ಬೆಂಗಳೂರು, ಅ.17: ಇದೇ 20 ರಂದು ನಡೆಯಲಿರುವ ಪಾಲಿಕೆಯ 12 ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಸಿದ್ಧತೆ ಪೂರ್ಣಗೊಂಡಿದ್ದು, ಪ್ರಮುಖ ಸಮಿತಿಯ ಅಧ್ಯಕ್ಷಗಾದಿ ಗಿಟ್ಟಿಸಿಕೊಳ್ಳಲು ಸದಸ್ಯರು ತಮ್ಮ ಗಾಡ್ ಫಾದರ್ ಗಳ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಮತ್ತೆ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿದ್ದು, ಕಾಂಗ್ರೆಸ್ ನ ಜಿ. ಪದ್ಮಾವತಿ ಮೇಯರ್ ಆಗಿದ್ದರೆ, ಜೆಡಿಎಸ್ ನ ಆನಂದ್ ಉಪಮೇಯರ್ ಆಗಿದ್ದಾರೆ. 12 ಸ್ಥಾಯಿ ಸಮಿತಿಗಳ ಪೈಕಿ 4 ಸ್ಥಾಯಿ ಸಮಿತಿಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದ್ದು, ಪಕ್ಷೇತರರಿಗೆ 3, ಉಳಿದ 5ನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲಾಗಿದೆ.
ಸ್ಥಾಯಿ ಸಮಿತಿಗಳಲ್ಲಿ ಪ್ರಮುಖ ಸಮಿತಿಗಳಾದ ನಗರಯೋಜನೆ, ವಾರ್ಡ್ ಮಟ್ಟದ ಕಾಮಗಾರಿ, ಲೆಕ್ಕಪತ್ರ, ಶಿಕ್ಷಣ ಸ್ಥಾಯಿ ಸಮಿತಿಯನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದ್ದು, ಉಳಿದ 8 ರಲ್ಲಿ ಬೃಹತ್ ಕಾಮಗಾರಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ತೆರಿಗೆ ಮತ್ತು ಆರ್ಥಿಕ, ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್ ಪಡೆದುಕೊಳ್ಳಲಿದೆ.
ಕಳೆದ ಮೇಯರ್ ಚುನಾವಣೆಯಲ್ಲಿ ಕಿಂಗ್ಪಿನ್ಗಳಾಗಿದ್ದ ಪಕ್ಷೇತರ ಸದಸ್ಯರು ಲೆಕ್ಕಕ್ಕಿರಲಿಲ್ಲ. ಇವರಿಗೆ ಸಮಿತಿಯ ಅಧ್ಯಕ್ಷ ಸ್ಥಾನ ನೀಡುವ ಅವಶ್ಯಕತೆಯೂ ಇರಲಿಲ್ಲ. ಆದರೆ ಕಾಂಗ್ರೆಸ್ ನವರು ದೂರಾಲೋಚನೆ ದೃಷ್ಟಿಯಿಂದ 3 ಸಮಿತಿಗಳನ್ನು ಪಕ್ಷೇತರರಿಗೆ ಬಿಟ್ಟಿದ್ದಾರೆ.
ಪಕ್ಷೇತರ ಸದಸ್ಯರು ಇರುವುದು 7 ಆದರೆ ಬಿಟ್ಟುಕೊಟ್ಟಿರುವುದು ಮಾತ್ರ ಮೂರು. ಹಾಗಾಗಿ ಪಕ್ಷೇತರರಲ್ಲೇ ಕಿತ್ತಾಟ ಪ್ರಾರಂಭವಾಗಿದ್ದು, ತನ್ನ ಪಾಲಿಗೆ ಬಂದಿರುವ ಮೂರು ಸ್ಥಾನವನ್ನು ಹೇಗಾದರೂ ಮಾಡಿ ಗಿಟ್ಟಿಸಿಕೊಳ್ಳಬೇಕೆಂದು ಕಸರತ್ತು ನಡೆಸಿದ್ದಾರೆ.
ಕಳೆದ ಬಾರಿ 7 ಸದಸ್ಯರಿಗೆ 7 ಸಮಿತಿಗಳ ಸ್ಥಾನ ಸಿಕ್ಕಿತ್ತು. ಆದರೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಕೆಲಸವೂ ಮಾಡಿರಲಿಲ್ಲ. ಇವರಿಗೆ ಅನುಭವವೂ ಇರಲಿಲ್ಲ. ಈ ಬಾರಿ ಒಂದು ಅವಕಾಶ ಕೊಡಿ ಒಳ್ಳೆಯ ಕೆಲಸ ಮಾಡುತ್ತೇವೆ ಎಂಬ ಹಠಕ್ಕೆ ಬಿದ್ದು ಕಾಂಗ್ರೆಸ್ ವರಿಷ್ಠರ ಗಮನ ಸೆಳೆಯುತ್ತಿದ್ದಾರೆ.
ಕಾಂಗ್ರೆಸ್ ನವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಇವರಿಗೆ ಸಿಕ್ಕಿದ್ದು ಮಾತ್ರ 2 ಸಮಿತಿ. ಅದು ಶಿವರಾಜ್ ಮತ್ತು ರಾಜಣ್ಣನವರ ಪಾಲಾಗಿತ್ತು. ಆದರೆ ಈ ಬಾರಿ 5 ಸಮಿತಿಗಳು ಕಾಂಗ್ರೆಸ್ ಸಿಕ್ಕಿರುವ ಹಿನ್ನೆಲೆಯಲ್ಲಿ ಕಳೆದ ಬಾರಿ ಅವಕಾಶ ವಂಚಿತರಾಗಿದ್ದ ಹಿರಿಯ ಸದಸ್ಯರು ಈ ಬಾರಿಯಾದರೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಳ್ಳಲು ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ.
ಅದರಲ್ಲೂ ಮುಖ್ಯವಾಗಿ ಮೇಯರ್ ಸ್ಥಾನದಿಂದ ವಂಚಿತರಾಗಿದ್ದ ಸೌಮ್ಯ ಶಿವಕುಮಾರ್, ರಿಜ್ವಾನ್, ಸಂಪತ್ರಾಜು, ಜಾಕೀರ್ ಹುಸೇನ್ ಮತ್ತಿತರರಿಗೆ ಬಹುತೇಕ ಸಮಿತಿಯ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಇದೆ. ಇದೇ 19 ರಂದು ಸ್ಥಾಯಿಸಮಿತಿ ಸದಸ್ಯರ ಆಯ್ಕೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, 20 ರಂದು ಚುನಾವಣೆ ನಡೆಯಲಿದೆ. ಯಾವ್ಯಾವ ಸ್ಥಾಯಿ ಸಮಿತಿ ಅಧ್ಯಕ್ಷರ ಪಟ್ಟ ಯಾರ ಪಾಲಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
Discussion about this post