ಬಹಳ ಹಿಂದಿನ ಸಮಯದ ಘಟನೆ.ಒಂದು ರಾಜ್ಯದಲ್ಲಿ ಒಬ್ಬ ದೊಡ್ಡ ಡಕಾಯಿತನಿದ್ದ.ಆತನ ಹೆಸರು ರತ್ನಾಕರ.ಆ ಡಕಾಯಿತನನ್ನು ಕಂಡರೆ ರಾಜ್ಯವೇ ನಡುಗುತ್ತಿತ್ತು.ಆತನ ಲೂಟಿ,ಹಿಂಸೆ ಅಪರಿಮಿತವಾಗಿತ್ತು.ರಾತ್ರಿಯಾದರೆ ಸಾಕು,ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ದೋಚುವುದು,ವಿರೋಧಿಸಿದರೆ ಅವರನ್ನು ಕೊಲ್ಲುವುದು ಡಕಾಯಿತನ ದಿನನಿತ್ಯದ ಹವ್ಯಾಸವಾಗಿತ್ತು.
ಒಂದು ಬಾರಿ ದೇವರ್ಷಿ ನಾರದರು ನಾರಾಯಣಮಂತ್ರವನ್ನು ಜಪಿಸುತ್ತಾ ಕಾಡಿನ ಹಾದಿಯಲ್ಲಿ ಸಾಗುತ್ತಿದ್ದರು.ಅವರ ಎದುರಾಗಿ ಹಲವರು ಓಡಿ ಬರುತ್ತಿದ್ದರು.ನಾರದರು ಏನಾಯಿತೆಂದು ಕೇಳುತ್ತಾರೆ.ಆಗ ಜನರು “ದಾರಿಯಲ್ಲಿ ರತ್ನಾಕರ ಬರುತ್ತಿದ್ದಾನೆ.ಆತ ನಮ್ಮನ್ನು ಕಂಡರೆ ದೋಚುತ್ತಾನೆ ಅಥವಾ ಸಾಯಿಸುತ್ತಾನೆ.ನೀವೂ ಸಹ ನಿಮ್ಮ ಪ್ರಾಣ ಉಳಿಸಿಕೊಳ್ಳಿ” ಎಂದು ಹೇಳಿ ವೇಗವಾಗಿ ಓಡಿ ಹೋದರು.
ಆದರೂ ನಾರದರು ಮುಂದೆ ಸಾಗಿದರು.ತನ್ನೊಂದಿಗೆ ನಾರಾಯಣನಿದ್ದಾನೆಂಬ ಅಚಲ ನಂಬಿಕೆ ನಾರದರಿಗಿತ್ತು.ದೇವರನ್ನು ಅತಿಯಾಗಿ ನಂಬಿದವನಿಗೆ ಯಾರ ಭಯ..?ಅನಾಥರಕ್ಷಕ ಭಗವಂತ.ಆತನ ಮೇಲೆ ನಿಷ್ಕಲ್ಮಶ ಭಕ್ತಿಯಿದ್ದರೆ ಜೀವನದಲ್ಲಿ ಯಾವ ಕಷ್ಟವನ್ನಾದರೂ ಎದುರಿಸಬಹುದು.ಅಣತಿ ದೂರ ಸಾಗಿದ ಬಳಿಕ ರತ್ನಾಕರ ತನ್ನ ಸಂಗಡಿಗರೊಂದಿಗೆ ಬಂದು ನಾರದರನ್ನು ಸುತ್ತುವರಿದ.
ರತ್ನಾಕರ – ನಾನು ರತ್ನಾಕರ , ದೊಡ್ಡ ಡಕಾಯಿತ.
ನಾರದರು – (ಮುಗುಳ್ನಗುತ್ತಾ) ನಾನು ನಾರದ,ದೇವರ್ಷಿ ನಾರದ.ನಿನ್ನ ಅತಿಥಿ ಹಾಗೂ ನಾನು ಸದಾ ನಿರ್ಭಯಿ.ನೀನೂ ಸಹ ನಿರ್ಭಯಿಯೇ..?
ರತ್ನಾಕರ – ಏನು ಹೇಳುತ್ತಿರುವೆ ನೀನು ?
