ಬೆಂಗಳೂರು, ಅ.12: ಮುಂಬೈ-ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಜೊತೆ ಕರ್ನಾಟಕ ಬಿಜೆಪಿ ನಿಯೋಗ ಬುಧವಾರ ಮಾತುಕತೆ ನಡೆಸಿದೆ.
ಬುಧವಾರ ಮುಂಬೈನಲ್ಲಿ ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಧಾರವಾಡ ಸಂಸದ ಹಾಗೂ ಬಿಜೆಪಿ ಮುಖಂಡ ಪ್ರಹ್ಲಾದ್ ಜೋಶಿ ಅವರುಗಳು ಫಡ್ನವೀಸ್ ಜೊತೆ 45 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ.
ಇದೇ 21ರಂದು ಮುಂಬೈನಲ್ಲಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿ ಸಭೆ ನಿಗದಿಯಾಗಿದೆ. ಸಭೆಗೂ ಮುನ್ನವೇ ಅನಂತ್ ಕುಮಾರ್ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಉಭಯ ರಾಜ್ಯಗಳ ಮುಖಂಡರ ಮಾತುಕತೆ ವಿವರ ಲಭ್ಯವಾಗಿಲ್ಲವಾದರೂ ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅನಂತ್ ಕುಮಾರ್ ನಿಯೋಗ ಮಾಡಿದೆ ಎನ್ನಲಾಗಿದೆ.
ಮುಂಬೈ-ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ.
ಮಹದಾಯಿ ನದಿಯಿಂದ ಏಳೂವರೆ ಟಿಎಂಸಿ ನೀರನ್ನು ಕಳಸಾ-ಬಂಡೂರಿ ನಾಲಾ ಮೂಲಕ ಪೂರೈಕೆ ಮಾಡಲಾಗುವುದು. ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಿಲ್ಲ. ಹೀಗಾಗಿ ಯೋಜನೆಗೆ ಅಡ್ಡಿಪಡಿಸದಂತೆ ಮಾನವೀಯತೆಯಿಂದ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಗೋವಾ ಮುಖ್ಯಮಂತ್ರಿ ಲಕ್ಷ್ಮಿ ಪರ್ಸೇಕರ್ ಜೊತೆಯೂ ಮಾತುಕತೆ ನಡೆಸಲಾಗಿದೆ. ನ್ಯಾಯಾಧಿಕರಣದ ಸೂಚನೆಯಂತೆ ಈ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸುವುದು ಸೂಕ್ತ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದೇ ಸಲಹೆಯನ್ನೇ ನೀಡಿದ್ದಾರೆ.
ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಇದೇ 21ರಂದು ಸಭೆ ನಡೆಸುತ್ತಿರುವ ಕಾರಣ ಪರಸ್ಪರ ಮಾತುಕತೆ ಮೂಲಕವೇ ಇತ್ಯರ್ಥಪಡಿಸಿಕೊಂಡು ಯೋಜನೆಗೆ ಒಪ್ಪಿಗೆ ಸೂಚಿಸುವಂತೆ ಅನಂತ್ ಕುಮಾರ್, ಶೆಟ್ಟರ್ ಮತ್ತು ಜೋಶಿ ಕೋರಿಕೊಂಡಿದ್ದಾರೆ.
ಕೆಲದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಗೆ ಪತ್ರ ಬರೆದು ಕರ್ನಾಟಕ ಮತ್ತು ಗೋವಾ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆ ನಡೆಸುವಂತೆ ಸೂಚಿಸಿದ್ದರು.
ಈಗಾಗಲೇ 21ರಂದು ಮುಂಬೈನಲ್ಲಿ ಸಭೆ ನಿಗದಿಯಾಗಿದ್ದು, ಕರ್ನಾಟಕ ಸರ್ಕಾರ ತೆಗೆದುಕೊಳ್ಳಬೇಕಾದ ನಿಲುವಿನ ಬಗ್ಗೆ ಚರ್ಚಿಸಲು 19 ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
Discussion about this post