Read - < 1 minute
ಬೆಂಗಳೂರು, ಸೆ.8: ರಾಜ್ಯ ಸರ್ಕಾರ ಅಥವಾ ಪಕ್ಷದ ವಿರುದ್ಧ ತಮ್ಮ ಪಕ್ಷದ ಯಾವುದೇ ಮುಖಂಡರು ಹೇಳಿಕೆ ನೀಡಿದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡ ನಂತರ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಾರ್ದನ ಪೂಜಾರಿ, ಜಾಫರ್ ಶರೀಫ್ ಸೇರಿದಂತೆ ಯಾವುದೇ ನಾಯಕರು ಸರ್ಕಾರ ಅಥವಾ ಪಕ್ಷದ ವಿರುದ್ಧ ಮಾತನಾಡಿದರೆ ಎ.ಕೆ. ಆಂಟನಿ ನೇತೃತ್ವದ ಶಿಸ್ತು ಸಮಿತಿ ವಹಿಸಿ, ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು.
ಸರ್ಕಾರ ಅಥವಾ ಪಕ್ಷದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿದ್ದರೆ, ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ. ಅದನ್ನು ಬಿಟ್ಟು ಬಹಿರಂಗವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಸರ್ಕಾರ ಮತ್ತು ಪಕ್ಷಕ್ಕೆ ಧಕ್ಕೆಯುಂಟು ಮಾಡುವುದನ್ನು ಸಹಿಸುವುದಿಲ್ಲ. ಇನ್ನು ಮುಂದೆ ಯಾವುದೇ ನಾಯಕರು ಸಚಿವರುಗಳು, ಶಾಸಕರುಗಳು, ಹಾಗೂ ಮಾಜಿ ಸಚಿವ, ಶಾಸಕರುಗಳು ಬಹಿರಂಗ ಹೇಳಿಕೆ ನೀಡಿದರೆ ಕ್ಷಮಿಸುವ ಪ್ರಶ್ನೆಯಿಲ್ಲ ಎಂದರು.
ಕಳೆದ ರಾತ್ರಿ ಕೆಲವು ಮುಸ್ಲಿಂ ಸಂಘಟನೆ ಮುಖಂಡರು ನನ್ನನ್ನು ಭೇಟಿಯಾಗಿದ್ದರು. ಗೋರಕ್ಷಣೆ ಹೆಸರಿನಲ್ಲಿ ಬಿಜೆಪಿ ಅಂಗ ಪಕ್ಷಗಳು ದೌರ್ಜನ್ಯ ನಡೆಸುತ್ತಿದ್ದು, ಹಣ ಕೇಳುತ್ತಿದ್ದಾರೆ. ಈ ಬಗ್ಗೆ ಮೂರು ಪ್ರಕರಣಗಳನ್ನು ತಮಗೆ ವಿವರಿಸಿದ್ದು, ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಪರಮೇಶ್ವರ್ ಅವರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಯಾವುದೇ ಹಿಂದೂಪರ ಸಂಘಟನೆ ಕಾನೂನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಕೋಮು ಸಾಮರಸ್ಯ ಹಾಳಾಗಲು ಬಿಡುವುದಿಲ್ಲ. ಪ್ರಧಾನ ಮಂತ್ರಿಗಳೇ ಶೇ 80 ರಷ್ಟು ನಕಲಿ ಗೋ ಸಂರಕ್ಷಕರು ಇದ್ದಾರೆ ಎಂದು ಹೇಳಿರುವುದನ್ನು ದಿಗ್ವಿಜಯ್ ಸಿಂಗ್ ಉಲ್ಲೇಖಿಸಿದರು.
ಮೂರು ಗಂಟೆಗಳ ಕಾಲ ಸಮನ್ವಯ ಸಮಿತಿ ಸಭೆ ನಡೆಯಿತು. 2018 ರ ಚುನಾವಣೆಗೆ ಪಕ್ಷವನ್ನು ಸಂಘಟಿಸುವುದು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರ ಬಗ್ಗೆ ಚರ್ಚಿಸಲಾಯಿತು ಎಂದರು.
ಧಾರವಾಡದಲ್ಲಿ ಕಾರ್ಯಕಾರಣಿ : ಸೆಪ್ಟೆಂಬರ್ 27 ಕ್ಕೆ ಧಾರವಾಡದಲ್ಲಿ ಪ್ರದೇಶ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಆಯೋಜಿಸಲಾಗಿದೆ. ನವೆಂಬರ್ ತಿಂಗಳಲ್ಲಿ ಇಂದಿರಾಗಾಂಧಿಯವರ ಜನ್ಮಶತಮಾನೋತ್ಸವವನ್ನು ಆಚರಿಸಲಾಗುವುದು ಎಂದ ಅವರು, ರಾಜ್ಯದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯುತ್ತಿದ್ದು, ತಮಗೆ ತೃಪ್ತಿ ತಂದಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆಬಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ರಾಜ್ಯದ ವಿರೋಧ ಪಕ್ಷಗಳು, ಲೋಕಸಭಾ ಹಾಗೂ ರಾಜ್ಯ ಸಭಾ ಸದಸ್ಯರು ಅಭಿಪ್ರಾಯವನ್ನೂ ಸಹ ಪಡೆಯಲಾಗಿದೆ ಎಂದು ದಿಗ್ವಿಜಯ್ಸಿಂಗ್ ತಿಳಿಸಿದರು.
Discussion about this post