ಆಗ ಕಾಂಗ್ರೆಸ್ಸಿನಲ್ಲಿ ಗಾಂಧಿಯವರದ್ದೇ ಅಂತಿಮ ಮಾತು. ಸರಿತಪ್ಪುಗಳ ವಿಚಾರವಾಗಿ ಅವರ ತೀರ್ಮಾನವೇ ಅಂತಿಮ ನಿರ್ಣಯ! ಅವರ ಮುಖಂಡತ್ವ ಬೇಕೆಂದಾದರೆ ಕಾಂಗ್ರೆಸ್ ಅವರ ನಿರ್ಧಾರಗಳನ್ನು ಒಪ್ಪಬೇಕಿತ್ತು. ಇಲ್ಲದಿದ್ದರೆ ಅವರು ತಮ್ಮದೇ ಹಾದಿ ಹಿಡಿಯುತ್ತಿದ್ದರು. ಹಾಗಾಗಿಯೇ ಕಾಂಗ್ರೆಸ್ ತನ್ನ ಬುದ್ಧಿಯನ್ನು ಅಕ್ಷರಶಃ ಗಾಂಧಿಗೆ ಮಾರಿಕೊಂಡಿತ್ತು. ಗಾಂಧಿಯ ಚಂಚಲತೆ, ನೈತಿಕತೆಯೇ ಆಧ್ಯಾತ್ಮಿಕತೆಯೆಂದು ಸಾಧಿಸುವ ರೀತಿ, ದೂರದೃಷ್ಟಿಯಿಲ್ಲದ-ಪರಿಣಾಮದ ಬಗೆಗೆ ಆಲೋಚಿಸದ ನಡೆಗಳಿಗೆ ಕಾಂಗ್ರೆಸ್ ಹೆಜ್ಜೆಹಾಕಲೇಬೇಕಾದಂತಹ ಪರಿಸ್ಥಿತಿಯಿತ್ತು. ಸತ್ಯಾಗ್ರಹಿ ಎಂದಿಗೂ ವಿಫಲನಾಗುವುದಿಲ್ಲ ಎಂದು ಪದೇ ಪದೇ ತನ್ನ ನಿರ್ಧಾರಗಳನ್ನು ಸಮರ್ಥಿಸಲು ಬಳಸುತ್ತಿದ್ದರು ಗಾಂಧಿ. ಆದರೆ ಸತ್ಯಾಗ್ರಹಿ ಯಾರೆಂದು ಅವರ ಹೊರತು ಬೇರಾರಿಗೂ ತಿಳಿದಿರಲಿಲ್ಲ. ಅವರ ಸತ್ಯಾಗ್ರಹಿಯ ವ್ಯಾಖ್ಯೆ ಕಾಲ-ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುತ್ತಿತ್ತು.
ಗಾಂಧಿಯ ರಾಜಕೀಯ ಅವೈಚಾರಿಕವಾದುದು ಎಂದು ಯೋಚಿಸಿದವರೆಲ್ಲಾ ಒಂದೋ ಕಾಂಗ್ರೆಸ್ ಬಿಟ್ಟು ದೂರಸರಿಯಬೇಕಾಯಿತು ಅಥವಾ ಗಾಂಧಿಯ ಇಷ್ಟಕ್ಕೆ ತಕ್ಕಂತೆ ಕಷ್ಟವಾದರೂ ನಡೆದುಕೊಳ್ಳಬೇಕಾಯಿತು. ಗಾಂಧಿಯವರ ಹಠಮಾರಿತನ-ಬೇಜವಾಬ್ದಾರಿ-ಪ್ರಮಾದಗಳ ಮೇಲೆ ಪ್ರಮಾದ-ವಿಫಲತೆಗಳಿಂದ ದುರಂತಗಳ ಮೇಲೆ ದುರಂತಗಳಾದವು. 33 ವರ್ಷಗಳ ರಾಜಕೀಯ ಜೀವನದಲ್ಲಿ ಗಾಂಧಿ ಸಾಧಿಸಿದ್ದೇನು? ಒಡೆದ ಭಾರತವೇ? ಲಕ್ಷಗಟ್ಟಲೆ ಹಿಂದೂಗಳ ಕೊಲೆಯೇ? ಸ್ವಾರ್ಥಿ, ಚಪಲಚೆನ್ನಿಗರಾಯ ನೆಹರೂ ಎಂಬ ಉತ್ತರಾಧಿಕಾರಿಯೇ? ಅವರ ಪಟ್ಟ ಶಿಷ್ಯ ನೆಹರೂಗೇ ಗಾಂಧಿಯ ಮುಂದಿನ ನಡೆ ಏನು, ಏಕಾಗಿ ಎನ್ನುವುದರ ಅರಿವಿರಲಿಲ್ಲ. ನೆಹರೂ ಅತ್ತಲಿರಲಿ ಸ್ವತಃ ಗಾಂಧಿಗೇ ತಾನು ಮುಂದೇನು ಮಾಡುತ್ತೇನೆ ಎನ್ನುವುದರ ಖಚಿತತೆಯಿರಲಿಲ್ಲ. “ನಮ್ಮ ಮೇಲೆ ಅಚ್ಚರಿಯ ಮಳೆ ಸುರಿಸುವುದರಿಂದ ಹೆದರಿಕೆಯಾಗುತ್ತದೆ ಎಂದು ನಾನವರಿಗೆ ಹೇಳಿದ್ದೆ(1931). ಹದಿನಾಲ್ಕು ವರ್ಷಗಳಿಂದ ಅವರ ಒಡನಾಡಿಯಾಗಿದ್ದರೂ ಅವರನ್ನು ಅರ್ಥ ಮಾಡಿಕೊಳ್ಳಲಾಗಲಿಲ್ಲ. ತಮ್ಮಲ್ಲಿ ತಿಳಿಯದಿರುವಿಕೆಯ ಅಸ್ತಿತ್ವವಿದೆ ಎನ್ನುವುದು ಸ್ವತಃ ಅವರಿಗೂ ಗೊತ್ತಿತ್ತು. ಸ್ವತಃ ತಾನು ಅದಕ್ಕೆ ಉತ್ತರ ಕೊಡಲಾರೆ. ಮತ್ತು ಇದು ತನ್ನನ್ನು ಎಲ್ಲಿಗೆ ಒಯ್ಯುತ್ತದೆ ಎಂದು ಹೇಳಲಾರೆ ಎನ್ನುತ್ತಿದ್ದರು” ಎಂದು ನೆಹರೂ ಮಹಾಶಯ ಬರೆದಿಟ್ಟಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಆಚಾರ್ಯ ಕೃಪಲಾನಿ ಗಾಂಧಿ ಜೊತೆ ಸುಮಾರು 30 ವರ್ಷಗಳ ಕಾಲ ಕೆಲಸ ಮಾಡಿದವರು. ಗಾಂಧಿಯ ಬಗ್ಗೆ ಅವರ ಅಭಿಪ್ರಾಯ:- “ಸಾಮೂಹಿಕ ಆಧಾರದಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಹಾದಿಯನ್ನು ಗಾಂಧಿ ಇನ್ನೂ ಕಂಡುಕೊಂಡಿಲ್ಲ. ಅವರು ಅಹಿಂಸೆ-ಅಸಹಕಾರದ ನಿಶ್ಚಿತ ಪಥ ತೋರಿದಾಗ ನಾವದನ್ನು ಕನಿಷ್ಟ ಯಾಂತ್ರಿಕವಾಗಿಯಾದರೂ ಪಾಲಿಸಿದೆವು. ಆದರೆ ಇಂದು ಸ್ವತಃ ಅವರು ಕತ್ತಲಲ್ಲಿ ತಡಕಾಡುತ್ತಿದ್ದಾರೆ. ಅವರು ಇಡೀ ಭಾರತಕ್ಕಾಗಿ ಬಿಹಾರದಲ್ಲಿ ಹಿಂದೂ-ಮುಸ್ಲಿಮ್ ಸಮಸ್ಯೆ ಬಗೆಹರಿಸುತ್ತಿರುವುದಾಗಿ ಹೇಳುತ್ತಿದ್ದರು. ಆದರೆ ಉದ್ದೇಶಿತ ಗುರಿಯತ್ತ ಒಯ್ಯುವ ಖಚಿತ ಮಾರ್ಗಗಳೇ ಅವರಲ್ಲಿರಲಿಲ್ಲ. ಅವರು ತಮ್ಮ ನೀತಿಗಳನ್ನೇನೋ ಹೇಳುತ್ತಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಅವರಿಂದಾಗುವುದಿಲ್ಲ. ಮೊಮ್ಮಗಳು ಮನು ಜೊತೆ ಹಾಸಿಗೆ ಹಂಚಿಕೊಳ್ಳುವ ಕುರಿತಂತೆ ಅದು ತಮ್ಮ ಬ್ರಹ್ಮಚರ್ಯ ಯಜ್ಞದ ಒಂದು ಭಾಗ ಎಂದು ಗಾಂಧಿ ಹೇಳಿದ್ದರು. ಆಗ ಕೃಪಲಾನಿ “ಯಾವುದೇ ಪಾಪಿಷ್ಟ ವ್ಯಕ್ತಿ ಕೂಡಾ ನೀವು ಮಾಡಿದಂತೆ ಮಾಡುವುದಿಲ್ಲ ” ಎಂದು ಪ್ರತಿಕ್ರಿಯಿಸಿದ್ದರು. ಅರವಿಂದರಂತೂ “ಗಾಂಧಿ ಮಾಡುತ್ತಿರುವುದಾದರೂ ಏನು? “ಅಹಿಂಸಾ ಪರಮೋ ಧರ್ಮ, ಜೈನ ಮತ, ಹರತಾಳ, ಸಾತ್ವಿಕ ಪ್ರತಿರೋಧ ಇತ್ಯಾದಿಗಳ ಸತ್ಯಾಗ್ರಹ ಎನ್ನುವ ಕಲಸುಮೇಲೋಗರ. ಅವರು ತರುತ್ತಿರುವುದು ಭಾರತೀಯಕರಣಗೊಳಿಸಿದ ಟಾಲ್ ಸ್ಟಾಯ್ ವಾದ. ಅದು ದೀರ್ಘಕಾಲ ಉಳಿದರೆ ಭಾರತೀಯಕರಣಕ್ಕೊಳಗಾದ ಬೋಲ್ಷೆವಿಕ್ ವಾದವಾಗಬಹುದು. ಆತನ ಕಾರ್ಯ ನೈಜವಾದುದಲ್ಲ” ಎಂದಿದ್ದರು. 1926ರಲ್ಲಿ, “ಗಾಂಧಿಯ ಚಳುವಳಿ ಅಭಾಸಕ್ಕೂ ಗೊಂದಲಕ್ಕೂ ಕಾರಣವಾಗುತ್ತದೆಯೆಂದು ಮೊದಲೇ ಹೇಳಿದ್ದೆ. ಅದೇ ರೀತ್ಯಾ ಆಗಿದೆ” ಎಂದು ಹೇಳಿದ್ದರು ಅರವಿಂದರು.
ಲಾಲಾ ಲಜಪತ್ ರಾಯರನ್ನು ಲಾಠಿಯಲ್ಲಿ ಸಾಯಬಡಿದು ಅವರ ಕೊಲೆಗೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಹೊರಟು ಚಂದ್ರಶೇಖರ ಆಜಾದ್ ನೇತೃತ್ವದ ಕ್ರಾಂತಿಕಾರಿಗಳು ಸ್ಯಾಂಡರ್ಸ್ ನನ್ನು ವಧಿಸಿದಾಗ ಇಡೀ ದೇಶ ಸಂಭ್ರಮಿಸಿತ್ತು. ಆದರೆ ಗಾಂಧಿ ಅದನ್ನು ಹೇಡಿತನದ ಕೃತ್ಯ ಎಂದು ಬಣ್ಣಿಸಿದರು. 1931ರಲ್ಲಿ ಕರಾಚಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಭಗತ್ ಸಿಂಗ್ ಹಾಗೂ ಸಹಸದಸ್ಯರು ಅಸೆಂಬ್ಲಿ ಮೇಲೆ ಬಾಂಬ್ ಹಾಕಿದಾಗ ಪ್ರದರ್ಶಿಸಿದ ಧೈರ್ಯ ಮತ್ತು ಬಲಿದಾನದ ಸ್ಪೂರ್ತಿಯನ್ನು ಶ್ಲಾಘಿಸುವ ನಿರ್ಣಯವನ್ನು ಬಹಿರಂಗ ಅಧಿವೇಶನದಲ್ಲಿ ಸ್ವೀಕರಿಸಲಾಯಿತು. ಗಾಂಧಿ ಇದನ್ನು ಬಲವಾಗಿ ವಿರೋಧಿಸಿದರು. ಅದಕ್ಯಾರೂ ಸೊಪ್ಪು ಹಾಕಲಿಲ್ಲ. ಆದರೆ ಗಾಂಧಿ ಆ ಸೋಲನ್ನು ಮರೆಯಲಿಲ್ಲ. ಇದಾಗಿ ಕೆಲ ತಿಂಗಳಲ್ಲಿ ಬಾಂಬೆಯ ಉಸ್ತುವಾರಿ ಗವರ್ನರ್ ಹಟ್ಸನ್ ನನ್ನು ಗೋಗಟೆ ಎಂಬ ಕ್ರಾಂತಿಕಾರಿ ಗುಂಡಿಟ್ಟು ಯಮಸದನಕ್ಕಟ್ಟಿದ. ಇದನ್ನೇ ತನ್ನ ಉತ್ಕರ್ಷಕ್ಕೆ ಬಳಸಿಕೊಂಡ ಗಾಂಧಿ ಕರಾಚಿ ಅಧಿವೇಶನದಲ್ಲಿ ಭಗತನನ್ನು ಶ್ಲಾಘಿಸಿ ತೆಗೆದುಕೊಂಡ ನಿರ್ಣಯವೇ ಗೋಗಟೆ ಹಟ್ಸನ್ ನನ್ನು ಕೊಲ್ಲಲು ಮೂಲ ಪ್ರೇರಣೆ ಎಂದು ಅಖಿಲ ಭಾರತೀಯ ಕಾಂಗ್ರೆಸ್ ಸಭೆಯಲ್ಲಿ ತಿರುಗೇಟು ನೀಡಿದರು. ಅಸಂಖ್ಯಾತ ಜನ ಸೇರಿದ್ದ ಸಭೆಯಲ್ಲಿ ಗಾಂಧಿಯವರ ದಿಗ್ಭ್ರಮೆಗೊಳಿಸುವ ಈ ಹೇಳಿಕೆಯನ್ನು ಪ್ರಶ್ನಿಸಿ ಅಸಮಧಾನ ವ್ಯಕ್ತಪಡಿಸಿದವರು ಸುಭಾಷ್ ಚಂದ್ರ ಬೋಸ್ ಒಬ್ಬರೇ! ಭಗತ್ ಸಿಂಗ್ ಮತ್ತು ಇತರ ದೇಶಭಕ್ತರ ಜೀವ ರಕ್ಷಿಸುವ ಮನವಿಗೆ ಸಹಿ ಹಾಕಲು ಗಾಂಧಿ ಒಪ್ಪಲಿಲ್ಲ. ಅವರೆಲ್ಲಾ ಹಿಂಸೆಯಲ್ಲಿ ಭಾಗವಹಿಸಿದ್ದರು ಎನ್ನುವುದು ಗಾಂಧಿಯ ಈ ನಿಲುವಿಗೆ ಕಾರಣ. ಆದರೆ ಇದೇ ಗಾಂಧಿ ದೇಶಭಕ್ತ ವೀರ ಸಂನ್ಯಾಸಿ ಸ್ವಾಮಿ ಶೃದ್ಧಾನಂದರನ್ನು ಕೊಲೆ ಮಾಡಿದ ಪಾತಕಿ ರಷೀದನನ್ನು “ಸಹೋದರ” ಎಂದು ಕರೆದರು. ಮಾತ್ರವಲ್ಲ ಆತನ ಪರವಾಗಿ ವಾದಿಸಲೂ ಸಿದ್ಧರಾದರು.
ಕೇವಲ ಕ್ರಾಂತಿಯ ಮಾರ್ಗವನ್ನನುಸರಿಸಿದವರನ್ನು ಮಾತ್ರ ಗಾಂಧಿ ವಿರೋಧಿಸಲಿಲ್ಲ. ಅವರ ಬೂಟಾಟಿಕೆಯನ್ನು ಒಪ್ಪದವರನ್ನೂ ವಿರೋಧಿಸಿದರು. ತಾವು ಒಪ್ಪದವರನ್ನು ಅವರು ಇಷ್ಟಪಡುತ್ತಿರಲಿಲ್ಲ ಎನ್ನುವುದಕ್ಕೆ ಸುಭಾಷ್ ಪ್ರಕರಣವೇ ಸಾಕ್ಷಿ. 1934ರ ಬಳಿಕ ಮಹಾ ವಿರಕ್ತಿ ಭಾವ ಪ್ರದರ್ಶಿಸುತ್ತಾ ತಾನು ಕಾಂಗ್ರೆಸ್ ಪಕ್ಷದ ನಾಲ್ಕಾಣೆ ಸದಸ್ಯನೂ ಅಲ್ಲವೆಂದೂ, ತಮಗೆ ಇದು ಸಂಬಂಧಿಸಿದ್ದಲ್ಲವೆಂದು ಪದೇ ಪದೇ ಹೇಳುತ್ತಿದ್ದ ಗಾಂಧಿ ಬೋಸ್ ಎರಡನೆಯ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗುವುದನ್ನು ತಡೆಯಲು ತನ್ನ ಚೇಲಾ ಪಟ್ಟಾಭಿ ಸೀತಾರಾಮಯ್ಯರನ್ನು ಬೋಸ್ ಎದುರಾಗಿ ನಿಲ್ಲಿಸಿದರು. ಗಾಂಧಿಯ ಕೃಪಾಕಟಾಕ್ಷ ಪಟ್ಟಾಭಿಯ ಕಡೆಯಿದ್ದಾಗ್ಯೂ ಬೋಸ್ ಗಣನೀಯ ಬಹುಮತ ಪಡೆದು ಗೆದ್ದರು. ಪಟ್ಟಾಭಿಯವರ ತವರು ಪ್ರಾಂತ್ಯ ಆಂಧ್ರಪ್ರದೇಶದಲ್ಲೂ ಬೋಸರಿಗೆ ಅವರಿಗಿಂತ ಹೆಚ್ಚಿನ ಮತ ಸಿಕ್ಕಿತ್ತು. ಕ್ರುದ್ಧರಾದ ಗಾಂಧಿ ಪಟ್ಟಾಭಿಯವರ ಸೋಲು ತನ್ನ ಸೋಲೆಂದು ಪ್ರತಿಕ್ರಿಯಿಸಿದರು. ಮುಂದಿನ ತ್ರಿಪುರಾ ಕಾಂಗ್ರೆಸ್ ಅಧಿವೇಶನದಲ್ಲೂ ಭಾಗವಹಿಸದೆ ಹಠ ಸಾಧಿಸಿದರು. ಪೂರ್ತಿ ಕೀಟಲೆಯ ಉಪವಾಸದ ಮೂಲಕ ರಾಜ್ ಕೋಟದಲ್ಲಿ ಪ್ರತಿಯಾಗಿ ಷೋ ನಡೆಸಿದರು. ಬೋಸ್ ಮೇಲಿನ ದ್ವೇಷದಿಂದ ಹನ್ನೆರಡು ಜನರನ್ನು ಕಾರ್ಯಕಾರಿಣಿಗೆ ರಾಜೀನಾಮೆ ನೀಡುವಂತೆ ಮಾಡಿದರು ಗಾಂಧಿ. ಅವರಲ್ಲಿ ಈ ಕಚ್ಛೆಹರುಕ ನೆಹರೂವೂ ಒಬ್ಬ. ಗಾಂಧಿ ಬೋಸ್ ಜೊತೆ ಕೆಲಸ ಮಾಡಲು ಒಪ್ಪಲಿಲ್ಲ. ಸುಭಾಷರನ್ನು ಬಗೆಬಗೆಯಾಗಿ ನಿಂದಿಸಿದರು. ಇದೆಲ್ಲದರಿಂದ ಬೇಸತ್ತ ಸುಭಾಷರು ಅಧ್ಯಕ್ಷ ಸ್ಥಾನಕ್ಕೂ, ಕಾರ್ಯಕಾರಿಣಿಗೂ ರಾಜೀನಾಮೆ ನೀಡಿ ಹೊರನಡೆದರು. ಮುಂದೆ ಜಗತ್ತೇ ಮೂಗಿನ ಮೇಲೆ ಬೆರಳಿಟ್ಟ ಸಾಹಸಕ್ಕೆ ಸೂತ್ರಧಾರಿಯೂ-ಪಾತ್ರಧಾರಿಯೂ ಆದರು. ಸುಭಾಷರನ್ನು ಅಧ್ಯಕ್ಷಗಾದಿಯಿಂದ ತೆಗೆದುಹಾಕುವವರೆಗೆ ಗಾಂಧಿಯ ಮತ್ಸರ – ಕೋಪ ತಣಿದಿರಲಿಲ್ಲ. ಬ್ರಿಟಿಷ್ ಸರಕಾರ ಬೋಸರನ್ನು ಆರು ವರ್ಷ ದೇಶಭೃಷ್ಟಗೊಳಿಸಿದ್ದಕ್ಕೆ ಕನಿಷ್ಟ ವಿರೋಧವನ್ನೂ ಅವರು ವ್ಯಕ್ತಪಡಿಸಲಿಲ್ಲ.
(ಮುಂದುವರೆಯುವುದು…)
ಯಾರು ಮಹಾತ್ಮ? ಭಾಗ-1 ನ್ನು ಓದಲು ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ.
Discussion about this post