Read - < 1 minute
ಬೆಂಗಳೂರು, ಸೆ.20: ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಗಲು ಜವಾಹರ್ಲಾಲ್ ನೆಹರು ಅವರ ದುರಾಸೆಯೇ ಕಾರಣ. ಇದರ ಪರಿಣಾಮವಾಗಿ ದೇಶದಲ್ಲಿ ಕೋಮುಗಲಭೆ ಹೆಚ್ಚಾಗಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಅಬ್ದುಲ್ ಅಜೀಂ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದ ವೇಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಪ್ರಧಾನಿಯಾಗಬೇಕಿತ್ತು. ಆದರೆ, ನೆಹರು ಅವರು ತಮಗೆ ಸ್ಥಾನ ತಪ್ಪಬಹುದೆಂಬ ಭೀತಿಯಿಂದ ಜಿನ್ನಾ ಅವರನ್ನು ಎತ್ತಿಕಟ್ಟಿ ದೇಶ ವಿಭಜನೆ ಮಾಡಿಸಿದರೆಂದು ದೂರಿದರು.
ಕಾಂಗ್ರೆಸ್ ದೇಶದಲ್ಲಿ 70 ವರ್ಷ ಆಳ್ವಿಕೆ ಮಾಡಿದರೂ ನಮ್ಮನ್ನು ಕೇವಲ ವೋಟ್ಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ. ನಮ್ಮ ಸಮುದಾಯಕ್ಕೆ ಯಾವುದೇ ಸಹಾಯ ಮಾಡಲಿಲ್ಲ. ಅಲ್ಪಸಂಖ್ಯಾತರು ಬುದ್ಧಿವಂತರಾದರೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಾಗುತ್ತದೆ ಎಂದು ನಮ್ಮನ್ನು ತುಳಿಯುವ ಪ್ರಯತ್ನ ಮಾಡಿದರು. ಬೆಂಕಿ ಹಚ್ಚುವ ಪ್ರಯತ್ನದಲ್ಲಿ ಕಾಂಗ್ರೆಸಿಗರು ನಿಸ್ಸೀಮರೆಂದು ಆರೋಪಿಸಿದರು.
ನಾನು ಅನೇಕ ಸಂಶೋಧನೆಗಳನ್ನು ನಡೆಸಿ ವರದಿ ಸಿದ್ಧಪಡಿಸಿದ್ದೇನೆ. ದೇಶದಲ್ಲಿ ಮತೀಯ ಗಲಭೆಗೆ ಕಾಂಗ್ರೆಸ್ ಮುಖಂಡರೇ ಕಾರಣ. ಯಾವ ಸಮುದಾಯಗಳು ಕೂಡ ಒಗ್ಗಟ್ಟಾಗಿ ಬದುಕಬಾರದು ಎಂಬುದು ಅವರ ಒಂದಂಶದ ಕಾರ್ಯಕ್ರಮ. ಒಡೆದಾಳುವ ನೀತಿಯಿಂದ ಕಾಂಗ್ರೆಸ್ ಇಂದು ಕೇವಲ 44 ಸ್ಥಾನಗಳಿಗೆ ಬಂದು ಕುಳಿತಿದೆ ಎಂದು ಹೇಳಿದರು.
ಇಂದು ನಮಗೆ ಈ ಪಕ್ಷದಲ್ಲಿ ಉನ್ನತ ಸ್ಥಾನ ಸಿಕ್ಕಿದೆ. ಇಲ್ಲಿನ ಅಣ್ಣ-ತಮ್ಮಂದಿರಂತೆ ಇದ್ದೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 10 ಸ್ಥಾನಗಳು ನಮಗೆ ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಲ್ಪಸಂಖ್ಯಾತರ ಸಮಾವೇಶವನ್ನು ನಗರದ ಪ್ಯಾಲೆಸ್ ಗ್ರೌಂಡ್ ನಲ್ಲಿ ಆಯೋಜಿಸಲಾಗುತ್ತದೆ. ಮಾನಪ್ಪಾಡಿ ವರದಿಯನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಗೋವಿಂದ ಕಾರಜೋಳ ಮಾತನಾಡಿ, ಮುಸ್ಲಿಮರಿಗೆ ಕಾಂಗ್ರೆಸ್ ಶಾಪವಾಗಿದೆ. ಅದನ್ನು ಎಂದಿಗೂ ನಂಬಬೇಡಿ ಎಂದ ಅವರು, 57 ವರ್ಷ ಕಾಂಗ್ರೆಸ್ ನ ಒಂದೇ ಕುಟುಂಬ ಆಡಳಿತ ನಡೆಸಿದೆ. ಗರೀಬಿ ಹಠಾವೋ ಎಂದು ಇಂದಿರಾಗಾಂಧಿ ಘೋಷಿಸಿದ್ದರಾದರೂ ಅಲ್ಪ ಸಂಖ್ಯಾತರು, ದಲಿತರು, ಬುಡಕಟ್ಟು ಜನಾಂಗಗಳ ಸ್ಥಿತಿಗತಿ ಇಂದಿಗೂ ಅಭಿವೃದ್ಧಿಯಾಗಿಲ್ಲ, ಶಿಕ್ಷಣ ಕೊಡಲಿಲ್ಲ, ದುಡಿಯುವ ಕೈಗೆ ಉದ್ಯೋಗ ಕೊಡಲಿಲ್ಲ. ಕೇವಲ ಒಡೆದಾಳುವ ನೀತಿ ಅನುಸರಿಸಿದ ಕಾಂಗ್ರೆಸಿಗರು ಬ್ರಿಟಿಷರಿಗಿಂತ ಕೆಟ್ಟವರು ಎಂದು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ ಯೋಜನೆ, ಮಕ್ಕಳಿಗೆ ಸೈಕಲ್ ವಿತರಣೆ, ಎಸ್ಸಿ-ಎಸ್ಟಿ ವಸತಿ ಶಾಲೆ, ಎಲ್ಲ ಸಮುದಾಯಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿತ್ತು ಎಂದು ಹೇಳಿದರು.
ಸಂಸದ ಪಿ.ಸಿ. ಮೋಹನ್ ಮಾತನಾಡಿ, ಸಿದ್ದರಾಮಯ್ಯ ಸಾಕು, ಯಡಿಯೂರಪ್ಪ ಬೇಕು. ಎಲ್ಲ ಭಾಗ್ಯಗಳನ್ನೂ ಬಿಟ್ಟು ಬಂದ್ ಭಾಗ್ಯ ಕೊಟ್ಟಿರುವ ಕಾಂಗ್ರೆಸಿಗರ ಆಡಳಿತ ವೈಖರಿ ಇದರಿಂದ ತಿಳಿಯುತ್ತಿದೆ ಎಂದು ಹರಿಹಾಯ್ದರು.
ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇವೆ ಎಂಬುದು ಸುಳ್ಳು. ಈ ಸುಳ್ಳು ಹೇಳುತ್ತಲೇ ಇಂದು ಅವರು 44 ಸ್ಥಾನಗಳಿಗೆ ಇಳಿದಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದಾಗಿ ಹೇಳಿದರು.
Discussion about this post