Read - 3 minutes
ಬೆಂಗಳೂರು, ಸೆ.3: ರಾಜಕಾಲುವೆ ಸೇರಿದಂತೆ ವಿವಿಧ ಸರ್ಕಾರಿ ಭೂಮಿಗಳ ಒತ್ತುವರಿ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿಯೇ ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯನ್ನು ಅಂಗೀಕರಿಸುವ ಮೂಲಕ ಪ್ರಭಾವಿ ಒತ್ತುವರಿದಾರರ ವಿರುದ್ಧವೂ ಗದಾಪ್ರಹಾರ ನಡೆಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು ಒತ್ತುವರಿದಾರರು ಯಾರು ಎಂಬ ಕುರಿತು ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆ ನಿಖರತೆ ಹೊಂದಿರುವುದರಿಂದ ಅದನ್ನು ರಾಜ್ಯದಲ್ಲೂ ಅಂಗೀಕರಿಸುವುದು ಅನಿವಾರ್ಯ ಎಂದು ಹೇಳಲಾಗುತ್ತಿದೆ.
ರಾಜಾಕಾಲುವೆ ಒತ್ತುವರಿಯಿಂದ ಬಡವರ ಮನೆಗಳನ್ನು ಮಾತ್ರ ತೆರವುಗೊಳಿಸುತ್ತೀರಿ. ಆದರೆ ಶ್ರೀಮಂತರು, ಪ್ರಭಾವಿಗಳ ಗೋಜಿಗೆ ಹೋಗುವುದಿಲ್ಲ ಎಂಬ ಜನಾಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಒತ್ತುವರಿದಾರರು ಯಾರು? ಎಂಬ ಕುರಿತು ಸ್ಪಷ್ಟ ವ್ಯಾಖ್ಯಾನ ನೀಡಿರುವ ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯನ್ನು ರಾಜ್ಯದಲ್ಲೂ ಅಂಗೀಕರಿಸುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
1908 ಹಾಗೂ 1945 ರ ಕಂದಾಯ ಇಲಾಖೆ ಸರ್ವೆಗಳ ಆಧಾರದ ಮೇಲೆ ಒತ್ತುವರಿ ತೆರವು ಕಾರ್ಯವನ್ನು ನಡೆಸಲು ಮುಂದಾಗಿರುವುದರಿಂದ ಸ್ವತ: ಒತ್ತುವರಿ ಭೂಮಿ ಯಾವುದು ಎಂಬುದರ ಕುರಿತು ಸರ್ವೆ ಅಧಿಕಾರಿಗಳೂ ಗೊಂದಲದಲ್ಲಿದ್ದಾರೆ.
ಇದರ ಬೆನ್ನಲ್ಲೇ ಕೆಲ ಸರ್ವೆಯರ್ ಗಳು ಸೇರಿದಂತೆ ಹಲ ಅಧಿಕಾರಿಗಳು ಕಂಡ ಕಂಡಲ್ಲಿ ಹೋಗಿ ಸರ್ವೆ ಕಾರ್ಯ ಮಾಡುವುದು,ಈ ಮನೆಯನ್ನು ಒಡೆಯುವುದು ಅನಿವಾರ್ಯ ಎಂದು ಜನರನ್ನು ಆತಂಕಕ್ಕೊಳಪಡಿಸುವ ಕುರಿತು ಸರ್ಕಾರಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ತನ್ನ ನಿಲುವನ್ನು ಸ್ಪಷ್ಟ ಪಡಿಸಿದೆ.
ಮಳೆ ಬಂದಾಗ ಸರಾಗವಾಗಿ ನೀರು ಹರಿಯಲು ಅಡ್ಡಿಯಾಗುವ ಚರಂಡಿ, ರಾಜಕಾಲುವೆ ಸೇರಿದಂತೆ ಮೂರು ಹಂತದ ಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಿದ ಮನೆಗಳನ್ನು ಮಾತ್ರ ತೆರವು ಮಾಡುವಂತೆ ಆದೇಶಿಸಿದೆ.
ಹೀಗಾಗಿ ಕಂಡ ಕಂಡಲ್ಲಿ ಹೋಗಿ ಜನರನ್ನು ಭಯಭೀತಗೊಳಿಸುವ, ಲಕ್ಷಾಂತರ ರೂಗಳನ್ನು ಅವರಿಂದ ದೋಚುವ ಪ್ರವೃತ್ತಿಗೆ ಕಡಿವಾಣ ಬಿದ್ದಂತಾಗಿದೆ. ಆದರೂ ಒತ್ತುವರಿದಾರರ ವಿಷಯದಲ್ಲಿ ನಿಖರ ವ್ಯಾಖ್ಯಾನದ ಅಗತ್ಯವಿರುವುದರಿಂದ ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯನ್ನು ಅಂಗೀಕರಿಸಲು ಇದೀಗ ಸರ್ಕಾರ ಮುಂದಾಗಿದೆ.
ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯಲ್ಲಿ ಯಾವ್ಯಾವ ಸ್ವರೂಪದ ಭೂಮಿಯಲ್ಲಿ ಮನೆ ಕಟ್ಟಬಾರದು ಎಂದು ಸ್ಪಷ್ಟವಾಗಿ ಹೇಳಿದ್ದು ಈ ಹಿನ್ನೆಲೆಯಲ್ಲಿ ಅದನ್ನು ಅಂಗೀಕರಿಸಿದರೆ ಒತ್ತುವರಿ ತೆರವಿಗೆ ಮುನ್ನವೇ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲು ಪ್ರಭಾವಿಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಿಖರತೆಯೊಂದಿಗೆ ಮುಂದುವರಿಸಬಹುದು ಎಂಬುದು ರಾಜ್ಯ ಸರ್ಕಾರದ ಯೋಚನೆ.
ಈ ಮಧ್ಯೆ ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆ ಜಾರಿಗೆ ಬಂದರೆ ನಮ್ಮಲ್ಲಿರುವ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಗಳು ರೈತರಿಂದ ನೇರವಾಗಿ ಭೂಮಿ ಖರೀದಿಸಿ, ನಿವೇಶನ ರೂಪಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯ ವ್ಯಾಪ್ತಿಯಿಂದ ನಮ್ಮನ್ನು ದೂರವಿಡಿ ಎಂದು ಕೇಂದ್ರ ಸರ್ಕಾರವನ್ನು ಕೋರುವುದಾಗಿ ಸಹಕಾರ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್ ಈ ಹಿಂದೆ ಹೇಳಿದ್ದರು.
ಕೇಂದ್ರ ಸರ್ಕಾರದ ರಿಯಲ್ ಎಸ್ಟೇಟ್ ಕಾಯ್ದೆ ಜಾರಿಗೆ ಬಂದರೆ ಸರ್ಕಾರಿ ಭೂ ವಿತರಣಾ ಸಂಸ್ಥೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಿವೇಶನ ಒದಗಿಸುತ್ತಿರುವ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಗಳು ಸಂಪೂರ್ಣವಾಗಿ ಕೇಂದ್ರದ ಹಿಡಿತಕ್ಕೆ ಬರುತ್ತವೆ. ಅವರ ಮೇಲೆ ರಾಜ್ಯ ಸರ್ಕಾರದ ನಿಯಂತ್ರಣವೂ ಇಲ್ಲದಂತಾಗುತ್ತದೆ ಎಂದವರು ಸ್ಪಷ್ಟವಾಗಿ ತಿಳಿಸಿದ್ದರು.
ಆದರೆ ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯನ್ನು ರಾಜ್ಯದಲ್ಲಿ ಅಂಗೀಕರಿಸದೆ ಹೋದರೆ ಸರ್ಕಾರಿ ಭೂಮಿ ಒತ್ತುವರಿ ಕಾರ್ಯ ತೆರವುಗೊಳಿಸಲು ಸಾಧ್ಯವೇ ಇಲ್ಲ ಎಂದಿರುವ ಮೂಲಗಳು ಈಗಾಗಲೇ ಕಾನೂನು ತಜ್ಞರು ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯನ್ನು ರಾಜ್ಯದಲ್ಲೂ ಅಂಗೀಕರಿಸುವ ಸಂಬಂಧ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದಿವೆ.
ನವೆಂಬರ್ ವೇಳೆಗೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯನ್ನು ಮಂಡಿಸಿ, ಅಂಗೀಕಾರ ಪಡೆಯುವುದು ಅನಿವಾರ್ಯ. ಹೀಗಾಗಿ ಅದರಲ್ಲಿನ ಎಲ್ಲ ಅಂಶಗಳ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿ ವರದಿ ನೀಡುವಂತೆ ಕಾನೂನು ತಜ್ಞರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಾಕಾಲುವೆ ಒತ್ತುವರಿ: ಪ್ರಭಾವಿಗಳಿಂದ ಒತ್ತುವರಿ ಸಾಬೀತು
ನಗರದ ಜನತೆಯ ನಿದ್ದೆಗೆಡಿಸಿದ್ದ ರಾಜಕಾಲುವೆ ಒತ್ತುವರಿಯಲ್ಲಿ ಘಟಾನುಘಟಿ ರಾಜಕಾರಣಿಗಳು ಮತ್ತು ಪ್ರಭಾವಿ ಉದ್ಯಮಿಗಳು ಒತ್ತುವರಿ ಮಾಡಿಕೊಂಡಿರುವುದು ಮರು ಸಮೀಕ್ಷೆಯಲ್ಲಿ ಸಾಬೀತಾಗಿದೆ.
