ಮೈಸೂರು. ಅ.5: ರೈತ ದಸರಾ ಉಪಸಮಿತಿ ವತಿಯಿಂದ ದಸರಾ ಮಹೋತ್ಸವ ಅಂಗವಾಗಿ ಇಂದು ತಾಲ್ಲೂಕಿನ ನಾಗನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗಾಗಿ ಕೆಸರು ಗದ್ದೆ ಓಟ ಸ್ಪರ್ಧೆಗೆ ಬುಧವಾರ ಪ್ರಗತಿಪರ ರೈತ ನಾಗೇಗೌಡ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಮ್ಮ ಪ್ರಾಚೀನ ಕ್ರೀಡೆಗಳು ಇಂದಿನ ಪೆಡಂಭೂತ ಕ್ರಿಕೆಟ್ ಪಂದ್ಯದಿಂದಾಗಿ ನಶಿಸುವ ಹಂತ ತಲುಪಿವೆ. ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಇಂದು ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಆಯೋಜಿಸಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಇಂತಹ ಸ್ಪರ್ಧೆಗಳು ಹೆಚ್ಚಾಗಿ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುತ್ತಿತ್ತು. ಈಗ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲೂ ನಡೆಸಲು ಈ ಬಾರಿ ದಸರಾ ಉಪಸಮಿತಿಯು ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸುವುದರ ಮೂಲಕ ರೈತರಲ್ಲಿ ಹುರುಪು ಮೂಡಿಸಲಾಗುವುದೆಂದು ಎಂದ ಅವರು, ಕೆಸರು ಗದ್ದೆ ಓಟದಲ್ಲಿ ಪಾಲ್ಗೊಳ್ಳುವುದು ತಮಗೆ ಬಹಳ ಇಷ್ಟು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ರೈತರು ಮತ್ತು ಮಹಿಳಾ ರೈತರು ಪಾಲ್ಗೊಂಡಿದ್ದರು. ಸ್ಪರ್ಧಾ ಸಮಯದಲ್ಲಿ ಸ್ಪರ್ಧಾಳುಗಳು ಕೆಸರು ಗದ್ದೆಯಲ್ಲಿ ಬಿದ್ದು ಏಳುತ್ತಿದ್ದುದ್ದನ್ನು ಸಾರ್ವಜನಿಕರು ವೀಕ್ಷಿಸಿ ಸಂತಸ ಅನುಭವಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಅಂತಿಮ ದಿನದಂದು ಬಹುಮಾನಗಳನ್ನು ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
Discussion about this post