Read - < 1 minute
ನವದೆಹಲಿ, ಸೆ.23: ಉರಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಮಾತಿನ ಯುದ್ಧ ನಡೆಯುತ್ತಿರುವಂತೆಯೇ, ಭಾರತದ ಮೇಲೆ ಯುದ್ಧ ಸಾರಲು ಪಾಕಿಸ್ಥಾನ ತಯಾರಿ ನಡೆಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಪಾಕಿಸ್ಥಾನ ಭಾರತ ತನ್ನ ಮೇಲೆ ಮುಗಿ ಬೀಳಬಹುದು ಎಂದು ಭಾವಿಸಿ ಸೈನಿಕ ತಾಲೀಮನ್ನು ಕೂಡ ಆರಂಭಿಸಿದೆ ಎಂದು ಹೇಳಲಾಗುತ್ತಿದೆ. ಇದರ ಮೊದಲ ಭಾಗವಾಗಿ ನಿನ್ನೆ ಪಾಕಿಸ್ಥಾನ ಸೇನೆಗೆ ಸೇರಿದ ಜೆಟ್ ವಿಮಾನವೊಂದು ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಮಾಡುವ ಮೂಲಕ ತಾಲೀಮು ನಡೆಸಿದೆ.
ಒಂದು ವೇಳೆ ಭಾರತ ಪಾಕಿಸ್ಥಾನ ವಿರುದ್ಧ ವಾಯು ದಾಳಿ ನಡೆಸಿದರೆ ಅದರ ಮೊದಲ ಗುರಿಯೇ ಪಾಕಿಸ್ಥಾನದ ವಾಯು ನೆಲೆಗಳಾಗಿರಲಿದೆ. ಅಲ್ಲಿನ ರನ್ ವೇಗಳ ಮೇಲೆ ಬಾಂಬ್ ದಾಳಿ ನಡೆಸಿದರೆ ಅವು ನಾಶವಾಗುತ್ತವೆ. ಆಗ ಪಾಕಿಸ್ಥಾನದ ಯುದ್ಧ ವಿಮಾನಗಳು ನಿಷ್ಕ್ರಿಯವಾಗಲಿವೆ.
ಇದೇ ಕಾರಣಕ್ಕೆ ಪಾಕ್ ಸೇನೆ ಹೆದ್ದಾರಿಯಲ್ಲಿ ಜೆಟ್ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾಡಲಾಗಿದೆ ಮತ್ತು ರಾಜಧಾನಿ ಇಸ್ಲಾಮಾಬಾದ್ ಹೆದ್ದಾರಿಯಲ್ಲಿ ಆ ತಾಲೀಮು ನಡೆಸಲಾಗಿದೆ ಎಂದು ತಿಳಿದುಬಂದಿದೆ.
Discussion about this post