ನವದೆಹಲಿ: ಪಾಕ್ ಸೇನೆ ಹಾಗೂ ಪಾಕ್ ಪ್ರೇರಿತ ಉಗ್ರದಿಂದ ಬೇಸತ್ತು ಹೋಗಿರುವ ಭಾರತ ಸರ್ಕಾರ, ಪಾಕ್‌ಗೆ ಪಾಠ ಕಲಿಸಲು ಪರೋಕ್ಷ ಹೊಡೆತ ನೀಡಲು ಚಿಂತನೆ ನಡೆಸಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತದ ವಿರುದ್ಧ ಭಯೋತ್ಪಾದನೆಯನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿರುವ ಪಾಕಿಸ್ತಾನ, ಉರಿ ದಾಳಿಯಲ್ಲೂ ತನ್ನ ಪಾತ್ರವನ್ನು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ೫೬- ವರ್ಷಗಳ ಹಳೆಯ ಇಂಡಸ್ ಇಂಡಸ್ ನೀರು ಒಪ್ಪಂದವನ್ನು ಪರಾಮರ್ಶೆಗೆ ಒಳಪಡಿಸುವುದರ ಬಗ್ಗೆ ಸುಳಿವು ನೀಡಿದೆ ಎನ್ನಲಾಗಿದೆ.
ಈ ಕುರಿತಂತೆ ಮಾತನಾಡಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್, ಪಾಕಿಸ್ತಾನಕ್ಕೆ ಸೌಹಾರ್ದತೆಯ ದೃಷ್ಟಿಯಿಂದ ನಿರಿ ಹಂಚಿಕೆ ಮಾಡಲಾಗುತ್ತಿದೆ ಎಂಬುದನ್ನು ಇಂಡಸ್ ನೀರು ಒಪ್ಪಂದದಲ್ಲೇ ಸ್ಪಷ್ಟಪಡಿಸಲಾಗಿದೆ ಆದ್ದರಿಂದ ಪರಸ್ಪರ ನಂಬಿಕೆ ಇಂತಹ ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.
ಆದರೆ, ಈ ಕುರಿತ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಅವರು, ರಾಜತಾಂತ್ರಿಕ ವ್ಯವಹಾರ ಹಾಗೂ ನಡೆಗಳ ಕುರಿತಾಗಿ ಎಲ್ಲ ವಿಚಾರಗಳನ್ನು ಬಹಿರಂಗವಾಗಿ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಏನಿದು ಒಪ್ಪಂದ?
ಇಂಡಸ್ ಪಾತ್ರದಲ್ಲಿ ಹರಿಯುವ ಬಿಯಾಸ್, ರಾವಿ ಮತ್ತು ಸಟ್ಲೇಜ್ ನದಿ ನೀರನ್ನು ಪಾಕಿಸ್ತಾನಕ್ಕೆ ಸೌಹಾರ್ದತೆಯ ದೃಷ್ಟಿಯಿಂದ ಬಿಡುಗಡೆ ಮಾಡಲು ೧೯೬೦ರಲ್ಲಿ ಅಂದಿನ ಪ್ರಧಾನಿ ಜವಾರ್ಹ ಲಾಲ್ ನೆಹರು ಹಾಗು ಪಾಕ್ ಅಧ್ಯಕ್ಷ ಜನರಲ್ ಅಯೂಬ್ ಖಾನ್ ನಡುವೆ ಸಿಂಧು ನದಿ ನೀರು ಹಂಚಿಕೆ ಒಪ್ಪಂದ ನಡೆದಿತ್ತು. ಭಾರತ- ಪಾಕಿಸ್ತಾನದ ನಡುವೆ ಯುದ್ಧ ನಡೆದ ಸಂದರ್ಭದಲ್ಲೂ ಸಹ ಈ ಒಪ್ಪಂದಕ್ಕೆ ಯಾವುದೇ ರೀತಿಯ ಕುತ್ತು ಬಂದಿರಲಿಲ್ಲ. ಆದರೆ, ಈಗ ಈ ವಿಚಾರ ಪರಾಮರ್ಷೆಗೆ ಒಳಪಡುವ ಸಾಧ್ಯತೆಯಿದೆ.
Discussion about this post