Read - 2 minutes
ಗೋವಾ, ಅ.15: ರಷ್ಯಾ ಹಾಗೂ ಭಾರತದ ನಡುವೆ ರಕ್ಷಣೆ, ಶಿಕ್ಷಣ ಸೇರಿಂದತೆ ವಿವಿಧ ಕ್ಷೇತ್ರತ್ರಗಳ 16 ಒಪ್ಪಂದಗಳಿಗೆ ಶನಿವಾರ ಉಭಯ ದೇಶಗಳು ಸಹಿ ಮಾಡಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಭಾರತ ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆ ವೇಳೆ ಒಪ್ಪಂದಗಳಿಗೆ ಅಂಕಿತ ನೀಡಲಾಗಿದ್ದು, ಉಭಯ ನಾಯಕರು ಸಹಿ ಹಾಕಿದ್ದಾರೆ.
* 2 ದೇಶಗಳ ನಡುವೆ ಎಸ್ -400 ವಾಯು ರಕ್ಷಣಾತ್ಮಕ ವ್ಯವಸ್ಥೆ ಹಾಗೂ 1,135ನೇ ಸರಣಿಯ ಯುದ್ಧ ನೌಕೆಗಳನ್ನು ಭಾರತದಲ್ಲಿ ನಿರ್ಮಾಣ ಮಾಡಲು ಒಪ್ಪಂದ.
* 200 ಕಮೊವ್ ಹೆಲಿಕಾಪ್ಟರ್ ಗಳ ಸರಣಿಯ ಕೆಎ – 226 ಟಿ ಹೆಲಿಕಾಪ್ಟರ್ಗಳ ಜಂಟಿಯಾಗಿ ನಿರ್ಮಿಸಲು 1 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ.
* 1 ಬಿಲಿಯನ್ ಡಾಲರ್ ಹೂಡಿಕೆ ಸಂಬಂಧ ಒಪ್ಪಂದ.
* ಹರಿಯಾಣ, ಆಂಧ್ರ ಪ್ರದೇಶ ಸೇರಿದಂತೆ ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗೆ ಹಾಗೂ ಕೆಲ ನಗರಗಳ ನಡುವೆ ಸಂಪರ್ಕ ಸಾಧನದ ಸಂಬಂಧ ಒಪ್ಪಂದ.
*ಭಾರತ ಹಾಗೂ ರಶ್ಯಾ ನಡುವೆ ಜಂಟಿ ಅನಿಲ ನಿರ್ಮಾಣಕ್ಕೆ ಒಪ್ಪಂದ.
*ಪ್ರತ್ಯೇಕ ಒಪ್ಪಂದವೊಂದರ ಪ್ರಕಾರ, ರಷ್ಯಾ ಸರ್ಕಾರಿ ಸ್ವಾಮ್ಯದ ಇಂಧನ ದೈತ್ಯ ರಾಸ್ನೆಫ್ಟ್ ತೈಲ ಕಂಪನಿ ಮತ್ತು ಟ್ರಾಫಿಗುರಾ, ಖಾಸಗಿ ಹೂಡಿಕೆದಾರರ ಯುನೈಟೆಡ್ ಕ್ಯಾಪಿಟಲ್ ಪಾರ್ಟನರ್ ಗುಂಪುಗಳು ಎಸ್ಸಾರ್ ತೈಲ ಕಂಪನಿಯ ಶೇ.98 ಷೇರುಗಳ ಖರೀದಿ ಒಪ್ಪಂದ (10.9 ಬಿಲಿಯನ್ ಡಾಲರ್ ಮೊತ್ತದ ಷೇರು).
* ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಶಿಕ್ಷಣ, ಹಾಗೂ ತರಬೇತಿಗೆ ಒಎನ್ಜಿಸಿ ವಿದೇಶ್ ಜತೆಗೆ ರಾಸ್ನೆಪ್ಟ್ ಒಪ್ಪಂದ
* 2 ದೇಶಗಳ ನಡುವೆ ರೈಲ್ವೆ ಅಭಿವೃದ್ಧಿ ಹಾಗೂ ಸಿಕಂದರಾಬಾದ್-ನಾಗ್ಪುರ ನಡುವಿನ ರೈಲುಗಳ ವೇಗ ಹೆಚ್ಚಿಸಲು ಸಹಕಾರ ಒಪ್ಪಂದ
* ಭಾರತದ ಇಸ್ರೋ ಹಾಗೂ ರಶ್ಯಾದ ಅಂತರಿಕ್ಷ ಸಂಸ್ಥೆ ಸಹಯೋಗದೊಂದಿಗೆ ಕಾರ್ಯನಿರ್ವಹಣೆ
* ಭಾರತ ಹಾಗೂ ರಷ್ಯಾ ನಡುವೆ ದ್ವಿಪಕ್ಷೀಯ ಹಾಗೂ ಆರ್ಥಿಕ ಸಹಕಾರ ಒಪ್ಪಂದ
*ರಷ್ಯಾ – ಭಾರತ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 70 ವರ್ಷಗಳ ಆಚರಣೆಯಾಗಿದ್ದು, ಇದೇ ವೇಳೆ ಮಾರ್ಗಸೂಚಿ ಘೋಷಣೆ
*ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆ 2 ದೇಶಗಳ ನಡುವೆ ಸಹಕಾರ. ರಷ್ಯಾ ಹಾಗೂ ಭಾರತ ಹಳೆಯ ಮಿತ್ರರಾಗಿದ್ದು, 2 ದೇಶಗಳ ಸಾಮರ್ಥ್ಯ ದ ವೃದ್ಧಿಗೆ ಸೌಹಾರ್ಧಯುತವಾದ ಸಂಬಂಧವನ್ನು ಮುಂದುವರಿಸುವುದು.
