Read - 2 minutes
ಬೆಂಗಳೂರು, ಅ.9: ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ನಡೆಯುತ್ತಿರುವ ಬ್ರಿಗೇಡ್ ರಾಜಕೀಯ ಸಂಘರ್ಷವನ್ನು ಪರಿಹರಿಸಲು ಸಂಧಾನದ ಮಾರ್ಗ ಹಿಡಿಯುವಂತೆ ಪಕ್ಷದ ವರಿಷ್ಠ ರಾಮಲಾಲ್ ನೀಡಿದ ಸೂಚನೆಯ ಮೇರೆಗೆ ಈಶ್ವರಪ್ಪ ಒಂದು ಹೆಜ್ಜೆ ಮುಂದಿಟ್ಟಿದ್ದರೂ, ಯಡಿಯೂರಪ್ಪ ಒಂದು ಹೆಜ್ಜೆ ಹಿಂದಿಟ್ಟಿರುವ ಅಂಶ ಬೆಳಕಿಗೆ ಬಂದಿದೆ. ಇದರೊಂದಿಗೆ ಇವರಿಬ್ಬರ ಹಗ್ಗಜಗ್ಗಾಟ ಮುಂದುವರಿದಿದೆ.
ಪರಸ್ಪರ ಮಾತುಕತೆಯ ಮೂಲಕ ನಿಮ್ಮಲ್ಲಿನ ವೈಮನಸ್ಯಗಳನ್ನು ಪರಿಹರಿಸಿಕೊಳ್ಳಿ ಎಂದು ರಾಮಲಾಲ್ ಹೇಳಿದ ಮಾತಿಗೆ ಕಿವಿಗೊಟ್ಟ ಈಶ್ವರಪ್ಪ ಅಕ್ಟೋಬರ್ ಎಂಟರಂದು ತುಮಕೂರಿನಲ್ಲಿ ನಡೆಸಬೇಕಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶವನ್ನು ಮುಂದೂಡಿದ್ದರು.
ಹೀಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶವನ್ನು ಮುಂದೂಡಿರುವ ಅವರು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದಶರ್ಿ ರಾಮಲಾಲ್ ಅವರು ನೀಡಿರುವ ಸೂಚನೆಯ ಅನುಸಾರ ಯಡಿಯೂರಪ್ಪ ಅವರ ಜತೆಗಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಸಧ್ಯದಲ್ಲೇ ಮಾತುಕತೆ ನಡೆಸುವುದಾಗಿ ಘೋಷಿಸಿದರೆ,ಯಡಿಯೂರಪ್ಪ ಮಾತ್ರ ಈ ವಿಷಯದಲ್ಲಿ ತಮ್ಮ ಪಟ್ಟು ಸಡಿಲಿಸಿಲ್ಲ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅನ್ನು ವಿಸರ್ಜಿಸಬೇಕು ಎಂಬುದು ಯಡಿಯೂರಪ್ಪ ಅವರ ಪಟ್ಟಾದರೆ, ನಮ್ಮಿಬ್ಬರ ನಡುವಣ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಧ್ಯದಲ್ಲೇ ಮಾತುಕತೆ ನಡೆಸುವುದಾಗಿ ಈಶ್ವರಪ್ಪ ಘೋಷಿಸಿದ್ದಾರೆ.
ಇದೇ ಕಾರಣಕ್ಕಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ತುಮಕೂರು ಸಮಾವೇಶವನ್ನು ಅವರು ಮುಂದೂಡಿದ್ದಾರಾದರೂ ಬ್ರಿಗೇಡ್ ಮಾತ್ರ ನಿಲ್ಲುವುದಿಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವ ದಿಸೆಯಲ್ಲಿ ಅದು ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಹೀಗೆ ಬ್ರಿಗೇಡ್ ರಾಜಕೀಯ ಕಲಹಕ್ಕೆ ವರಿಷ್ಟರು ಫುಲ್ ಸ್ಟಾಪ್ ಹಾಕಲು ಯತ್ನಿಸಿದ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಈಶ್ವರಪ್ಪ ಒಂದು ಹೆಜ್ಜೆ ಮುಂದಿಟ್ಟಿದ್ದರೂ ಯಡಿಯೂರಪ್ಪ ಮಾತ್ರ ಒಂದು ಹೆಜ್ಜೆ ಹಿಂದಿಟ್ಟು ತಮ್ಮ ಪಟ್ಟನ್ನೇ ಬಿಗಿಗೊಳಿಸುತ್ತಿದ್ದಾರೆ.
