Read - 3 minutes
ಬೆಳಗಾವಿ, ಅ.4: ಯಾವುದೇ ರಾಜ್ಯ ಸರ್ಕಾರಗಳು ಅಂತರ್ರಾಜ್ಯ ವಿವಾದಗಳಲ್ಲಿ ಬಯಸಿದರೆ ಮಾತ್ರಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಖಾತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನ್ಯಾಯಾಲಯದ ಸೂಚನೆಯಂತೆ ವಿವಾದಿತ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಮಾತುಕತೆಗೆ ಕರೆದರೂ ತಮಿಳುನಾಡಿನ ಉದ್ದಟತನದಿಂದ ಅದು ಅಸಾಧ್ಯವಾಯಿತು. ರಾಜ್ಯದಲ್ಲಿ ಬಿಜೆಪಿ ಪ್ರತಿಪಕ್ಷದ ಸ್ಥಾನದಲ್ಲಿರುವುದರಿಂದ ಬೇರೆ ರಾಜ್ಯಗಳ ಮೇಲೆ ಒತ್ತಡ ತರಲು ಆಗದು. ಅದನ್ನು ಆಡಳಿತ ಪಕ್ಷವೇ ಮಾಡಬೇಕು. ನ್ಯಾಯಾಲಯದ ವಿಷಯಗಳಲ್ಲಿ ಸ್ವಯಂಪ್ರೇರಣೆಯಿಂದ ಕೇಂದ್ರ ಸರ್ಕಾರ ಎಂದೂ ಭಾಗವಹಿಸುವುದಿಲ್ಲ. ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಬದ್ಧತೆ ಏನೆಂಬುದರ ಬಗ್ಗೆ ಜನತೆ ಸಂಶಯಪಡಬೇಕಾಗಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಕೈಬಿಟ್ಟಿರುವ ಕೇಂದ್ರದ ನಿರ್ಧಾರದಿಂದ ನಮ್ಮ ನಿಲುವು ಎಲ್ಲರಿಗೆ ಮನವರಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಕ್ಕೆ ಸಂಬಂಧಿಸಿದ ಜಲವಿವಾದಗಳಲ್ಲಿ ನ್ಯಾಯಾಂಗದ ವ್ಯಾಪ್ತಿಯಲ್ಲಿ ಕಾರ್ಯಾಂಗ ಸತತ ಹಸ್ತಕ್ಷೇಪ ಮಾಡುತ್ತದೆ ಎಂಬ ಭಾವನೆ ನ್ಯಾಯಾಲಯಕ್ಕೆ ಬರುತ್ತಿದೆ. ನ್ಯಾಯಾಲಯದ ವಿಷಯಗಳಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ ಮಾಡುವುದಿಲ್ಲ. ಸಂವಿಧಾನತ್ಮಕ ಚೌಕಟ್ಟಿನಲ್ಲಿ ವಿಷಯ ಬಗೆಹರಿಸಲು ಪ್ರಯತ್ನಿಸುತ್ತೇವೆ. ಹಾಗಾಗಿ ನ್ಯಾಯಾಲಯ ನೀಡುವ ಆದೇಶವನ್ನು ಪರಾಮರ್ಶಿಸಬೇಕಾಗುತ್ತದೆ. ಕಾವೇರಿ ವಿವಾದದಲ್ಲಿ ಸುಪ್ರಿಂಕೋರ್ಟ್ ನೀಡಿದ ಆದೇಶದ ಮಾರ್ಪಾಡು ಕೋರಿ ಅಟಾರ್ನಿ ಜನರಲ್ ಈಗಾಗಲೇ ಪರಾಮರ್ಶೆ ಕುರಿತ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಕಾವೇರಿ ವಿವಾದದ ಸಂಬಂಧ ಕರ್ನಾಟಕದ ಪರ ವಾದಿಸುತ್ತಿರುವ ಫಾಲಿ ನಾರಿಮನ್ ಒಬ್ಬ ಮೇಧಾವಿ, ದೊಡ್ಡ ವ್ಯಕ್ತಿ. ಅವರ ಬಗ್ಗೆ ವೈಯಕ್ತಿಕವಾಗಿ ನಮಗೆಲ್ಲ ಗೌರವವಿದೆ. ಆದರೆ, ರಾಜ್ಯದ ಪರ ಸಮರ್ಥ ವಾದ ಮಾಡಲು ಅವರು ಎಡವಿದ್ದರಿಂದ ಅವರನ್ನು ಬದಲಾವಣೆ ಮಾಡಲು ಆಗ್ರಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ಸಲ ಕಾವೇರಿಗಾಗಿ ನಾರಿಮನ್ ವಾದ ಮಾಡಿರುವುದು ಸಮರ್ಥವಾಗಿಲ್ಲ. ಇದಕ್ಕೆ ಸೆಪ್ಟಂಬರ್ ನಲ್ಲಿ ಸುಪ್ರಿಂಕೋರ್ಟ್ ನಿಂದ ಬಂದ ನಾಲ್ಕಾರು ಆದೇಶಗಳೇ ಸಾಕ್ಷಿ.