ನಾರದ – ಹಾಂ..ನನಗೆ ಪ್ರಾಣಭಯವಿಲ್ಲ,ಅಸಫಲತೆಯ ಭಯವಿಲ್ಲ,ನಾಳೆಯ ಭಯವಿಲ್ಲ,ಹಾಗೂ ಯಾರ ಭಯವೂ ನನಗಿಲ್ಲ.ಈಗ ಹೇಳು,ನೀನೂ ಸಹ ನನ್ನಂತೆಯೇ ನಿರ್ಭಯಿಯಾ..?
ರತ್ನಾಕರ – ನಾನೂ ಸಹ ನಿರ್ಭಯನೇ..!! ಪ್ರಾಣದ,ಅಸಫಲತೆಯ,ನಾಳೆಯ,ಕಳಂಕದ ಭಯ ನನಗೂ ಇಲ್ಲ.
ನಾರದ – ಹಾಗಾದರೆ ನೀನೇಕೆ ಈ ಅರಣ್ಯದಲ್ಲಿ ಅವಿತುಕೊಂಡಿರುವೆ..? ರಾಜನೆಂದರೆ ನಿನಗೆ ಭಯವೇ..?
ರತ್ನಾಕರ – ಇಲ್ಲ.
ನಾರದ – ಪ್ರಜೆಗಳೆಂದರೆ ನಿನಗೆ ಭಯವೇ..?
ರತ್ನಾಕರ – ಇಲ್ಲ.
ನಾರದ – ಪಾಪವೆಂದರೆ ನಿನಗೆ ಭಯವೇ..?
ರತ್ನಾಕರ – ಇಲ್ಲ.
ನಾರದ – ಹಾಗಾದರೆ ಇಲ್ಲಿ ಅವಿತುಕೊಂಡಿರುವುದೇಕೆ..?
ಇದನ್ನು ಕೇಳಿ ರತ್ನಾಕರ ಕಕ್ಕಾಬಿಕ್ಕಿಯಾದ.ಉತ್ತರಿಸಲು ಕಷ್ಟವಾಯಿತು.ನಾರದರನ್ನು ದುರುಗುಟ್ಟಿ ನೋಡತೊಡಗಿದ.
ನಾರದ – ನಾನು ಉತ್ತರಿಸುತ್ತೇನೆ.ನೀನು ಮಾಡುತ್ತಿರುವ ಪಾಪಕಾರ್ಯಗಳು ನಿನ್ನನ್ನು ಹೆದರಿಸುತ್ತಿವೆ.
ರತ್ನಾಕರ – (ನಗುತ್ತಾ) ಅಯ್ಯೋ..!! ನಿಮ್ಮ ಈ ಮಾತುಗಳಿಂದ ನನ್ನನ್ನು ಭಯಪಡಿಸಲು ಯತ್ನಿಸುತ್ತಿದ್ದೀರಿ.ನಾನು ಪಾಪಕ್ಕೆ,ಪುಣ್ಯಕ್ಕೆ,ದೇವತೆಗಳಿಗೆ,ದಾನವರಿಗೆ,ರಾಜನಿಗೆ,ಪ್ರಜೆಗಳಿಗೆ,ದಂಡವಿಧಾನಗಳಿಗೆ ಎಂದೂ ಹೆದರುವುದಿಲ್ಲ.ನಾನು ರಾಜ್ಯಕ್ಕೆ ಹಾಗೂ ಸಮಾಜಕ್ಕೆ ದ್ರೋಹ ಮಾಡುತ್ತಿದ್ದೇನೆ,ಹಾಗಾಗಿ ಕಾಡಿನಲ್ಲಿ ವಾಸಿಸುತ್ತಿದ್ದೇನೆಯೇ ಹೊರತು ಭಯದಿಂದಲ್ಲ.
ನಾರದ – ಸರಿ ಯಾರಿಗೋಸ್ಕರ ಇಂತಹ ಪಾಪಕಾರ್ಯಗಳನ್ನು ಮಾಡುತ್ತಿರುವೆ..?
ರತ್ನಾಕರ – ನನ್ನ ಕುಟುಂಬಕ್ಕಾಗಿ.ನನ್ನ ಪತ್ನಿ ಮಕ್ಕಳು ಸುಖವಾಗಿರಬೇಕೆಂದು.
