Read - < 1 minuteಬೆಂಗಳೂರು, ಅ.4: ರಾಜ್ಯ ಸರ್ಕಾರದ ಮಹತ್ವದ ರಿಯಲ್ ಎಸ್ಟೇಟ್ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿದ್ದು, ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ.
ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ-2016ರ ಬಿಲ್ಗೆ ಅಂಕಿತ ಹಾಕಿಲ್ಲ. ಬಿಲ್ ತಿರಸ್ಕಾರದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಆಗಿದೆ. ಯಾವುದೇ ಚರ್ಚೆಯಾಗದೇ ಅಂಗೀಕಾರವಾಗಿದ್ದ ಈ ವಿಧೇಯಕಕ್ಕೆ ಅಂಕಿತ ಹಾಕಬಾರದು, ಇದು ರಿಯಲ್ ಎಸ್ಟೇಟ್ ಉದ್ದಿಮೆ ಪರ ಬಿಲ್ ಅಂತ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದರು. ಜೊತೆಗೆ ರಾಜ್ಯಪಾಲರಿಗೂ ಶೆಟ್ಟರ್ ಪತ್ರ ಬರೆದಿದ್ದರು.
ವಿಧಾನಮಂಡಲದ ಉಭಯ ಅಧಿವೇಶನಗಳ ಅಧಿವೇಶನಗಳಲ್ಲಿ ಕಳೆದ ಜುಲೈ 18ರಂದು ಈ ಮಸೂದೆ ಅಂಗೀಕಾರವಾಗಿತ್ತು. ಈ ವಿಧೇಯಕ ಯಾವುದೇ ಚರ್ಚೆಯಾಗದೆ ಅಂಗೀಕಾರವಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಿದೆ ಎಂಬ ಆರೋಪವನ್ನು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾಡಿದ್ದರು.
ಪರಿಸರಕ್ಕೆ ಮಾರಕವಾಗದಂತೆ ವಿಧೇಯಕ ಮರು ಪರಿಶೀಲಿಸಿ ಅಂಗೀಕರಿಸುವಂತೆ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಬಳಕೆಯ ನಿವೇಶನಗಳ ಪ್ರಮಾಣವನ್ನು ಕಡಿತಗೊಳಿಸಿರುವ ಬಗ್ಗೆ ನಿಖರ ಕಾರಣ ನೀಡಿಲ್ಲದಿರುವುದರಿಂದ ಮಸೂದೆ ಬಗ್ಗೆ ಸೂಕ್ತ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರು ರಾಜ್ಯಪಾಲರಿಗೆ ಪತ್ರ ಬರೆದು ಈ ವಿಧೇಯಕಕ್ಕೆ ಪರಿಸರ ಪ್ರೇಮಿಗಳಿಂದಲೂ ವಿರೋಧವಿದ್ದು, ಒಂದು ವೇಳೆ ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದರೆ ಪರಿಸರಕ್ಕೆ ಮಾರಕವಾಗಲಿದೆ. ವಿಧೇಯಕ ತಿದ್ದುಪಡಿಗೂ ಮೊದಲು ಅದರಲ್ಲಿನ ಪ್ರಮುಖ ಅಂಶಗಳ ಬಗ್ಗೆ ಚರ್ಚೆಯಾಗಿಲ್ಲ. ಹೊಸ ಬಡಾವಣೆಗಳಿಗೆ ಶೇ.25ರಷ್ಟು ಸ್ಥಳ ನಿಗದಿಯಾಗಬೇಕು. ಉದ್ಯಾನವನ, ಆಟದ ಮೈದಾನಗಳಿಗೆ ಶೇ.15ರಷ್ಟು ಜಾಗ ಮೀಸಲಿಡಬೇಕು. ಆದರೆ, ತಿದ್ದುಪಡಿಯ ನಂತರ ಸಾರ್ವಜನಿಕ ಬಳಕೆಗಾಗಿ ಮೀಸಲಿಡುವ ಭೂಮಿ ಶೇ.5 ಇದ್ದರೆ ಸಾಕು, ಅದೇ ರೀತಿ ಉದ್ಯಾನವನ, ಆಟದ ಮೈದಾನಗಳಿಗೆ ಮೀಸಲಿಡುವ ಜಾಗ ಶೇ.10ರಷ್ಟಿದ್ದರೆ ಸಾಕು ಎಂಬ ನಿಯಮವನ್ನು ಅಳವಡಿಸಲಾಗಿದ್ದು, ಇದರಿಂದ ಶೇ.10ರಷ್ಟು ಸಾರ್ವಜನಿಕ ಬಳಕೆ ಜಾಗ ಕಡಿಮೆಯಾಗಿತ್ತು.ಇದರ ಲಾಭ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲವಾಗುತ್ತಿತ್ತು ಎಂದು ಶೆಟ್ಟರ್ ಆರೋಪಿಸಿದ್ದರು.
ಈ ಎಲ್ಲ ಹಿನ್ನೆಲೆಯಲ್ಲಿ ವಿಧೇಯಕದ ಕಡತವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದು, ಪುನರ್ ಪರಿಶೀಲಿಸುವಂತೆ ಹಲವು ಸಲಹೆಗಳನ್ನು ರಾಜ್ಯಪಾಲರು ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಸೂದೆಯಲ್ಲೇನಿದೆ?
ನೂತನ ಬಿಲ್ನಲ್ಲಿ ಹೊಸ ಲೇಔಟ್ ನಿರ್ಮಾಣ ವೇಳೆ ಪಾರ್ಕ್, ಆಟದ ಮೈದಾನ ನಿರ್ಮಾಣಕ್ಕೆ ಶೇ.10ರಷ್ಟು ಹಾಗೂ ನಾಗರಿಕ ಸೌಲಭ್ಯಕ್ಕೆ ಶೇ.5ರಷ್ಟು ಮೀಸಲು ಸ್ಥಳ ಕಾಯ್ದಿರಿಸಬೇಕು ಎಂದು ಹೇಳಲಾಗಿತ್ತು. ತಿದ್ದುಪಡಿ ವಿಧೇಯಕದಲ್ಲಿ ಈ ಹಿಂದೆ ಇದ್ದ ನಿಯಮಕ್ಕಿಂತ ತಲಾ ಶೇ.10 ಹಾಗೂ ಶೇ.5ರಷ್ಟು ಮೀಸಲು ಜಾಗ ಕಡಿತವಾಗಲಿತ್ತು. ಈ ಮೂಲಕ ನಗರೀಕರಣಕ್ಕೆ ವಿಧೇಯಕ ಅನುಕೂಲ ಮಾಡಿಕೊಡಲಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ವಿಧೇಯಕವನ್ನು ಒಮ್ಮೆ ಪರಿಶೀಲಿಸುವಂಥೆ ರಾಜ್ಯಪಾಲರಿಗೆ ಜಗದೀಶ್ ಶೆಟ್ಟರ್ ಪತ್ರ ಬರೆದಿದ್ದ ಹಿನ್ನೆಲೆಯ, ಪರಿಸರವಾದಿಗಳ ವಿರೋಧ ಕೇಳಿ ಬಂದಿದ್ದರಿಂದ ವಜೂಭಾಯಿ ವಾಲಾ ಅವರು ಈಗ ಬಿಲ್ಲನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳಿಸಿದ್ದು, ಪುನರ್ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ವಿಧೇಯಕದಲ್ಲಿ ಸಾಕಷ್ಟು ಲೋಪದೋಶ ಇದೆ. ಪರಿಸರಕ್ಕೆ ಇದರಿಂದ ತೊಂದರೆ ಆಗಲಿದೆ.
Discussion about this post