ರಾಜ್ಯಸರ್ಕಾರ ಮತ್ತು ಬಿಬಿಎಂಪಿ ಕೋರಿಕೆಯಂತೆ ಕಂದಾಯ ಇಲಾಖೆ ಅಧಿಕಾರಿಗಳು ಮರು ಸಮೀಕ್ಷೆ ನಡೆಸಿ ಇದೀಗ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಮರು ಸಮೀಕ್ಷೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಹಾಗೂ ಎಐಸಿಸಿ ಖಜಾಂಚಿ ಶ್ಯಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಳಿಯ ವಿ.ಜಿ.ಸಿದ್ಧಾರ್ಥ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರತಿಷ್ಠಿತ ಓರಾಯನ್ ಮತ್ತು ಮಂತ್ರಿಮಾಲ್ ಸೇರಿದಂತೆ ಹಾಲಿ ಬಿಬಿಎಂಪಿ ಸದಸ್ಯರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ದೃಢಪಟ್ಟಿದೆ.
ಸರ್ಕಾರಕ್ಕೆ ಸಲ್ಲಿಸಿರುವ ಮರು ಸಮೀಕ್ಷೆಯಲ್ಲಿ ಈ ಪ್ರಭಾವಿ ಮುಖಂಡರು ಅಧಿಕಾರ ದುರುಪಯೋಗ ಹಾಗೂ ಸ್ವತಃ ಬಿಬಿಎಂಪಿ ಅಧಿಕಾರಿಗಳೇ ಶಾಮೀಲಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಶಿಕ್ಷಣ ಸಂಸ್ಥೆ, ಆಸ್ಪತ್ರೆ, ವಾಣಿಜ್ಯ ಕಟ್ಟಡಗಳು, ಮಾಲ್ಗಳನ್ನು ನಿರ್ಮಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಕೈಗೆ ಸೇರಿರುವ ಈ ವರದಿ ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿಯವರಿಗೆ ಹಸ್ತಾಂತರವಾಗಲಿದೆ. ನಾಳೆ ಮತ್ತು ಸೋಮವಾರ ಗೌರಿ-ಗಣೇಶ ಹಬ್ಬವಾಗಿರುವುದರಿಂದ ಮಂಗಳವಾರದ ನಂತರವೇ ಈ ವರದಿ ಬಗ್ಗೆ ಕ್ರಮ ಜರುಗಿಸುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಒತ್ತುವರಿ:
ಈ ಹಿಂದೆ ಬಿಬಿಎಂಪಿ ಕಾನೂನು ಬಾಹಿರವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರ ಮೇಲೆ ಗದಾಪ್ರಹಾರ ನಡೆಸಿತ್ತು. ಯಲಹಂಕ, ಮಹದೇವಪುರ ಮತ್ತು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೋಟೀಸ್ ನೀಡದೆ ಕೆಲವರ ಮನೆಯನ್ನು ನಿರ್ದಾಕ್ಷಿಣ್ಯವಾಗಿ ಒಡೆದು ಹಾಕಲಾಗಿತ್ತು. ಕಟ್ಟಡಗಳನ್ನು ತೆರವುಗೊಳಿಸುವ ವೇಳೆ ಬಡವರಿಗೊಂದು ನ್ಯಾಯ, ಬಲ್ಲಿದರಿಗೊಂದು ನ್ಯಾಯ ಎಂಬ ಆರೋಪ ಕೇಳಿಬಂದಿತ್ತು.
ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಚಿತ್ರ ನಟ ದರ್ಶನ್ ಹಾಗೂ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಪ್ರಭಾವಿ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರುಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ಮತ್ತು ಆಸ್ಪತ್ರೆ ನಿರ್ಮಿಸಿರುವುದು ಮೊದಲ ಸಮೀಕ್ಷೆಯಲ್ಲಿ ರುಜುವಾತಾಗಿತ್ತು. ಆದರೆ ಈ ಇಬ್ಬರು ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ಬಿಬಿಎಂಪಿ ತೆರವುಗೊಳಿಸಲು ಮೀನಾಮೇಷ ಎಣಿಸಿತ್ತು.
ಇದೀಗ ಸರ್ಕಾರದ ಸೂಚನೆಯಂತೆ ಬಿಬಿಎಂಪಿ, ಬಿಡಿಎ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಏರಿಯಲ್ ಸಮೀಕ್ಷೆ ನಡೆಸಿ ರಾಜಕಾಲುವೆ ಯಾರ್ಯಾರು ಒತ್ತುವರಿ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದೆ.