ನಾರದ – ನಿನ್ನ ಪತ್ನಿ ಮಕ್ಕಳೂ ನಿನ್ನ ಪಾಪಕಾರ್ಯಗಳಲ್ಲಿ ಸಹಭಾಗಿಗಳಾ..?
ರತ್ನಾಕರ – (ನಗುತ್ತಾ) ನಿಜವಾಗಲೂ ನಾನು ಮಾಡುತ್ತಿರುವ ಕಾರ್ಯಗಳೆಲ್ಲಾ ಅವರಿಗಾಗಿಯೇ.ಅವರ ಸುಖಕ್ಕೆಂದೇ.ನಿಶ್ಚಿತವಾಗಲೂ ಅವರು ನನ್ನ ಕಾರ್ಯಗಳಲ್ಲಿ ಸಹಭಾಗಿಗಳೇ.
ನಾರದ – ಸರಿ,ನೀನು ಮಾಡುತ್ತಿರುವ ಪಾಪಕಾರ್ಯಗಳು ಸರಿಯೇ..?ನಿನ್ನ ಪಾಪಕಾರ್ಯಗಳಲ್ಲಿ ನಿನ್ನ ಸಂಬಂಧಿಕರು ಪಾಲುದಾರರೇ..? ಎಂದು ನಿನ್ನ ಪತ್ನಿ,ಮಕ್ಕಳು,ತಂದೆ-ತಾಯಿ,ಸಂಬಂಧಿಕರಲ್ಲಿ ಕೇಳಿಕೊಂಡು ಬಾ.
ರತ್ನಾಕರ – ಈಗಲೇ ಹೋಗಿ ಕೇಳಿಕೊಂಡು ಬರುತ್ತೇನೆ.
ತನ್ನ ಸಂಗಡಿಗರಿಗೆ ನಾರದರನ್ನು ಅಲ್ಲಿಯೇ ಬಂಧಿಸಲು ಹೇಳಿ ರತ್ನಾಕರ ತನ್ನ ವಾಸ್ತವ್ಯಕ್ಕೆ ತೆರಳುತ್ತಾನೆ.ಪತ್ನಿಯ ಹತ್ತಿರ ಹೋಗಿ “ನಾನು ಮಾಡುತ್ತಿರುವುದು ಪಾಪಕಾರ್ಯವೇ..?ಒಂದೊಮ್ಮೆ ಹೌದಾದರೆ ನೀನೂ ಸಹ ಈ ಪಾಪಕಾರ್ಯದಲ್ಲಿ ಭಾಗಿಯಾಗಲು ಬಯಸುತ್ತೀಯಾ ?” ಎಂದು ಕೇಳುತ್ತಾನೆ.
ಪತ್ನಿ – ಇಲ್ಲ ಸ್ವಾಮೀ,ನಾನು ನಿಮ್ಮ ಸುಖ-ದುಃಖಗಳಲ್ಲಿ ಭಾಗಿಯಾಗುವ ಸಂಕಲ್ಪ ಮಾಡಿದ್ದೇನೆಯೇ ಹೊರತು ಪಾಪಕಾರ್ಯಗಳಲ್ಲಲ್ಲ.
ರತ್ನಾಕರ ಸ್ತಬ್ಧನಾದ.ಪುನಃ ತನ್ನ ಅಂಧ ಪಿತನ ಹತ್ತಿರ ಹೋಗಿ “ಪಿತಾಜಿ ನನ್ನ ಕಾರ್ಯಗಳಲ್ಲಿ ನೀವು ಭಾಗಿಯಾಗಲು ಬಯಸುತ್ತೀರಾ”
ಪಿತ – ಇಲ್ಲ ಮಗನೇ..ಇದು ನೀನು ಸಂಪಾದನೆಗಾಗಿ ಆಯ್ದುಕೊಂಡಿರುವ ವಾಮಮಾರ್ಗವೇ ಹೊರತು ಇನ್ನೇನಲ್ಲ.ನಾನೂ ನಿನ್ನ ಪಾಪಕಾರ್ಯಗಳಲ್ಲಿ ಭಾಗಿಯಾಗಲಾರೆ”
ಇದನ್ನು ಕೇಳಿ ರತ್ನಾಕರ ದುಃಖಿತನಾದ.ನಾನೆಂತಹ ಘೋರಕಾರ್ಯದಲ್ಲಿ ತೊಡಗಿದ್ದೇನೆಂಬ ಅರಿವಾಯಿತು.ತನ್ನ ಪಾಪಕಾರ್ಯಗಳಿಂದ ಯಾರನ್ನು ಸುಖವಾಗಿರಿಸಲು ಯತ್ನಿಸಿದ್ದನೋ ಅವರ್ಯಾರೂ ರತ್ನಾಕರನನ್ನು ಬೆಂಬಲಿಸಲಿಲ್ಲ.ಪಾಪಿಗಳಿಗೆ ರಕ್ಷಕರು ಯಾರಿಲ್ಲವೆಂಬ ಜ್ಞಾನೋದಯವಾಯಿತು.ನಿಧಾನವಾಗಿ ನಾರದರಿದ್ದಲ್ಲಿಗೆ ಬಂದ.
