ಮಣಿಪಾಲ, ಅ.13: ಇಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಂದಾಪುರ ತಾಲೂಕಿನ ಬೈಂದೂರಿನ ನಿವಾಸಿ ಹಿಮಾಂಶುವಿನ(16) 5 ಅಂಗಾಂಗಗಳನ್ನು ಆತನ ಹೆತ್ತವರ ದಾನ ಮಾಡಿದ್ದಾರೆ.
ಹಿಮಾಂಶುವಿನ ತಂದೆ ಡಾ. ರವಿರಾಜ್ ಅವರು ತಮ್ಮ ಮಗನ ಹೃದಯ ಕವಾಟ, 2 ಕಿಡ್ನಿ, ಲೀವರ್ ಮತ್ತು ಕಣ್ಣಿನ ಕಾರ್ನಿಯಗಳನ್ನು ದಾನ ಮಾಡುವುದಕ್ಕೆ ಇಚ್ಚಿಸಿದಂತೆ, ಮಂಗಳವಾರ ತಜ್ಞವೈದ್ಯರು ಈ ಅಂಗಗಳನ್ನು ದೇಹದಿಂದ ಬೇರ್ಪಡಿಸಿ, ಅಂಗವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಜೋಡಿಸಲಾಗಿದೆ.
ಹೃದಯ ಕವಾಟ ಮತ್ತು ಲಿವರನ್ನು ಬೆಂಗಳೂರಿನ ಕೊಂಡೊಯ್ಯಲಾಯಿತು. 2 ಕಿಡ್ನಿಗಳಲ್ಲಿ ಒಂದನ್ನು ಶಿವಮೊಗ್ಗ ಮತ್ತು ಕುಂದಾಪುರ ರೋಗಿಗಳಿಗೆ ಮಣಿಪಾಲದಲ್ಲಿಯೇ ಜೋಡಿಸಲಾಗಿದೆ. ಕಣ್ಣಿನ ಕಾರ್ನಿಯವನ್ನು ಆಸ್ಪತ್ರೆಯಲ್ಲಿ ಸಂರಕ್ಷಿಸಲಾಗಿದೆ.
ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಯಿಂದ ಈ ರೀತಿ ಅಂಗಾಂಗಗಳನ್ನು ದಾನವಾಗಿ ಪಡೆದು ಬೇರೆ ರೋಗಿಗಳಿಗೆ ಜೋಡಿಸಿದ 2 ಕಾರ್ಯಾಚರಣೆ ಇದಾಗಿದೆ. ಈ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಉಸ್ತುವಾರಿ ವಹಿಸಿದ್ದ ಆಸ್ಪತ್ರೆಯ ಸಹಲೈದ್ಯಾಧಿಕಾರಿ ಡಾ.ಪದ್ಮರಾಜ ಹೆಗ್ಡೆ ತಿಳಿಸಿದ್ದಾರೆ.
ಅಂಗಾಂಗಗಳನ್ನು ತೆಗೆಯುವ ಮೊದಲು ಕಾನೂನು ಪ್ರಕಾರ 4 ಮಂದಿ ತಜ್ಞ ವೈದ್ಯರು ಭಾನುವಾರ ದಾನಿ ಬ್ರೈನ್ ಡೆಡ್ ಆಗಿದ್ದಾರೆ ಎಂದು 24 ಗಂಟೆಗಳ ಅಂತರದಲ್ಲಿ 2 ಬಾರಿ ಘೋಷಿಸಿದರು. ಮಂಗಳವಾರ ಮುಂಜಾನೆ 2.30ಕ್ಕೆ ಶಸ್ತ್ರಕ್ರಿಯೆಯ ಮೂಲಕ ಡಾ.ಪದ್ಮರಾಜ ಹೆಗ್ಡೆ ಮತ್ತು ಡಾ. ಅರುಣ್ ಚಾವ್ಲ ಅವರು ಅಂಗಾಂಗಳನ್ನು ದೇಹದಿಂದ ಬೇರ್ಪಡಿಸಿದರು.
ನಂತರ ಬೆಳಿಗ್ಗೆ 7 ಗಂಟೆಗೆ, ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಿಂದ ಬಂದಿದ್ದ ಡಾ. ರವಿ ಚಂದರ್ ಅವರು ಹೃದಯದ ಕವಾಟ ಮತ್ತು ಲಿವರನ್ನು ಸೂಕ್ತ ಸಂರಕ್ಷಣೆಯೊಂದಿಗೆ ಮಣಿಪಾಲದಿಂದ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಸಾಗಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಣಿಪಾಲ – ಮಂಗಳೂರು ರಸ್ತೆಯನ್ನು ಝಿರೋ ಟ್ರಾಫಿಕ್‌ಗೆ ಒಳಪಡಿಸಿದ್ದರು. ೮ ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಡಾ. ರವಿ ಅವರು ವಿಮಾನದಲ್ಲಿ ಅಂಗಾಂಗಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಹೋದರು.
ಅಂಗಗಳನ್ನು ಪಡೆದುಕೊಂಡ ರೋಗಿಗಳು ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ ಎಂದು ಡಾ. ಪದ್ಮರಾಜ ತಿಳಿಸಿದ್ದಾರೆ ಮತ್ತು ಅಂಗಗಳನ್ನು ದಾನ ಮಾಡುವುದಕ್ಕೆ ಒಪ್ಪಿದ ಡಾ. ರವಿರಾಜ್ ಅವರನ್ನು ಅಭಿನಂದಿಸಿದ್ದಾರೆ.
ಪಿಯುಸಿ ವಿದ್ಯಾರ್ಥಿಗಳಾಗಿರುವ ಹಿಮಾಂಶು ಮತ್ತು ಹರ್ಷಿತ್ ಶನಿವಾರ ಮಣಿಪಾಲದ ಮಣ್ಣಿಪಳ್ಳ ಎಂಬಲ್ಲಿ ಅತೀವೇಗದಿಂದ ಬೈಕ್ ಸವಾರಿ ಮಾಡಿ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ತೀವ್ರ ಗಾಯಗಳಾಗಿ ಇಬ್ಬರೂ ಮೃತಪಟ್ಟಿದ್ದಾರೆ.
Discussion about this post