ಭಯೋತ್ಪಾದಕರು, ಅವರ ಬೆಂಬಲಿಗರತ್ತ ಶೂನ್ಯ ಸಹನೆ ಅಗತ್ಯ : ಮೋದಿ – ಪುಟಿನ್
ಭಯೋತ್ಪಾದಕರು ಮತ್ತು ಅವರ ಬೆಂಬಲಗರ ಬಗ್ಗೆ `ಶೂನ್ಯ ಸಹನೆ’ ಯ ಅಗತ್ಯವಿದೆ ಎಂದು ಭಾರತ ಮತ್ತು ರಷ್ಯಾ ಶನಿವಾರ ದೃಢವಾಗಿ ಹೇಳಿವೆ. ಇದಕ್ಕೆ ಮೊದಲು ಪಾಕಿಸ್ಥಾನದಿಂದ ಉಗಮಿಸುವಂತದ್ದೂ ಸೇರಿದಂತೆ ಭಯೋತ್ಪಾದನೆ ಬಗ್ಗೆ ತಾವು ನಡೆಸಿದ ಮಾತುಕತೆ ವೇಳೆ ಉರಿ ದಾಳಿಯನ್ನು ರಷ್ಯಾ ಸ್ಪಷ್ಟವಾಗಿ ಖಂಡಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಪ್ರಶಂಸೆಯನ್ನು ರಶ್ಯಾದ ಅಧ್ಯಕ್ಷ ವ್ಲಾರಿಮಿರ್ ಪುಟಿನ್ ಗೆ ತಿಳಿಸಿದ್ದರು.
ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಬೇಕಾದ ಅಗತ್ಯದ ಬಗ್ಗೆ ರಶ್ಯಾದ ಸುಸ್ಪಷ್ಟ ನಿಲುವು ನಮ್ಮ ನಿಲುವನ್ನೇ ಪ್ರತಿಫಲಿಸುತ್ತದೆ. ನಮ್ಮ ಇಡೀ ಪ್ರದೇಶಕ್ಕೆ ಬೆದರಿಕೆ ಒಡ್ಡುತ್ತಿರುವ ಗಡಿಯಾಚೆಯ ಭಯೋತ್ಪಾದನೆ ವಿರುದ್ಧ ಹೋರಾಡಲು ನಾವು ಕೈಗೊಂಡಿರುವ ಕ್ರಮಗಳನ್ನು ರಶ್ಯಾ ಅರ್ಥಮಾಡಿಕೊಂಡು ಬೆಂಬಲಿಸಿರುವುದನ್ನು ನಾವು ಬಹುವಾಗಿ ಪ್ರಶಂಸಿಸುತ್ತೇವೆ. ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿಷಯದಲ್ಲಿ ಶೂನ್ಯ ಸಹನೆಯ ಅಗತ್ಯವನ್ನು ನಾವಿಬ್ಬರೂ ದೃಢವಾಗಿ ಸಾರಿದ್ದೇವೆ’ ಎಂದು ಇಲ್ಲಿ ತಮ್ಮ ವಾರ್ಷಿಕ ಶೃಂಗಸಭೆಯ ನಂತರ ಪುಟಿನ್ ಅವರೊಂದಿಗೆ ನಡೆಸಿದ ಜಂಟಿ ಮಾಧ್ಯಮ ಗೋಷ್ಠಿಯಲ್ಲಿ ಮೋದಿ ಹೇಳಿದರು.
ಮಾತುಕತೆ ವೇಳೆ ಪಾಕಿಸ್ಥಾನದಿಂದ ಉಗಮಿಸುವ ಗಡಿಯಾಚೆಯ ಭಯೋತ್ಪಾದನೆ ವಿಷಯ ಪ್ರಸ್ತಾಪವಾಯಿತೆ ಎಂದು ಕೇಳಿದಾಗ, ಉರಿ ದಾಳಿ ಮತ್ತು ಭಯೋತ್ಪಾದಕ ದಾಳಿಗೆ ಪಾಕಿಸ್ಥಾನ ಬೆಂಬಲ ನೀಡಿರುವ ವಿಚಾರ ಚರ್ಚೆಯಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಹೇಳಿದರು.
