವೇರಿ ವಿಚಾರದಲ್ಲಿ ಸರ್ಕಾರ ತಪ್ಪು ಮಾಡಿದ್ದು ಅದರಿಂದ ನುಣುಚಿಕೊಳ್ಳಲು ಪ್ರಧಾನಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ. ಇಂತಹ ನಿಕೃಷ್ಟ ರಾಜಕಾರಣವನ್ನು ನಾನು ದೇಶದ ಯಾವ ಭಾಗದಲ್ಲೂ ನೋಡಿಲ್ಲ ಎಂದರು.
ಸರ್ಕಾರದ ಬಳಿ ಸಾಕ್ಷಿ ಇದ್ದರೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಿ. ಅದರ ಬದಲಾಗಿ ವೃಥಾರೋಪ ಮಾಡುತ್ತಾ ತಮ್ಮ ತಪ್ಪನ್ನು ಇನ್ನೊಬ್ಬರ ಮೇಲೆ ಹೊರಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ.
Discussion about this post