ನಾರದ – ನಿನ್ನ ಸಂಗಡಿಗರು ನನ್ನನ್ನೊಬ್ಬನನ್ನೇ ಬಿಟ್ಟು ಎಲ್ಲೋ ಹೊರಟುಹೋದರು ರತ್ನಾಕರ.
ರತ್ನಾಕರ ನಾರದರಿಗೆ ಸಾಷ್ಠಾಂಗ ನಮಸ್ಕಾರ ಮಾಡಿದ.”ಕ್ಷಮಿಸಿ ದೇವರ್ಷಿಗಳೇ ಜೀವನದಲ್ಲಿ ನಾನು ಒಂಟಿಯಾಗಿಬಿಟ್ಟೆ”ದುಃಖಿತನಾದ.
ನಾರದ – ಇಲ್ಲ ರತ್ನಾಕರ..ನೀನೇ ನಿನ್ನ ಮಿತ್ರ,ನೀನೇ ನಿನ್ನ ಶತ್ರು.ನಿನ್ನ ಹಳೆಯ ಸಂಸಾರವನ್ನು ನೀನೆ ರಚಿಸಿಕೊಂಡಿದ್ದೆ.ಹೊಸಸಂಸಾರವನ್ನೂ ನೀನೆ ರಚಿಸಿಕೊಳ್ಳಬೇಕು.ಆದ್ದರಿಂದ ದುಃಖಿಸಬೇಡ.ಎದ್ದೇಳು,ನಿನ್ನ ಭವಿಷ್ಯವನ್ನು ರೂಪಿಸಿಕೊಳ್ಳುವ ಮಾರ್ಗವನ್ನು ಹುಡುಕು”ಎಂದು ಉಪದೇಶಿಸಿ ನಾರದರು ಮುಂದೆ ತೆರಳುತ್ತಾರೆ.
ಈ ಘಟನೆಯ ನಂತರ ಡಕಾಯಿತ ರತ್ನಾಕರನ ವ್ಯಕ್ತಿತ್ವ ಸಂಪೂರ್ಣವಾಗಿ ಬದಲಾಯಿತು.ಪಾಪಮಾರ್ಗವನ್ನು ತ್ಯಜಿಸಿ ಪುಣ್ಯಮಾರ್ಗವನ್ನು ಅನುಸರಿಸಿದ.ಆಧ್ಯಾತ್ಮಸಾಧನೆಗೈದು ಸಂಪೂರ್ಣ ರಾಮಕಥೆಯನ್ನು ಬರೆದು ಮಹರ್ಷಿ ವಾಲ್ಮೀಕಿಯಾದ.
ಈ ಕಥೆಯ ಉದ್ದೇಶ ಇಷ್ಟೇ.ವಾಮಮಾರ್ಗಗಳನ್ನು ಅನುಸರಿಸಿ ಜೀವನದಲ್ಲಿ ಸಂಪತ್ತನ್ನು ಸಂಪಾದಿಸಬಹುದು.ಆದರೆ ಗಳಿಸಿದ ಪಾಪದಲ್ಲಿ ಪಾಲುದಾರರು ಯಾರಿರುವುದಿಲ್ಲ.ಅನ್ಯಾಯ,ಅಕ್ರಮಗಳಿಂದ ಗಳಿಸಿದ ಸಂಪತ್ತು ಬಹುಕಾಲ ಇರುವುದೂ ಇಲ್ಲ.
Discussion about this post