ಭಯೋತ್ಪಾದನೆ ಹಿಂದಿನ ಚಾಲನಾ ಶಕ್ತಿಗಳ ಬಗ್ಗೆ ಪ್ರಧಾನಿ ಏರ್ಪಡಿಸಿರುವ ಭೋಜನ ಕೂಟದಲ್ಲಿ ಮೋದಿ ಮತ್ತು ಪುಟಿನ್ ನಡುವೆ ಇನ್ನೂ ವಿವರವಾಗಿ ಚರ್ಚೆ ನಡೆಯಲಿದೆ ಎಂದರು.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಉಭಯ ದೇಶಗಳು ನಿಕವಟಾಗಿ ಸಹಕರಿಸುತ್ತಿವೆ ಎಂದು ಪುಟಿನ್ ಹೇಳಿದರು.
ಭಾರತದೊಂದಿಗೆ ವಿಶೇಷ ಮತ್ತು ಸ್ವತಂತ್ರ ವ್ಯೂಹಾತ್ಮಕ ಪಾಲುದಾರಿಕೆಗೆ ರಶ್ಯಾದ ಬದ್ಧತೆ ಮುಂದುವರಿಯುವುದೆಂದು ಅಧ್ಯಕ್ಷ ಪುಟಿನ್ ಮರು ದೃಢೀಕರಿಸಿದರಲ್ಲದೆ ಭಯೋತ್ಪಾದನೆ ವಿರುದ್ಧದ ಸಮರದಂತಹ ವಿಷಯಗಳಲ್ಲಿ ಉಭಯ ದೇಶಗಳ ಸಮಾನ ನಿಲುವುಗಳನ್ನು ಬೊಟ್ಟು ಮಾಡಿದರು. ಉರಿಯಲ್ಲಿನ ಸೇನಾ ನೆಲೆ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ರಷ್ಯಾ ಸ್ಪಷ್ಟವಾಗಿ ಖಂಡಿಸಿರುವುದಕ್ಕೆ ಭಾರತ ತನ್ನ ಪ್ರಶಂಸೆಯನ್ನು ಸೂಚಿಸಿತು ಎಂದು ಮಾತುಕತೆ ನಂತರ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸರಕಾರಿ ನೀತಿಯ ವಿಷಯವಾಗಿ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಮತ್ತು ಕಾರ್ಯಗತಗೊಳಿಸುವ ದೇಶವಾದ ಪಾಕಿಸ್ಥಾನದೊಂದಿಗೆ ರಷ್ಯಾ ಜಂಟಿ ಮಿಲಿಟರಿ ಸಮರಾಭ್ಯಾಸ ನಡೆಸುತ್ತಿರುವುದಕ್ಕೆ ತನ್ನ ವಿರೋಧವನ್ನು ತಿಳಿಯಪಡಿಸಿದ ಭಾರತವು ರಷ್ಯಾ ತನ್ನ ಹಿತಾಸಕ್ತಿಗಳನ್ನು ಅರಿತುಕೊಳ್ಳುತ್ತಿರುವುದರ ಬಗ್ಗೆ ತನಗೆ ಸಂತೃಪ್ತಿಯಾಗಿದೆ ಎಂದೂ ಭಾರತ ಹೇಳಿದೆ.
ಭಾರತದ ಹಿತಾಸಕ್ತಿಯನ್ನು ರಷ್ಯಾ ತಿಳಿದುಕೊಂಡಿರುವುದಕ್ಕೆ ನಮಗೆ ತೃಪ್ತಿಯಾಗಿದೆ. ಭಾರತದ ಹಿತಾಸಕ್ತಿಗೆ ವಿರುದ್ದವಾಗಿ ಯಾವುದನ್ನು ಅವರು ಎಂದಿಗೂ ಮಾಡಬಲಾರರು. ಈ ವಿಷಯದಲ್ಲಿ ಮನಸ್ಸುಗಳು ಬಲವಾಗಿ ಬೆಸೆದಿವೆ ಎಂದು ನಾನು ಭಾವಿಸುತ್ತೇನೆ ಎಂದು ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಹೇಳಿದರು. ಇತ್ತೀಚೆಗೆ ನಡೆದ ಪಾಕ್ – ರಷ್ಯಾ ಜಂಟಿ ಮಿಲಿಟರಿ ಸಮರಾಭ್ಯಾಸ ಬಗ್ಗೆ ಭಾರತದ ಕಳವಳಕ್ಕೆ ರಷ್ಯಾದ ಪ್ರತಿಕ್ರಿಯೆ ಬಗ್ಗೆ ಅವರನ್ನು ಕೇಳಲಾಗಿತ್ತು.
ಎಲ್ಲಾ ರೂಪದ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿದ ಮೋದಿ ಮತ್ತು ಪುಟಿನ್, ಅವರ ನಿಗ್ರಹಕ್ಕೆ ಸಮಗ್ರ ಅಂತರ್ರಾಷ್ಟ್ರೀಯ ಸಹಭಾಗಿತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದರೆಂದು ಜಂಟಿ ಹೇಳಿಕೆ ತಿಳಿಸಿದೆ.
Discussion about this post