ಉನ್ನತ ಮೂಲಗಳ ಪ್ರಕಾರ ರಾಮಲಾಲ್ ಅವರು ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ ಬೆಳಗಿನ ಉಪಹಾರಕ್ಕಾಗಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅವರ ಮನೆಗೆ ಆಹ್ವಾನಿಸಿದರೂ ಯಡಿಯೂರಪ್ಪ ಮುನಿಸಿಕೊಂಡು ಅಲ್ಲಿಗೆ ಹೋಗಲೇ ಇಲ್ಲ.
ಈ ಮಧ್ಯೆ ಅಕ್ಟೋಬರ್ ಆರರಂದು ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ರಾಮಲಾಲ್,ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ತುಮಕೂರಿನಲ್ಲಿ ನಡೆಸಲಿರುವ ಸಮಾವೇಶದಲ್ಲಿ ಭಾಗವಹಿಸುವುದು ಬೇಡ ಎಂದು ಈಶ್ವರಪ್ಪ ಅವರಿಗೆ ಸೂಚನೆ ನೀಡಿದ್ದರು.
ಅವರ ಸೂಚನೆಯ ಮೇರೆಗೆ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದ ಮೇಲೆ ಸಂಘಟಕರೂ ಸಮಾವೇಶವನ್ನು ಮುಂದೂಡಿದರು.
ಇದರ ಮಧ್ಯೆಯೇ ಶಿವಮೊಗ್ಗದಲ್ಲಿಂದು ಮಾತನಾಡಿದ ಈಶ್ವರಪ್ಪ, ನನ್ನ ಹಾಗೂ ಯಡಿಯೂರಪ್ಪ ಅವರ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ಅದರ ಪರಿಹಾರಕ್ಕಾಗಿ ಸಧ್ಯದಲ್ಲೇ ದಿನಾಂಕ ನಿಗದಿ ಮಾಡಿ ಮಾತುಕತೆ ನಡೆಸುವುದಾಗಿ ಅವರು ಹೇಳಿದರು.
ಆದರೆ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮಾತ್ರ ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಹಿಂದ ಸಮುದಾಯಗಳನ್ನು ಸಂಘಟಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವುದು ಮಾತ್ರವಲ್ಲ,ಅಧಿಕಾರಕ್ಕೆ ಬಂದ ಮೇಲೆ ಆ ಸಮುದಾಯಗಳಿಗೆ ಯಾವ ಅನುಕೂಲಗಳು ಸಿಗಬೇಕೋ ಅದನ್ನು ಕೊಡಿಸುವುದು ತಮ್ಮ ಗುರಿ ಎಂದರು.
ಆ ಮೂಲಕ ಸಂಗೊಳ್ಳಿ ರಾಯಣ್ಣ ಬ್ರಿಗೇಡನ್ನು ವಿಸರ್ಜಸುವ ಸಾಧ್ಯತೆಗಳನ್ನು ತಳ್ಳಿ ಹಾಕಿದ ಅವರು,ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಿದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಆದರೆ ಮೂಲಗಳ ಪ್ರಕಾರ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಸರ್ಜನೆಯಾಗದೆ ಈಶ್ವರಪ್ಪ ಅವರ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದು ಇದರಿಂದಾಗಿ ಪಕ್ಷದ ವರಿಷ್ಟ ರಾಮಲಾಲ್ ಅವರ ಸೂಚನೆಯನ್ನು ಪಾಲಿಸುವ ವಿಷಯದಲ್ಲಿ ಈಶ್ವರಪ್ಪ ಒಂದು ಹೆಜ್ಜೆ ಮುಂದಿಟ್ಟರೂ ಯಡಿಯೂರಪ್ಪ ಮಾತ್ರ ಒಂದು ಹೆಜ್ಜೆ ಹಿಂದಿಟ್ಟಿದೆ.
Discussion about this post