ಉಡುಪಿ, ಅ.13: ಇಂದು ನಮ್ಮ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ತಮ್ಮ ಜ್ಞಾನ, ವಿದ್ಯೆ ಮತ್ತು ಸಾಮರ್ಥ್ಯದಿಂದ ಸಮಾನ ಸ್ಥಾನಮಾನಗಳು ದೊರೆಯುತ್ತಿವೆ. ಜೊತೆಗೆ ಮಹಿಳೆಯರು ಆಂಗ್ಲ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ತಮ್ಮ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ವಿಷಾದಿಸಿದ್ದಾರೆ.
ಉಡುಪಿ ಸಾರ್ವಜನಿಕ ಶಾರದೋತ್ಸವ ಸಮಿತಿಯ ಪ್ರಥಮ ಶಾರದೋತ್ಸವದಂಗವಾಗಿ ನಡೆದ ಮಾತೃಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ವಾಂಸರನ್ನು ವಾಗ್ವಾದದಲ್ಲಿ ತನ್ನ ಸಾಮರ್ಥ್ಯದಿಂದ ಸೋಲಿಸಿದ ಮಹಿಳೆಯರ ಉದಾಹರಣೆಗಳು ನಮ್ಮ ಇತಿಹಾಸದಲ್ಲಿದೆ. ಕವಿಗಳು ಕೂಡ ಹೆಣ್ಣಿನ ಶ್ರೇಷ್ಟತೆಯನ್ನು ಹಾಡಿ ಹೊಗಳಿದ್ದಾರೆ. ಆದರೇ ಇಂದಿನ ಮಹಿಳೆಯರು ತಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ತಮ್ಮ ಸ್ಥಾನಮಾನಕ್ಕೆ ಧಕ್ಕೆ ತರುವಂತೆ ಬಳಸಿಕೊಳ್ಳಬಾರದು, ಭಾರತೀಯತೆಯನ್ನು ಕಳೆದುಕೊಳ್ಳಬಾರದು ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್‌ರಾವ್ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ಬ್ಯಾಂಕಿನ ಉಪಮಹಾಪ್ರಬಂಧಕಿ ವಿದ್ಯಾಲಕ್ಷ್ಮೀ, ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿ ಶ್ರೀವಲ್ಲಿ ಎ.ಶೆಟ್ಟಿ, ಮಾತೃ ಮಂಡಳಿಯ ಸುಪ್ರಭಾ ಆಚಾರ್ಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜಕಿ ಜ್ಯೋತಿ ಶೆಟ್ಟಿ ಆಗಮಿಸಿದ್ದರು.
ಶಾರದೋತ್ಸವ ಸಮಿತಿಯ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಅತಿಥಿಗಳನ್ನು ಅಭಿನಂದಿಸಿದರು, ಉಪಾಧ್ಯಕ್ಷೆ ತಾರಾ ಆಚಾರ್ಯ ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು, ಸಾಂಸ್ಕೃತಿಕ ಕಾರ್ಯದರ್ಶಿ ಜ್ಯೋತಿ ದೇವಾಡಿಗ ಸ್ವಾಗತಿಸಿ, ಕಾರ್ಯದರ್ಶಿ ಶೋಭಾ ಶೆಟ್ಟಿ ವಂದಿಸಿದರು.
Discussion about this post