Read - 2 minutes
ರಾಷ್ಟ್ರದ ಅರ್ಥವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರ ಪ್ರತ್ಯೇಕ ರೈಲ್ವೆ ಬಜೆಟ್ ಎಂಬ 92 ವರ್ಷಗಳ ಪದ್ದತಿಗೆ ತಿಲಾಂಜಲಿ ಹಾಡಿ, ಒಂದೇ ಬಜೆಟ್ ಎಂಬುದನ್ನು ಸಾಕಾರಗೊಳಿಸು ತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಸಂಗತಿ.
ಪ್ರಪಂಚದ ರೈಲ್ವೇ ಲೋಕದಲ್ಲಿ ತನ್ನದೇ ಆದ ಸಾಮ್ರಾಜ್ಯವನ್ನು ಭಾರತೀಯ ರೈಲ್ವೆ ಹೊಂದಿದ್ದರೂ, ಆರ್ಥಿಕತೆಯ ದೃಷ್ಠಿಯಿಂದ ಮಾತ್ರ ಇಲಾಖೆ ನಷ್ಟ ದಲ್ಲಿದೆ. ಇದನ್ನು ಸರಿದೂಗಿಸುವ ಮಾರ್ಗವಾಗಿ ಸಾಮಾನ್ಯ ಬಜೆಟ್‌ನೊಂದಿಗೆ ಇದನ್ನು ವಿಲೀನಗೊಳಿಸಿ 10 ಸಾವಿರ ಕೋಟಿ ಉಳಿತಾಯ ಮಾಡಲು ಅಡಿ ಯಿಟ್ಟಿರುವುದು ಸ್ವಾಗತಾರ್ಹ.
ಆದರೆ, ಇದಕ್ಕೆ ಪೂರಕವಾಗಿ ಪ್ರಯಾಣಿಕರಿಗೆ ನೀಡುತ್ತಿರುವ ವಿವಿಧ ರೀತಿಯ ರಿಯಾಯ್ತಿಯನ್ನು ಕಡಿತಗೊಳಿಸಿ ವಾರ್ಷಿಕ 34 ಸಾವಿರ ಕೋಟಿ ಉಳಿತಾಯ ಮಾಡುವ ಚಿಂತನೆ ಅತ್ಯಂತ ಶೀಘ್ರ ಜಾರಿಯಾಗ ಬೇಕಿದೆ. ಮೂಲತಃವಾಗಿ, ರಿಯಾಯ್ತಿ ಎಂಬುದೇ ಒಂದು ರೀತಿಯ ಕೆಟ್ಟ ಪದ್ದತಿ. ಆದರೆ, ಅಸಮಾನ ಆದಾಯವನ್ನು ಹೊಂದಿರುವ ದೇಶದ ನಾಗರಿಕರ ಹಿತದೃಷ್ಠಿಯಿಂದ ರಿಯಾಯ್ತಿ ಅಗತ್ಯ ಎನ್ನುವುದನ್ನೂ ಒಪ್ಪಲೇಬೇಕು. ಹೀಗಾಗಿ, ಹಿರಿಯ ನಾಗರಿಕರು, ಅಂಗ ವಿಕಲರು, ವಿವಿಧ ರೀತಿಯ ಗಂಭೀರ ಅನಾರೋಗ್ಯ ಪೀಡಿತರು, ನಿರುದ್ಯೋಗಿಗಳು, ರೈಲ್ವೆ ಇಲಾಖೆ ನೌಕರರಿಗೆ ರಿಯಾಯ್ತಿ ನೀಡುವುದು ಸರಿಯಾದುದು.
ಆದರೆ ಉಳ್ಳವರಿಗೆ, ಅದರಲ್ಲೂ ಪ್ರಮುಖವಾಗಿ ರಾಜ ಕಾರಣಿಗಳೂ, ಸಚಿವರು, ಸಾಂಸದರು, ಶಾಸಕರು ಸೇರಿ ದಂತೆ ಜನಪ್ರತಿನಿಧಿಗಳು, ಉನ್ನತ ಮಟ್ಟದ ಅಧಿಕಾರಿಗಳು ಸೇರಿದಂತೆ ಶ್ರೀಮಂತರಿಗೆ ರಿಯಾಯ್ತಿ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆ ನಡೆಯಬೇಕಿದೆ. ಇಂತಹ ವ್ಯಕ್ತಿಗಳಿಗೆ ರಿಯಾಯ್ತಿ ನೀಡುವುದರಿಂದ ಇಲಾಖೆ ನಷ್ಟವಾಗುತ್ತದಯೇ ಹೊರತು ಯಾವುದೇ ಲಾಭವಾಗುವುದಿಲ್ಲ. ಕೇಂದ್ರದಲ್ಲಿರುವ ಸರ್ಕಾರ ಜನಸ್ನೇಹಿ ಎಂಬ ರಾಜಕೀಯ ಲಾಭ ಮಾತ್ರ ದೊರೆಯುತ್ತದೆ.
