Read - < 1 minute
ಮತ್ತೆ ಸಿದ್ದು ಸಂಪುಟಕ್ಕೆ ಜಾರ್ಜ್ ಸೇರ್ಪಡೆ!
ಬೆಂಗಳೂರು: ಸೆ:26; ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟ ಮತ್ತೆ ವಿಸ್ತರಣೆಯಾಗಿದ್ದು ಹಿರಿಯ ನಾಯಕ ಕೆ.ಜೆ.ಜಾರ್ಜ್ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಿದ್ದಾರೆ.
ಇಂದು ಬೆಳಿಗ್ಗೆ 10:15 ಕ್ಕೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೆ.ಜೆ.ಜಾರ್ಜ್ ಅವರಿಗೆ ರಾಜ್ಯಪಾಲ ವಾಜೂಭಾಯಿ ವಾಲಾ ಗೌಪ್ಯತಾ ಪ್ರತಿಜ್ಞಾ ವಿಧಿ ಭೋಧಿಸಿದರು.
ಡಿವೈಎಸ್ ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತು ಈ ಹಿಂದೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡಿವೈಎಸ್ ಪಿ ಎಂ.ಕೆ.ಗಣಪತಿ ಅವರು,ತಮ್ಮ ಸಾವಿಗೆ ಜಾರ್ಜ್,ಅಧಿಕಾರಿಗಳಾದ ಪ್ರಸಾದ್,ಮೊಹಂತಿ ಕಾರಣರು ಎಂದು ಆರೋಪಿಸಿ ಹೇಳಿಕೆ ನೀಡಿದ್ದರು
ಇದರ ಬೆನ್ನಲ್ಲೇ ವ್ಯಾಪಕ ಆಕ್ರೋಶಗಳು ಕೇಳಿ ಬಂದವಾದರೂ ಅಂತಿಮವಾಗಿ ಮಡಿಕೇರಿ ನ್ಯಾಯಾಲಯ,ಸಚಿವ ಜಾರ್ಜ್ ಸೇರಿದಂತೆ ಪ್ರಸಾದ್, ಮೊಹಂತಿ ಅವರ ವಿರುದ್ದ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿತ್ತು.
ಯಾವಾಗ ನ್ಯಾಯಾಲಯ ಎಫ್ಐಆರ್ ದಾಖಲಿಸಲು ಸೂಚನೆ ನೀಡಿತೋ? ಇದಾದ ನಂತರ ಅನಿವಾರ್ಯವಾಗಿ ಕೆ.ಜೆ.ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮ ನೀಡಿದ್ದರು.
ಆದರೆ ಅತ್ಯಪರೂಪ ಎಂಬಂತೆ ಸಿಐಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೂರ್ಣಗೊಳಿಸಿ ಮಡಿಕೇರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಲ್ಲದೆ ಜಾರ್ಜ್,ಪ್ರಸಾದ್ ,ಮೊಹಂತಿ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಿತ್ತು.
ಇದರ ಬೆನ್ನಲ್ಲೇ ಎಂ.ಕೆ.ಗಣಪತಿ ಅವರ ತಂದೆ ಕುಸಾಲಪ್ಪ ಹಾಗೂ ಸಹೋದರ ಮಾಚಯ್ಯ ಅವರು,ನ್ಯಾಯಯುತ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದರಾದರೂ ಕೆಲ ದಿನಗಳ ಹಿಂದೆ ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು.
ಹೀಗೆ ಸಿಐಡಿ ನೀಡಿದ ಕ್ಲೀನ್ ಚಿಟ್ ಹಾಗೂ ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ ಹಿನ್ನೆಲೆಯಲ್ಲಿ ಹೈಕಮಾಂಡ್ ವರಿಷ್ಟರ ಜತೆ ಮಾತುಕತೆ ನಡೆಸಿದ್ದ ಸಿಎಂ ಸಿದ್ಧರಾಮಯ್ಯ ಅವರು,ಕೆ.ಜೆ.ಜಾರ್ಜ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ಪಡೆದಿದ್ದರು.
ಅದರನುಸಾರ ಇಂದು ಕೆ.ಜೆ.ಜಾರ್ಜ್ ಅವರು ಪುನ: ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದು ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಂದ ಹಾಗೆ ರಾಜಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಗೃಹ ಸಚಿವ ಪರಮೇಶ್ವರ್ ಹಾಗೂ ಅವರ ಸಚಿವ ಸಂಪುಟದ ಬಹುತೇಕ ಸಚಿವರು ಮತ್ತು ಶಾಸಕರು ಸೇರಿದಂತೆ ಹಲ ಗಣ್ಯರು ಉಪಸ್ಥಿತರಿದ್ದರು.
ಹಗಲಿರುಳು ಜನಸೇವೆ: ಜಾರ್ಜ್
ಹಗಲಿರುಳು ಕರ್ನಾಟಕ ಜನತೆ ಸೇವೆ ಮಾಡುವುದಾಗಿ ನೂತನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ರಾಜಭವನದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮನ್ನು ಮತ್ತೆ ಸಚಿವರನ್ನಾಗಿ ಮಾಡಿರುವುದಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಯ ಸಿಕ್ಕಿದೆ. ಇದರಿಂದ ಪಕ್ಷಕ್ಕೂ ಗೆಲುವು ದೊರಕಿದಂತಾಗಿದೆ. ಈ ಪ್ರಕರಣದಲ್ಲಿ ಸಿಐಡಿ ಕ್ಲೀನ್ಚಿಟ್ ನೀಡಿದೆ. ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾ ಆಗಿದೆ. ಸಿಬಿಐ ತನಿಖೆ ಕೋರುವವರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಜಾರ್ಜ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
Discussion about this post