ಕೋರ್ಟ್ ನೀಡಿದ ಆದೇಶಗಳಲ್ಲಿ ಒಂದೂ ರಾಜ್ಯದ ಪರವಾಗಿ ಬಂದಿಲ್ಲ. ವಕೀಲರ ತಂಡವನ್ನೇ ಬದಲಾಯಿಸುವ ಬಗ್ಗೆ ನಮ್ಮ ಬೇಡಿಕೆ ಇಲ್ಲ. ನಾರಿಮನ್ ವಾದ ಮುಂದುವರಿಸದೇ ಇದ್ದರೆ ಬೇರೊಬ್ಬರನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಇದೆ. ಪ್ರತಿಪಕ್ಷವಾಗಿ ನಮ್ಮ ಕರ್ತವ್ಯವನ್ನು ನಾವು ಸಮರ್ಥವಾಗಿ ಮಾಡಿದ್ದೇವೆ. ನಾರಿಮನ್ ಈಗ ವಾದ ಮಾಡುವುದಿಲ್ಲ ಎಂದು ಹಿಂದೆ ಸರಿದಿರುವ ಬೆಳವಣಿಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಕಾವೇರಿ ನದಿ ನೀರನ್ನು ನಮ್ಮ ರೈತರ ಬೆಳೆಗಳಿಗೆ ಬಿಡುವ ಬದಲು ತಮಿಳುನಾಡಿಗೆ ಬಿಡಬಾರದು. ಇಂಥ ನಿರ್ಧಾರಗಳನ್ನು ವಿರೋಧಿಸುವುದಾಗಿ ಎಚ್ಚರಿಸಿದರು.
ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ಎಸ್.ಯಡಿಯೂರಪ್ಪಮಾತನಾಡಿ, ಎಲ್ಲೆಡೆ ಬಿಜೆಪಿಗೆ ಸೇರ್ಪಡೆಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ವಿಧಾನ ಸಭಾಚುನಾವಣೆಗೆ ಪಕ್ಷವನ್ನು ಬಲಯುತವಾಗಿ ಸಜ್ಜುಗೊಳಿಸಲಾಗುತ್ತಿದೆ. ಈ ದಿಸೆಯಲ್ಲಿ ಜನವರಿಯಲ್ಲಿ ಕಲಬುರಗಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಸಲಾಗುವುದು ಎಂದರು.
ಬೆಳಗಾವಿಯ ಮುಖಂಡರು ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಅವರಿಗೆತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ಒಂದೂವರೆ ವರ್ಷದಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆ ಹಾಗೂ ಪಕ್ಷವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಜನವರಿಯಲ್ಲಿ ಕಲಬುರಗಿಯಲ್ಲಿ ಕಾರ್ಯಕಾರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಾವೇರಿ ವಿಷಯದಲ್ಲಿ ತಮಿಳುನಾಡುಗೆ ನೀರು ಬಿಡಲು ತೆಗೆದುಕೊಂಡ ನಿರ್ಣಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ರೈತರಿಗಾಗಿ ಸರಕಾರ ನೀರು ಬಿಡುವುದಾಗಿ ಹೇಳಿರುವುದಕ್ಕೆ ಬಿಜೆಪಿಯ ಸಹಮತವಿದೆ ಎಂದರು.