ಈ ಹಿಂದಿನ ಸಮೀಕ್ಷೆಗೂ, ಹಾಲಿ ನಡೆಸಿರುವ ಸಮೀಕ್ಷೆಗೂ ಅಂತಹ ಯಾವುದೇ ವ್ಯತ್ಯಾಸವಿಲ್ಲ. ಒಂದೆರಡು ಅಡಿ ಹೊರತುಪಡಿಸಿದರೆ ಬಹುತೇಕ ಹಳೆಯ ಸಮೀಕ್ಷೆಯಂತೆ ಕಟ್ಟಡಗಳನ್ನು ತೆರವುಗೊಳಿಸುವಂತೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಭಾವಿಗಳ ಶಾಮೀಲು:
ರಾಜರಾಜೇಶ್ವರಿ ನಗರದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಒಡೆತನದ ಗ್ಲೋಬಲ್ ಅಕಾಡೆಮಿ ಶಿಕ್ಷಣ ಸಂಸ್ಥೆಯು ಸುಮಾರು 50 ಅಡಿಗೂ ಹೆಚ್ಚು ಜಾಗವನ್ನು ಒತ್ತುವರಿ ಮಾಡಿಕೊಂಡಿದೆ.
ಇನ್ನು ಚಿತ್ರ ನಟ ದರ್ಶನ್ ಕೂಡ ಸುಮಾರು 15ಅಡಿಗೂ ಹೆಚ್ಚು ರಾಜಕಾಲುವೆ ಒತ್ತುವರಿ ಮಾಡಿಕೊಂಡು ತೂಗುದೀಪ ನಿವಾಸವನ್ನು ನಿರ್ಮಾಣ ಮಾಡಿದ್ದಾರೆ.
ದಾವಣಗೆರೆ ಧಣಿ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ಶ್ಯಾಮನೂರು ಶಿವಶಂಕರಪ್ಪ ರಾಜರಾಜೇಶ್ವರಿ ನಗರದಲ್ಲಿ ನಿರ್ಮಾಣ ಮಾಡಿರುವ ಎಸ್.ಎಸ್.ಎಂ ಆಸ್ಪತ್ರೆ ಕೂಡ ರಾಜಕಾಲುವೆಯ ಮೇಲೆ ನಿರ್ಮಾಣವಾಗಿದೆ.
ಇದೇ ರೀತಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ಧಾರ್ಥ ಒಡೆತನದ ಗ್ಲೋಬಲ್ ವಿಲೇಜ್ 100 ಅಡಿಗೂ ಹೆಚ್ಚು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದೆ.
ಪ್ರತಿಷ್ಠಿತ ಮಾಲ್ಗಳಾದ ಒರಾಯನ್ ಮತ್ತು ಮಂತ್ರಿಮಾಲ್ ಕೂಡ ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದು 30 ಅಡಿ ತೆರವುಗೊಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.
ಇದೇ ರೀತಿ ಅಸ್ಸೆಂಚರ್ ಬಹುರಾಷ್ಟ್ರೀಯ ಕಂಪೆನಿ ಮತ್ತು ಕೆಲ ಪ್ರತಿಷ್ಠಿತ ಕಂಪೆನಿಗಳೂ ಕೂಡ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿವೆ.
ಚನ್ನಸಂದ್ರದಿಂದ ಮೈಲಸಂದ್ರದವರೆಗೆ ಹರಿಯುವ ಸಜೀವ ಕಾಲುವೆ, ಮೈಲಸಂದ್ರದಿಂದ ವೃಷಭಾವತಿಗೆ ಸೇರುವ ರಾಜಕಾಲುವೆಯೂ ಒತ್ತುವರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಹಾಲಿ ಸದಸ್ಯರು ಭಾಗಿ?
ಮೂಲಗಳ ಪ್ರಕಾರ ಬಿಬಿಎಂಪಿಯ ಕೆಲ ಹಾಲಿ ಮತ್ತು ಬಿಬಿಎಂಪಿ ಮಾಜಿ ಸದಸ್ಯರೂ ಕೂಡ ರಾಜಕಾಲುವೆಯನ್ನು ನುಂಗಿ ನೀರು ಕುಡಿದಿದ್ದಾರೆ.
ಒತ್ತುವರಿಯಾಗಿರುವ ಜಾಗದಲ್ಲಿ ಬಹುತೇಕ ಸದಸ್ಯರು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಿದ್ದಾರೆ.
ಅಧಿಕಾರಿಗಳ ಕುಮ್ಮಕ್ಕು:
ರಾಜಕಾಲುವೆ ಒತ್ತುವರಿಗೆ ಬಿಬಿಎಂಪಿ, ಬಿಡಿಎ ಮತ್ತಿತರ ಇಲಾಖೆ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ಜೊತೆ ಕೈ ಜೋಡಿಸಿರುವುದನ್ನು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.
Discussion about this post