ವಾಷಿಂಗ್ಟನ್, ಅ.4: ಪಾಕಿಸ್ಥಾನ ಉಗ್ರ ರಾಷ್ಟ್ರ ಎಂದು ಘೋಷಿಸಲು ಈವರೆಗೆ ಬೆಂಬಲ ನೀಡಿದ್ದ ಅಮೆರಿಕಾ ಈಗ ಉಲ್ಟಾ ಹೊಡೆದಿದೆ ಎನ್ನಲಾಗುತ್ತಿದೆ. ಕಾರಣ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ ಶ್ವೇತ ಭವನದ ವೆಬ್ ಸೈಟ್ ಪ್ರಾರಂಭಿಸಿದ್ದ ಆನ್ ಲೈನ್ ಅರ್ಜಿಯನ್ನು ಏಕಾಏಕಿ ಆರ್ಕೈ ವ್ ಪಟ್ಟಿಗೆ ಸೇರಿಸಿದೆ.
ಅಂದರೆ ಇನ್ನು ಮುಂದೆ ಈ ಆನ್ ಲೈನ್ ಅರ್ಜಿಗೆ ಯಾರೂ ಸಹ ಸಹಿ ಹಾಕುವ ಅವಕಾಶ ಇರುವುದಿಲ್ಲ. ಪಾಕಿಸ್ಥಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವುದನ್ನು ಪರಿಗಣಿಸಲು ಆನ್ ಲೈನ್ ಅರ್ಜಿ ಕನಿಷ್ಠ ಸಹಿ ಅಗತ್ಯತೆಗಳನ್ನು ಪೂರೈಸಿಲ್ಲ ಎಂಬ ಕಾರಣ ನೀಡಿದೆ.
ಅಕ್ಟೊಬರ್ 3 ರಂದು ಪ್ರಕಟವಾದ ವರದಿಯ ಪ್ರಕಾರ ಆನ್ ಲೈನ್ ಅರ್ಜಿ ಪ್ರಾರಂಭವಾದ 6 ದಿನಗಳಲ್ಲೇ ಪರಿಗಣಿಸಲು ಅರ್ಹತೆ ಪಡೆಯಲು ಕನಿಷ್ಠ ಸಹಿಗಳನ್ನು ಪಡೆದಿತ್ತು. ಅಲ್ಲದೆ ಈ ವರೆಗೂ ಅರ್ಧ ಮಿಲಿಯನ್ ನಷ್ಟು ಜನರು ಸಹಿ ಹಾಕಿದ್ದಾರೆ ಎಂದು ಹೇಳಲಾಗಿತ್ತು. ಸಹಿ ಸಂಗ್ರಹ ಇದೆ ರೀತಿ ಮುಂದುವರೆದರೆ ಆನ್ ಲೈನ್ ಅರ್ಜಿಗೆ ಸಹಿ ಹಾಕಲು ನೀಡಲಾಗಿರುವ ಗಡುವು ಮುಕ್ತಾಯಗೊಳ್ಳುವ ವೇಳೆಗೆ ಸಹಿ ಸಂಖ್ಯೆ ಒಂದು ಮಿಲಿಯನ್ ದಾಟುತ್ತದೆ ಎಂದೂ ನಿರೀಕ್ಷಿಸಲಾಗಿತ್ತು. ಆದರೆ ಅಮೆರಿಕಾ ಈಗ ಉಲ್ಟಾ ಹೊಡೆದಿದ್ದು, ಕನಿಷ್ಠ ಸಹಿಗಳು ಬಾರದೆ ಇರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಸೇರಿಸಲಾಗಿದೆ ಎಂದು ಒಂದು ಸಾಲಿನ ಸ್ಪಷ್ಟನೆಯನ್ನಷ್ಟೇ ನೀಡಿರುವುದು ಇನ್ನೂ ವಿಚಿತ್ರವಾಗಿದೆ.
ಒಟ್ಟಿನಲ್ಲಿ ಈ ವರೆಗೂ ಪಾಕಿಸ್ಥಾನದ ವಿರುದ್ಧ ಕಠಿಣ ನಿಲುವು ತಳೆದಿರುವಂತೆ ಪೋಸು ಕೊಡುತ್ತಿದ್ದ ಅಮೆರಿಕ ತನ್ನ ದ್ವಂದ್ವ ನಿಲುವನ್ನು ಮತ್ತೆ ಪ್ರದರ್ಶಿಸಿದೆ.
Discussion about this post