ಕಾವೇರಿ ವಿವಾದದ ಬಗ್ಗೆ ಸುಪ್ರಿಂಕೋರ್ಟ್ ನಲ್ಲಿ ಕರ್ನಾಟಕದ ಪರವಾಗಿ ವಾದ ಮಾಡುತ್ತಿರುವ ನ್ಯಾಯವಾದಿ ಫಾಲಿ ನಾರಿಮನ್ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಕಳೆದ 25 ವರ್ಷಗಳಿಂದ ರಾಜ್ಯದ ಪರವಾಗಿ ನ್ಯಾಯ ಮಂಡನೆ ಮಾಡುತ್ತಾ ಬಂದಿದ್ದಾರೆ. ಅವರ ಮೇಲೆ ಸಂಪೂರ್ಣ ಗೌರವವಿದೆ. ರಾಜ್ಯ ಸರಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ ಕಾವೇರಿ ವಿಚಾರವಾಗಿ ನಾರಿಮನ್ ಅವರು ಇತ್ತೀಚೆಗೆ ನಡೆಸಿದ ವಾದ ಅಸಮಾಧಾನ ತಂದಿದೆ. ಅವರನ್ನು ಮುಂದುವರಿಸುವುದು ಅಥವಾ ಬಿಡುವುದು ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದವರು ಹೇಳಿದರು.
ಬಿಜೆಪಿಗೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೂ ಯಾವುದೇ ಸಂಬಂಧವಿಲ್ಲ. ಬ್ರಿಗೇಡ್ ಗೆ ಸಂಬಂಧಿಸಿದ ವಿಷಯಗಳಿಗೆ ಬೆಳಗಾವಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆಗೆ ಅವಕಾಶವೂ ಇಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು.
ಕರ್ನಾಟಕದ ಪರಕಾವೇರಿ ನದಿ ನೀರು ವಿವಾದಲ್ಲಿ ಸುಪ್ರಿಂಕೋರ್ಟ್ ನಲ್ಲಿ ವಾದಿಸುತ್ತಿರುವ ಫಾಲಿ ನಾರಿಮನ್ ಜವಾಬ್ದಾರಿಯಿಂದ ಹೊರಬರಬೇಕು. ನಮ್ಮ ಮುಖ್ಯಮಂತ್ರಿಗಳ ಗಮನಕ್ಕೆ ತಾರದೇ ತಮಿಳುನಾಡಿಗೆ ಸ್ವಯಂಪ್ರೇರಣೆಯಿಂದ ನೀರು ಬಿಡುವುದಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ನೀಡಿರುವುದು ತಪ್ಪು ಎಂದು ಅಭಿಪ್ರಾಯಪಟ್ಟರು.
ಕಾವೇರಿ ವಾದದಿಂದ ನಾರಿಮನ್ ಹೊರಬರುವುದಾಗಿ ಹೇಳುತ್ತಿದ್ದು, ವಾದದಿಂದ ಹಿಂದೆ ಸರಿಯುವಂತೆ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಆಕ್ಷೇಪಿಸಿದ ಅಂಶದ ಕಾರಣ ನೀಡುತ್ತಿದ್ದು, ಈ ಮೂವರು ಕ್ಷಮೆ ಯಾಚಿಸಿದರೆ ಮಾತ್ರ ಕೇಸ್ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಅವರ ವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ಉಲ್ಲೇಖ ಮಾಡದೇ ನಮ್ಮನ್ನಷ್ಟೇ ಉಲ್ಲೇಖ ಮಾಡಿರುವ ಬಗ್ಗೆ ಸಂಶಯ ಬಂದಿದೆ. ನಾರಿಮನ್ ಅವರ ಕ್ಷಮೆಯಾಚನೆ ಬದಿಗಿರಲಿ. ಅವರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಅವರು ತಮ್ಮ ಜವಾಬ್ದಾರಿಯಿಂದ ಹೊರಬರಬೇಕು ಎಂದು ಒತ್ತಾಯಿಸಿದರು.
ಬಿಕ್ಕಟ್ಟು ನಿವಾರಣೆ ಮಾಡಿದರೆ ಮತ್ತೆ ಅಧಿಕಾರಕ್ಕೆ: ಜಾರಕಿಹೊಳಿ ಅಭಿಪ್ರಾಯ
ಬಿಜೆಪಿಯ ರಾಜ್ಯ ನಾಯಕರುಗಳಲ್ಲಿ ಆಂತರಿಕ ಕಚ್ಚಾಟದಿಂದ ಪಕ್ಷಕ್ಕೆ ಮುಜುಗರವಾಗುತ್ತಿದ್ದು, ಕೂಡಲೇ ನಾಯಕರುಗಳಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ನಿವಾರಣೆ ಮಾಡಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಮುಂದಿನ 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದರೂ ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಪಕ್ಷದಲ್ಲಿ ಒಳಜಗಳ ಹೆಚ್ಚಾಗುತ್ತಿದೆ. ರಾಜ್ಯ ನಾಯಕರುಗಳ ಹೊಂದಾಣಿಕೆ ಕೊರತೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಇದನ್ನು ಸರಿಪಡಿಸಬೇಕಾದ ಅನಿವಾರ್ಯತೆ ಕೇಂದ್ರ ಸಮಿತಿಗಿದೆ. ಕೂಡಲೇ ಕೇಂದ್ರದ ನಾಯಕರುಗಳು ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಮಟ್ಟದ ಸ್ಥಾನಗಳು ದೊರೆಯುವುದು ಕಷ್ಟಕರವಾಗಬಹುದು ಎಂದು ಹೇಳಿದರು.
