Read - < 1 minute
ನವದೆಹಲಿ, ಅ.28: ಭಾರತದ ನೆಲದಲ್ಲೇ ಗೂಢಾಚಾರಿಕೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಪಾಕ್ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಭಂಡತನ ಪ್ರದರ್ಶಿಸಿರುವ ಪಾಕ್, ಭಾರತದ ವಿರುದ್ಧವೇ ತಿರುಗಿಬಿದ್ದಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ಭಾರತದಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಸೀತ್, ತನ್ನ ರಾಜತಾಂತ್ರಿಕ ಸ್ಥಾನಮಾನಕ್ಕೆ ಧಕ್ಕೆ ಬರುವಂತಹ ಕೆಲಸವನ್ನು ಪಾಕಿಸ್ಥಾನ ಎಂದಿಗೂ ಮಾಡುವುದಿಲ್ಲ. ಪಾಕಿಸ್ಥಾನ ರಾಯಭಾರಿ ಅಧಿಕಾರಿಗಳನ್ನು ವಶಕ್ಕೆ ಪಡೆದು, ಹಲ್ಲೆ ನಡೆಸಿರುವ ವಿದೇಶಾಂಗ ಸಚಿವ ಜೈಶಂಕರ್ ಅವರ ನಡೆಯನ್ನು ನಾವು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
ದೂತವಾಸ ಸಿಬ್ಬಂದಿಗಳನ್ನು ಅಕ್ರಮವಾಗಿ ಬಂಧಿಸಿ ಹಲ್ಲೆ ನಡೆಸಿರುವುದು ೧೯೬೧ರ ವಿಯೆನ್ನಾ ಒಡಂಬಡಿಕೆಯನ್ನು ಉಲ್ಲಂಘನೆ ಮಾಡಿದಂತಾಗಿದೆ ಎಂದು ಆರೋಪಿಸಿರುವ ಬಸೀತ್, ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ದೌರ್ಜನ್ಯದ ಕುರಿತು ವಿಶ್ವದ ಗಮನವನ್ನು ಬೇರೆಡೆ ಸೆಳೆಯು ಭಾರತ ಮಾಡಿರುವ ಕುತಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ.
ತಾನು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳದೇ, ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿರುವ ಪಾಕ್, ಭಾರತ ಮಾಡಿರುವ ಎಲ್ಲ ಆರೋಪಗಳನ್ನೂ ತಳ್ಳಿಹಾಕಿದೆ.
ಗಡಿಯಲ್ಲಿ ಪಾಕ್‌ನಿಂದ ಶೆಲ್ ದಾಳಿ
ಜಮ್ಮು ಕಾಶ್ಮೀರದ ಅಂತರ‌್ರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ಥಾನ ಶೆಲ್ ದಾಳಿ ನಡೆಸಿರುವ ಪರಿಣಾಮ ೩ ನಾಗರಿಕರಿಗೆ ಗಾಯಗೊಂಡಿದ್ದಾರೆ.
ಕಾಶ್ಮೀರದ ಹಿರಾನಗರ್ ಸೆಕ್ಟರ್‌ನಲ್ಲಿ ಪಾಕಿಸ್ಥಾನ ಶೆಲ್ ದಾಳಿ ನಡೆಸಿದ್ದು, ಇಬ್ಬರು ಯುವತಿಯರು ಹಾಗೂ ಓರ್ವ ವ್ಯಕ್ತಿ ಪಾಕ್ ಶೆಲ್ ದಾಳಿಗೆ ಸಿಲುಕಿ ಗಾಯಗೊಂಡಿದ್ದಾರೆ. ಇಂದು ಮುಂಜಾನೆ ೬ ಗಂಟೆ ವರೆಗೂ ಪಾಕಿಸ್ಥಾನ ಕಾಶ್ಮೀರದ ಹಲವು ಗ್ರಾಮಗಳಲ್ಲಿ ಶೆಲ್ ದಾಳಿ ನಡೆಸಿದೆ. ಪಾಕ್ ನಿರಂತರವಾಗಿ ಗಾಡಿಯಲ್ಲಿ ದಾಳಿ ನಡೆಸುತ್ತಿರುವುದರಿಂದ ಸುಮಾರು ೪೦೦ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಮತ್ತೊಂದು ಸೀಮಿತ ದಾಳಿ: ಶಿವಸೇನೆ ಎಚ್ಚರಿಕೆ
ಮುಂಬೈ: ಜಮ್ಮು ಕಾಶ್ಮೀರ ಗಡಿಯಲ್ಲಿ ಭಾರತೀಯ ಸೇನೆ ಮೇಲೆ ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್‌ಗಳ ದಾಳಿ ನಡೆಸುತ್ತಿರುವ ಪಾಕಿಸ್ಥಾನಕ್ಕೆ ಶಿವಸೇನೆ ಎಚ್ಚರಿಕೆ ನೀಡಿದ್ದು, ಮತ್ತೊಂದು ಸೀಮಿತ ದಾಳಿ ನಡೆಸಲು ಭಾರತ ಹಿಂಜರಿಯುವುದಿಲ್ಲ ಎಂದು ಇಂದು ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕಿ ಮನೀಷಾ ಕಯಾಂಡೆ, ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ ಬಳಿಕವೂ ಪಾಕಿಸ್ಥಾನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗಡಿಯಲ್ಲಿ ಈ ವರೆಗೂ ೩೦ಕ್ಕೂ ಹೆಚ್ಚು ಕದನ ವಿರಾಮ ಉಲ್ಲಂಘನೆಯನ್ನು ಮಾಡಲಾಗಿದೆ. ಕದನ ವಿರಾಮ ಉಲ್ಲಂಘನೆ ಪ್ರತೀನಿತ್ಯ ನಡೆಯುತ್ತಲೇ ಇರುತ್ತದೆ. ಪಾಕಿಸ್ಥಾನದ ಮೇಲೆ ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಬರುತ್ತಿದ್ದರೂ, ಇಂದಿಗೂ ನಮ್ಮ ಯೋಧರು ಗಡಿಯಲ್ಲಿ ಹುತಾತ್ಮರಾಗುತ್ತಿದ್ದಾರೆ. ಪಾಕಿಸ್ಥಾನದ ಈ ನಡೆಯ ವಿರುದ್ಧ ಭಾರತ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಬೇಕಿದೆ ಎಂದಿದ್ದಾರೆ.
Discussion about this post