Read - < 1 minute
ಭಾರತದ ಸಂಯಮ ನಿರ್ಲಕ್ಷಿಸಿದರೆ ಪಾಕ್ ಒಂಟಿಯಾಗಲಿದೆ
ವಾಷಿಂಗ್ಟನ್:ಉರಿ ಭಯೋತ್ಪಾದಕ ದಾಳಿಯ ಬಳಿಕವೂ ಭಾರತ ತೋರಿರುವ ಸಂಯಮವನ್ನು ಮತ್ತು ಪ್ರಧಾನಿ ಮೋದಿಯವರ ಸಹಕಾರ ಹಸ್ತವನ್ನು ನಿರ್ಲಕ್ಷ್ಯ ಮಾಡಿದ್ದೇ ಆದರೆ ಪಾಕಿಸ್ಥಾನ ವಿಶ್ವಸಮುದಾಯದಿಂದ ಬಹಿಷ್ಕೃತಗೊಳ್ಳುವ ಅಪಾಯವಿದೆ ಎಂದು ಅಮೆರಿಕದ ಮಾಧ್ಯಮಗಳು ಪಾಕಿಗೆ ಎಚ್ಚರಿಕೆ ನೀಡಿವೆ.ಈಗ ಭಾರತ ತೋರಿರುವ ಸಂಯಮ ವ್ಯೂಹಾತ್ಮಕವಾದುದು ಎಂದು ಅದು ಬಣ್ಣಿಸಿದೆ.
ಉರಿ ಭಯೋತ್ಪಾದಕ ದಾಳಿಯಿಂದಾಗಿ ಪಾಕಿಸ್ಥಾನ ಮತ್ತು ಭಾರತದ ನಡುವಿನ ಬಾಂಧವ್ಯ ಹಾಳಾಗಿರುವಂತೆಯೇ ಪಾಕ್ ಸರ್ಕಾರದ ನಡೆಯನ್ನು ಅಮೆರಿಕದ ಖ್ಯಾತ ಪತ್ರಿಕೆ ಟೀಕಿಸಿದ್ದು, ಭಾರತದ ಸಂಯಮವನ್ನು ಲಘುವಾಗಿ ಪರಿಗಣಿಸದಿರಿ. ಮೋದಿ ಸಹಕಾರದ ಕೊಡುಗೆಯನ್ನು ಅವಮಾನಿಸದಿರಿ.ತಪ್ಪಿದಲ್ಲಿ ವಿಶ್ವಸಮುದಾಯದಿಂದ ಬಹಿಷ್ಕಾರಕ್ಕೆ ಗುರಿಯಾಗಬೇಕಾದೀತು ಎಂದು ಅದು ಪಾಕ್ಗೆ ಎಚ್ಚರಿಕೆ ಕೊಟ್ಟಿದೆ.
ದಿ ವಾಲ್ ಸ್ಟ್ರೀಟ್ ಜರ್ನಲ್ ಉರಿ ಭಯೋತ್ಪಾದಕ ದಾಳಿಯ ಬಳಿಕದ ಬೆಳವಣಿಗೆಗಳನ್ನು ವಿಶ್ಲೇಷಿಸಿದೆ. ಉರಿ ಭಯೋತ್ಪಾದಕ ದಾಳಿ ಬಳಿಕ ಪಾಕ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಖತಿಗೊಂಡಿರಬಹುದು. ಆದರೆ ಪಾಕ್ ಈ ರೀತಿ ಪದೇ ಪದೇ ಭಾರತದ ಸಹಕಾರವನ್ನು ನಿರಾಕರಿಸುತ್ತಿದ್ದರೆ ಖಂಡಿತಾ ಮುಂದಿನ ದಿನಗಳಲ್ಲಿ ಅದು ವಿಶ್ವಸಮುದಾಯದಿಂದಲೇ ಪ್ರತ್ಯೇಕಗೊಳ್ಳುವ ಆಪತ್ತಿಗೆ ಸಿಲುಕಲಿದೆ . ಈಗಾಗಲೇ ಭಯೋತ್ಪಾದನೆ ಮತ್ತು ಅಸ್ಥಿರ ರಾಜಕೀಯದಿಂದಾಗಿ ಪಾಕ್ನಿಂದ ಎಲ್ಲರೂ ದೂರವಿರಲು ಬಯಸುತ್ತಿದ್ದಾರೆ. ಹೀಗಿರುವಾಗ ಪಾಕ್ ಈಗ ನಡೆದುಕೊಳ್ಳುತ್ತಿರುವ ರೀತಿ ಅದು ಇನ್ನಷ್ಟು ಇಂತಹ ಆಪತ್ತಿಗೆ ಸಿಲುಕುವ ರೀತಿಯಲ್ಲೇ ಇದೆ ಎಂದು ಹೇಳಿದೆ.
ಪಾಕ್ ಭಯೋತ್ಪಾದಕರಿಗೆ ಗಡಿಯಲ್ಲಿ ಶಸ್ತ್ರಾಸ್ತ್ರ ಒದಗಿಸಿ ಬೆಂಬಲಿಸುವ ನಿಲುವನ್ನು ಇದೇ ರೀತಿ ಮುಂದುವರಿಸಿದ್ದೇ ಆದರೆ ಇದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ಯಾವುದೇ ಕಠಿಣ ಕ್ರಮಕ್ಕೆ ಬಲವಾದ ಸಮರ್ಥನೆ ಲಭಿಸಿದಂತಾಗಲಿದೆ. ಭಾರತದ ಈ ಹಿಂದಿನ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಭಯೋತ್ಪಾದನೆ ವಿರುದ್ಧ ಸಮರ್ಥವಾಗಿ ಹೋರಾಡಲು ವಿಫಲವಾಗಿದ್ದವು ಎಂಬುದಾಗಿ ಅದು ವಿಶ್ಲೇಷಿಸಿದೆ.
Discussion about this post