ಮಣಿಪಾಲ, ಸೆ.8: ಚೆನೈನ ಐ.ಐ.ಟಿ. ಮತ್ತು ವಿಂಗ್ಫೋಟೆಕ್ ಎಕ್ಸ್ ಲೆನ್ಸ್ ಸಂಸ್ಥೆಯ ವತಿಯಿಂದ ನಡೆಯುವ ರಾಷ್ಟ್ರಮಟ್ಟದ 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳ ರೋಬೋಟ್ ತಂತ್ರಜ್ಞಾನ ಕಾರ್ಯಾಗಾರ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆ ಉತ್ಕ್ರಾಂತಿ – 2016ರ ಅಂತರ್ಶಾಲಾ ಹಂತದ ಸ್ಪರ್ಧೆಯು ಇಲ್ಲಿನ ಮಾಧವ ಕೃಪಾ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಉಡುಪಿ ಹಾಗೂ ದ.ಕ. ಜಿಲ್ಲೆಯ ವಿವಿಧ ಶಾಲೆಗಳಿಂದ ಸುಮಾರು 100 ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ನವದೆಹಲಿಯ ಸುಮಿತ್ ಶರ್ಮಾ ಹಾಗೂ ಚೆನೈ ಐ.ಐ.ಟಿ.ಯ ಧನಿಷ್ಟ್ ಭಾನ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಅತಿಥೇಯ ಶಾಲೆಯ ಶಿಕ್ಷಕಿ ಶೈಲಜಾ ಎಂ.ಬಾಯರಿ ಈ ಕಾರ್ಯಗಾರದ ಸಂಯೋಜಕಿಯಾಗಿ ಕಾರ್ಯನಿರ್ವಹಿಸಿದ್ದರು.
ವಿದ್ಯಾರ್ಥಿಗಳು ಎ.ವಿ.ಆರ್. ಸ್ಟೂಡಿಯೋ ಬಳಸಿ, ತಾವೇ ಸ್ವತಃ ಯೋಜಿಸಿ ರೋಬೋಟ್ ಮಾಡುವುದರ ಮೂಲಕ ತಮ್ಮ ಕಲಿಕೆಗೆ ಪ್ರಾತ್ಯಕ್ಷಿಕ ರೂಪಕೊಟ್ಟರು. ಪ್ರಾಯೋಗಿಕ ಆಧಾರಿತ ಈ ಸ್ಪರ್ಧೆಯಲ್ಲಿ ಮಾಧವಕೃಪಾ ಶಾಲೆಯ ಎರಡು ತಂಡಗಳು (ಸತ್ಯಜಿತ್‌ಕರಣ್, ಆದಿತ್ಯ ನಾಯಕ್, ಶ್ರೇಯಸ್ ಪೂಜಾರಿ, ಅಮೋಲ್ ಡಿ ಸೋನ್ಸ್, ಅಭಯ್ ಮಯ್ಯ ಮತ್ತು ಅಕ್ಷರಾ ನಾಯಕ್, ಪೂರ್ವಿ ನಾಯಕ್, ತೇಜಸ್ವಿನಿ ಕೈಲಾಜೆ, ಆರತಿ ಬಾಗ್ಲೋಡಿ, ಪ್ರಾಜಕ್ತ ಮಲ್ಯ) ವಿಜೇತರಾಗಿದ್ದು, 2017ರ ಎಪ್ರಿಲ್ ನಲ್ಲಿ ಚೆನ್ನೈ ಐ.ಐ.ಟಿ.ಯಲ್ಲಿ ನಡೆಯುವ ಅಂತಿಮ ಸುತ್ತಿನ ಸ್ಪರ್ಧೆ ಹಾಗೂ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
Discussion about this post