ಕಾರ್ಯಕರ್ತರ ಭಾವನೆಗಳನ್ನು ಗೌರವಿಸಬೇಕು. ಅಭಿಪ್ರಾಯಗಳನ್ನು ಸಂಗ್ರಹಿಸಿ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕಬೇಕು. ಕಾರ್ಯಕರ್ತರೇ ಪಕ್ಷಕ್ಕೆ ಆಧಾರಸ್ತಂಭ. ಇದನ್ನರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳು ಹಾಗೂ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಕೊಡುಗೆಗಳನ್ನು ಪಟ್ಟಿಮಾಡಿ ಜನರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಜಾತಿ ಆಧಾರಿತ ಕಾರ್ಯಕ್ರಮಗಳಿಂದ ಪಕ್ಷದ ಕಾರ್ಯಕರ್ತರಲ್ಲಿ ದ್ವಂದ್ವ ಭಾವನೆ ಉಂಟಾಗುತ್ತಿದೆ. ಬಿಜೆಪಿ 125+ ಗೆಲ್ಲುವ ಲೆಕ್ಕಾಚಾರವನ್ನು ಹಾಕಿದ್ದರೂ ಈ ಗುರಿಯನ್ನು ತಲುಪಲು ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಕಷ್ಟವಾಗಬಹುದು ಎಂದು ಹೇಳಿದರು.
ನಮ್ಮಲ್ಲಿಯ ಒಳಜಗಳದ ಲೆಕ್ಕಾಚಾರವನ್ನು ಜೆಡಿಎಸ್-ಕಾಂಗ್ರೆಸ್ ಲಾಭ ಪಡೆಯಬಹುದು. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಈಗಾಗಲೇ ಜೆಡಿಎಸ್ ರಣತಂತ್ರ ಹೆಣೆಯುತ್ತಿದೆ. ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಪಕ್ಷದ ನಾಯಕರುಗಳು ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ನಮ್ಮಲ್ಲಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಪಕ್ಷದ ಬಲವರ್ಧನೆಗೆ ಎಲ್ಲರೂ ಮುಕ್ತ ಮನಸ್ಸಿನಿಂದ ಶ್ರಮಿಸಬೇಕಾಗಿದೆ ಎಂದು ನಾಯಕರುಗಳಿಗೆ ಅಭಿಪ್ರಾಯ ತಿಳಿಸಿದರು.
ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಬರಬೇಕೆಂಬುದು ಪ್ರತಿಯೊಬ್ಬ ಪ್ರಜೆಯ ಆಶಯವಾಗಿದೆ. ಕಾಂಗ್ರೆಸ್ ಪಕ್ಷಕ್ಕಂತೂ ಯಾವುದೇ ಭವಿಷ್ಯವಿಲ್ಲ. ಸರ್ಕಾರ ಇದೆಯೋ? ಇಲ್ಲವೋ? ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯದ ಲಾಭವನ್ನು ಪಡೆದು ನಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಬೇಕಾಗಿದೆ. ಬಿಜೆಪಿಗೆ ಪೂರಕ ವಾತಾವರಣವಿದ್ದರೂ ಪಕ್ಷದ ನಾಯಕರುಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳು ಪಕ್ಷಕ್ಕೆ ಮಾರಕವಾಗಲಿವೆ. ಪಕ್ಷ ಅಧಿಕಾರಕ್ಕೆ ಬರಬೇಕಿದ್ದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ. ಬಣ-ಬಣಗಳ ರಾಜಕೀಯ ಮಾಡದೇ ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮೀತ ಶಾ ಅವರ ಕೈಬಲಪಡಿಸಲು ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂದು ನಾಯಕರುಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿಕೊಂಡರು.
ಸಭೆಯಲ್ಲಿ ರಾಜ್ಯದ ಎಲ್ಲ ಬಿಜೆಪಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷರುಗಳು ಉಪಸ್ಥಿತರಿದ್ದು ತಮ್ಮ-ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
Discussion about this post