Read - 2 minutes
ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ನಂತರ ಅವರ ಹಾಗೂ ಸರ್ಕಾರದ ನಡೆಗಳು ರಾಜ್ಯದ ಜನರಲ್ಲಿನ ಆಶಾಭಾವನೆಯನ್ನೇ ಹೊಸಕಿ ಹಾಕಿದವು. ಅವರ ಒಂದೊಂದು ಕ್ರಮಗಳೂ ಜನವಿರೋಧಿಯಾಗಿ, ಕೇವಲ ಸ್ವಾರ್ಥ ರಾಜಕಾರಣದ ಮತ್ತೊಂದು ಮಜಲಾಯಿತು ಅಷ್ಟೇ. ಆದರೆ, ಜಿ. ಪರಮೇಶ್ವರ್ ಗೃಹ ಸಚಿವರಾದ ವೇಳೆ ಸರ್ಕಾರದಲ್ಲೊಬ್ಬ ಒಳ್ಳೆಯ ವ್ಯಕ್ತಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಒಂದಷ್ಟು ಭರವಸೆ ಗಳು ಮೂಡಿದ್ದವು. ಆದರೆ, ಪರಂ ಅವರ ನಡೆ ಹಾಗೂ ಹೇಳಿಕೆಗಳು ಈಗ ಇದ್ದ ವಿಶ್ವಾಸವನ್ನೂ ಸಹ ಕಳೆದುಕೊಂಡಿದೆ.
ಕಾವೇರಿ ನದಿ ವಿಚಾರದಲ್ಲಿ ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಆರ್ಎಸ್ಎಸ್ ಹಾಗೂ ಅದರ ಅಂಗ ಸಂಸ್ಥೆಗಳ ಕೈವಾಡವಿದೆ ಎಂಬ ಸಂಶಯ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆಯ ಕುರಿತು ಚಿಂತಿಸುತ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ. ಪರಮೇಶ್ವರ್ ಅವರೇ ತಾವು ಒಂದು ರಾಜ್ಯದ ಗೃಹ ಸಚಿವರು ಸ್ವಾಮಿ, ಕೆಪಿಸಿಸಿ ಅಧ್ಯಕ್ಷರು ಮಾತ್ರವಲ್ಲ. ಆ ಮೂಡ್ನಿಂದ ಹೊರಬನ್ನಿ. ನಿಮ್ಮ ಸ್ಥಾನಕ್ಕೆ ಒಂದು ಗೌರವ, ಘನತೆ ಹಾಗೂ ಜವಾಬ್ದಾರಿಯಿದೆ. ಆದರೆ, ಅದನ್ನೆಲ್ಲಾ ಮರೆತು ಸಿದ್ಧರಾಮಯ್ಯ ಹಾಗೂ ಉಗ್ರಪ್ಪ ಅವರುಗಳ ರೀತಿ ಇಂತಹ ಪೂರ್ವಾಗ್ರಹ ಪೀಡಿತ ಹೇಳಿಕೆಗಳನ್ನು ನೀಡಲು ಆರಂಭಿಸಿದ್ದೀರಿ ಎಂದರೆ ನಿಮ್ಮ ಮೇಲಿರುವ ಗೌರವ ಯಾಕೋ ಕರಗುತ್ತಿದೆ.
ಈ ಕಾಂಗ್ರೆಸ್ ಹಾಗೂ ಎಡಪಂಥೀಯರಿಗೆ ಎಲ್ಲ ವಿವಾದಗಳಲ್ಲಿ ಆರ್ಎಸ್ಎಸ್ನ್ನು ಎಳೆದು ತರಲಿಲ್ಲ ಎಂದರೆ ಸಮಾಧಾನವಾಗುವುದಿಲ್ಲ ಎಂದು ತೋರುತ್ತದೆ.
ಈಗ ಬೆಂಗಳೂರು ಗಲಾಟೆ ವಿಚಾರವನ್ನೇ ನೋಡೋಣ. ಇಲ್ಲಿ ಆರ್ಎಸ್ಎಸ್ ಕೈವಾಡದ ಶಂಕೆಯನ್ನು ವ್ಯಕ್ತಪಡಿಸಿರುವ ತಾವು ಗೃಹ ಸಚಿವರಾಗಿ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿ:
1. ನಿಯಮಗಳ ಪ್ರಕಾರ 50 ರಿಂದ 100 ಜನರ ಗುಂಪು ಗಲಭೆ ಮಾಡಿದರೆ ಲಘು ಲಾಠಿ ಪ್ರಹಾರ ನಡೆಸಬಹುದು. 50-250 ಮಂದಿ ಗಲಭೆ ಮಾಡಿದರೆ ಲಾಠಿ ಪ್ರಹಾರ ನಡೆಸಬಹುದು. 250-500 ಮಂದಿ ಗಲಭೆ ಮಾಡಿದರೆ ಟಿಯರ್ ಗ್ಯಾಸ್ ಹಾಗೂ ವಾಟರ್ ಜೆಟ್ ಬಳಸಿ ನಿಯಂತ್ರಣ ಮಾಡಬೇಕು. ಆದರೆ, ಲಘು ಲಾಠಿ ಪ್ರಹಾರವೊಂದನ್ನು ಹೊರತುಪಡಿಸಿ, ಇನ್ನಾವುದನ್ನೂ ಮಾಡದೇ ಏಕಾಏಕಿ ಗೋಲಿಬಾರ್ ಮಾಡಿದ್ದು ಏಕೆ?
2. ಹೆಗ್ಗನಹಳ್ಳಿಯಲ್ಲಿ ಹೊಯ್ಸಳ ವಾಹನಕ್ಕೆ ಬೆಂಕಿ ಹಚ್ಚುವಾಗಲೂ ಮೇಲಿನ ಯಾವುದೇ ಕ್ರಮ ಕೈಗೊಳ್ಳದೇ ಗೋಲಿಬಾರ್ ಮಾಡಲು ಆದೇಶ ನೀಡಿದ ಮಹಾನುಭಾವರು ಯಾರು?
3. ಕಾವೇರಿ ತೀರ್ಪು ವ್ಯತಿರಿಕ್ತವಾಗಿ ಬರುತ್ತದೆ ಎಂದು ನಾರಿಮನ್ ಮೊದಲೇ ಹೇಳಿದ್ದರು ಎಂದು ಸಿದ್ಧರಾ ಮಯ್ಯ ಹೇಳಿಕೆ ನೀಡಿದ್ದಾರೆ. ಹೀಗೆ ಗೊತ್ತಿದ್ದ ಮೇಲೆ, ಇದರಿಂದಾಗಿ ಗಲಭೆ ಉಂಟಾಗಬಹುದು ಎಂಬ ಮುಂದಾಲೋಚನೆಯನ್ನು ನೀವು ಮಾಡಲಿಲ್ಲವೇ?
4. ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ ವಿಚಾರದ ತಿಳಿದ ಕೂಡಲೇ, ಅದರ ಪರಿಣಾಮ ರಾಜ್ಯ ದಲ್ಲಿ ಆಗಬಹುದು ಎಂದು ನೀವು ಗ್ರಹಿಸಲಿಲ್ಲವೇ? ಅಲ್ಲದೇ, ಇಂತಹ ವೇಳೆಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ತತಕ್ಷಣವೇ ಸಿಆರ್ಪಿಎಫ್ ಹಾಗೂ ಆರ್ಎಎಫ್ ತುಕಡಿಗಳನ್ನು ನಿಯೋಜಿಸದೇ ತಟಸ್ಥವಾಗಿರಿಸಿದ್ದು ಏಕೆ?
5. ಗಲಭೆಯಲ್ಲಿ ಬಲಿಯಾದವನ ಕುಟುಂಬಕ್ಕೆ ಪರಿಹಾರ ನೀಡಿದ್ದೀರಿ, ಕರ್ತವ್ಯ ಲೋಪದ ಹೆಸರಿನಲ್ಲಿ ನಿಮ್ಮ ತಪ್ಪನ್ನು ಅಧಿಕಾರಿಗಳ ತಲೆಗೆ ಕಟ್ಟುತ್ತಿದ್ದೀರಿ. ಆದರೆ, ಮುಂದಾಗಬಹುದಾದ ಅನಾಹುತಗಳನ್ನು ಊಹಿಸದೇ ತಪ್ಪು ಮಾಡಿರುವ ತಮಗೆ ಹಾಗೂ ತಮ್ಮ ಸರ್ಕಾರಕ್ಕೇನು ಶಿಕ್ಷೆ?
6. ಗಲಭೆಯಲ್ಲಿ ಆರ್ಎಸ್ಎಸ್ ಕೈವಾಡದ ಶಂಕೆ ವ್ಯಕ್ತವಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿಕೆ ಎಂದಿ ದ್ದೀರಿ. ಆದರೆ, ಕಾವೇರಿ ತೀರ್ಪಿನಿಂದ ಗಲಭೆಯಾಗಬ ಹುದು ಎಂದು ಆ ನಿಮ್ಮ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರಲಿಲ್ಲವೇ? ಅಥವಾ ನೀಡಿದ್ದೂ ತಾವು ಸುಮ್ಮನಿದ್ದಿರೇ?
ಗಲಭೆ ನಡೆಯಲಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆ ನೀಡಿಲ್ಲವಾದರೆ ಅದು ನಿಮ್ಮ ಸರ್ಕಾರದ ವೈಫಲ್ಯವೇ ಹೌದು. ಒಂದು ವೇಳೆ ಗುಪ್ತಚರ ಇಲಾಖೆ ಮಾಹಿತಿ ನೀಡಿಯೂ ನೀವು ಮುಂಜಾಗ್ರತೆ ವಹಿಸಿಲ್ಲವಾಗಿದ್ದರೆ ಅದೂ ಸಹ ನಿಮ್ಮ ಸರ್ಕಾರ ವೈಫಲ್ಯವೇ ಹೌದು. ಹೇಗೆ ನೋಡಿದರೂ ಈ ಗಲಭೆ ಪ್ರಕರಣದಲ್ಲಿ ನೀವೇ ಆರೋಪಿಗಳಾಗಬೇಕು. ಹೀಗಿದ್ದಾಗ, ತಮ್ಮ ಪಾಡಿಗೆ ತಾವಿರುವ ಆರ್ಎಸ್ಎಸ್ನ್ನು ಈ ವಿಚಾರದಲ್ಲಿ ಎಳೆದು ತರುವ ಮಟ್ಟಕ್ಕೆ ನೀವು ಇಳಿಯುತ್ತೀರಿ ಎಂದರೆ, ನಿಮ್ಮ ನೈತಿಕತೆ ಎಷ್ಟರ ಮಟ್ಟಿಗೆ ಅಧಃಪತನಕ್ಕೆ ಇಳಿದಿದೆ ಎನ್ನುವುದು ವೇದ್ಯವಾಗುತ್ತದೆ.
Discussion about this post