ಎಲ್ಲಕ್ಕೂ ಪ್ರಮುಖವಾಗಿ ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನಿ, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು, ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ರಿಯಾಯ್ತಿ ನೀಡುವ ಅಗತ್ಯ ಇಲ್ಲ. ರಾಜಕಾರಣಿಗಳನ್ನು ನೋಡುವುದಾದರೆ, ಕಾಲದಿಂದ ಕಾಲಕ್ಕೆ ಮನಸೋಇಚ್ಚೆ ತಮ್ಮ ಸಂಬಳ ಹಾಗೂ ಭತ್ಯೆಗಳನ್ನು ಯಾವುದೇ ಚರ್ಚೆಗಳಿಲ್ಲದೇ ಹೆಚ್ಚಿಸಿಕೊಳ್ಳುತ್ತಾ ಅಧಿಕೃತವಾಗಿ ಜನರ ದುಡ್ಡನ್ನು ಕೊಳ್ಳೆ ಹೊಡೆಯುತ್ತಾರೆ. ಅದರ ಹೊರತಾಗಿ ಲಂಚ ಎಂಬ ಕೂಪದಿಂದ ಪಾಪದ ಹಣವನ್ನು ಕೋಟಿ ಕೋಟಿ ಬಾಚಿಕೊಳ್ಳುತ್ತಾರೆ. ಇನ್ನು ಉನ್ನತಾಧಿಕಾರಿಗಳು ಬಹುತೇಕ ಲಕ್ಷಕ್ಕೂ ಮೀರಿದ ತಿಂಗಳ ವೇತನ ಪಡೆಯುವವರು. ಇಂತಹ ವರ್ಗದ ವ್ಯಕ್ತಿಗಳಿಗೇಕೆ ರಿಯಾಯ್ತಿ. ರಾಜಕೀಯ ಹಾಗೂ ಸಾರ್ವಜನಿಕ ಸೇವೆ ಹೆಸರಿನಲ್ಲಿ ಸೇವೆಯಾಗಿದೆಯೇ ಹೊರತು, ವಾಸ್ತವವಾದ ವ್ಯವಹಾರವಾಗಿದೆ. ಹೀಗಿರುವಾಗ ಅಂತಹ ವರ್ಗಕ್ಕೂ ವ್ಯಾವಹಾರಿಕವಾಗಿ ನೋಡುವುದೇ ಸರಿ.
ಹೀಗೆ ಉಳ್ಳವರಿಗೆ ರಿಯಾಯ್ತಿ ನೀಡುವ ಬದಲಾಗಿ, ಪ್ರಾಣವನ್ನು ಪಣಕ್ಕಿಟ್ಟು ದೇಶ ಕಾಯುವ ಈ ದೇಶದ ಯೋಧರಿಗೆ, ಅವರ ಕುಟುಂಬಸ್ಥರಿಗೆ ಹೆಚ್ಚಿನ ರಿಯಾಯ್ತಿ ಹಾಗೂ ಸೌಲಭ್ಯ ಕಲ್ಪಿಸಿ. ಹಾಗೆಯೇ, ಈ ದೇಶಕ್ಕೆ ಅನ್ನ ನೀಡುವ ಸಾಮಾನ್ಯ ರೈತನಿಗೆ ಹಾಗೂ ಆತನ ಕುಟುಂಬಕ್ಕೆ(ಶ್ರೀಮಂತ ಜಮೀನ್ದಾರರಿಗೆ ಅಲ್ಲ). ರಿಯಾಯ್ತಿ ನೀಡಿ. ಆಗ ಸರ್ಕಾರದ ಸೇವೆ ಒಂದು ಅರ್ಥ ಬರುತ್ತದೆ. ಬದಲಾಗಿ, ಸ್ವಾರ್ಥ ಸಾಧನೆಗಾಗಿ ಸೇವೆ ಮುಖವಾಡ ಧರಿಸಿದವರಿಗೆ ಇಂತಹ ರಿಯಾಯ್ತಿಗಳ ಅಗತ್ಯವಿಲ್ಲ.
ಹೀಗಾಗಿ, ಅನಾವಶ್ಯಕ ರಿಯಾಯ್ತಿಗಳನ್ನು ಕಡಿತ ಮಾಡುವ ಕ್ರಮ ತತಕ್ಷಣ ಜಾರಿಯಾಗಬೇಕು. ರಿಯಾಯ್ತಿ ಕಡಿತ ಮಾಡುವುದರಿಂದ ವಾರ್ಷಿಕ 34 ಸಾವಿರ ಕೋಟಿ ಉಳಿತಾಯವಾಗುತ್ತದೆ ಎಂದಾದರೆ, ಆ ಮೊತ್ತದಿಂದ ಪ್ರಯಾಣಿಕರ ಸುರಕ್ಷತೆ, ಸ್ವಚ್ಛತೆ ಸೇರಿ ದಂತೆ ವಿವಿಧ ರೀತಿಯ ಸೌಲಭ್ಯಗಳನ್ನು ಉನ್ನತೀಕರಿಸಬಹುದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕಿದೆ.
Discussion about this post