Read - < 1 minute
ಉಡುಪಿ, ಸೆ.4: ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ ಎಂದು ಚಿತ್ರ ನಟಿ ಹಾಗೂ ಮಾಜಿ ಸಾಂಸದೆ ರಮ್ಯಾ ಹೇಳಿರುವುದಕ್ಕೆ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ರಮ್ಯಾ ಹೇಳಿರುವುದು ನೂರಕ್ಕೆ ನೀರು ಸತ್ಯ ಎಂದವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮ್ಯಾ ಅವರು ವಯಸ್ಸಿನಲ್ಲಿ ಚಿಕ್ಕವರು ಎಂದು ಅವರು ಹೇಳಿರುವ ಸತ್ಯವನ್ನು ತಳ್ಳಿ ಹಾಕಲಾಗುವುದಿಲ್ಲ. ಆರ್.ಎಸ್.ಎಸ್. ಆಗಲಿ ಬಿ.ಜೆ.ಪಿ.ಯಾಗಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇರಲಿಲ್ಲ. ಸ್ವತಃ ಆರ್.ಎಸ್.ಎಸ್.ನಲ್ಲಿದ್ದ ವಾಜಪೇಯಿ ಅವರೇ ತಾವು ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಬಿ.ಜೆ.ಪಿ. ಅಸ್ತಿತ್ವಕ್ಕೆ ಬಂದದ್ದೆ 1952ರಲ್ಲಿ, ಆದ್ದರಿಂದ ಅದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಪ್ರಶ್ನೆಯೇ ಇಲ್ಲ ಎಂದವರು ಹೇಳಿದರು.
ತಲೆ ಮೇಲೆ ಕಪ್ಪು ಟೋಪಿ, ಕೈಯಲ್ಲಿ ಕೋಲು ಹಿಡಿದುಕೊಂಡ ಕೂಡಲೇ ಆರ್.ಎಸ್.ಎಸ್. ಕಾರ್ಯಕರ್ತರು ದೇಶಭಕ್ತರಾಗುವುದಕ್ಕಾಗುವುದಿಲ್ಲ. ದೇಶದ ಇನ್ನೊಂದು ಧರ್ಮವನ್ನು ಧ್ವೇಷಿಸುವವರು ಹೇಗೆ ದೇಶಭಕ್ತರಾಗುತ್ತಾರೆ ಎಂದವರು ಪ್ರಶ್ನಿಸಿದರು.
ಸಂಘ ಪರಿವಾರದವರು ಯಾವತ್ತೂ ಹಿಂದುಳಿದ ವರ್ಗದ ಯುವಕರ ಬ್ರೈನ್ ವಾಶ್ ಮಾಡಿ, ಅವರನ್ನು ಬಲಿಪಶು ಮಾಡುತ್ತಿದ್ದಾರೆ. ಭಾಷಣ ಮಾಡುವ ಸಂಘ ಪರಿವಾರದ ನಾಯಕರು ಯಾರೂ ಕೊಲೆಯಾಗಿಲ್ಲ ಅಥವಾ ಜೈಲಿಗೂ ಹೋಗಿಲ್ಲ. ಕೊಲೆಯಾದವರು ಜೈಲಿಗೆ ಹೋದವರೆಲ್ಲರೂ ಮುಗ್ದ ಹಿಂದುಳಿದ ವರ್ಗದವರು, ಸಂಘ ಪರಿವಾರದ ಈ ಹುನ್ನಾರವನ್ನು ಅವರಿಗೆ ಮನವರಿಕೆ ಮಾಡಿಸಬೇಕಾಗಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಅವರು ಕಾಂಗ್ರೆಸ್ ಸರ್ಕಾರವನ್ನು ಪದೇಪದೇ ತರಾಟೆಗೆ ತೆಗೆದುಕೊಳ್ಳುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ಜನಾರ್ದನ ಪೂಜಾರಿ ಅವರು ಹಿರಿಯರು, ಪಕ್ಷದ ಅಧ್ಯಕ್ಷರು, ಕೇಂದ್ರ ಸಚಿವರು ಆಗಿದ್ದವರು, ಅವರಿಗೆ ಬುದ್ದಿ ಹೇಳುವ ಧೈರ್ಯ ನನಗಿಲ್ಲ ಎಂದು ಹರಿಪ್ರಸಾದ್ ಹೇಳಿದರು.
Discussion about this post