Read - < 1 minute
ಉಡುಪಿ, ಅ.15: ಕ್ಷತ್ರಿಯನಾಗಿದ್ದ ರಾಮ, ಗೊಲ್ಲನಾಗಿದ್ದ ಕೃಷ್ಣ ಮತ್ತು ಬೇಡರ ಸಮುದಾಯಕ್ಕೆ ಸೇರಿದ್ದ ವಾಲ್ಮೀಕಿ ಮಾಂಸಾಹಾರಿಗಳಾಗಿದ್ದರು ಎಂದು ಹೇಳಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಇನ್ನೊಂದು ಗಂಭೀರ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇಂದು ವಾಲ್ಮೀಕಿ ಜಯಂತಿ ಸರ್ಕಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು ಉದ್ದೇಶ ಪೂರ್ವಕವಾಗಿ, ದೇಶದ ಜನರು ಚರ್ಚೆ ನಡೆಸಬೇಕು ಎಂಬ ಕಾರಣಕ್ಕಾಗಿಯೇ ಇದನ್ನು ಹೇಳುತ್ತಿದ್ದೇನೆ ಎಂದೂ ಹೇಳಿದರು.
ಇಂದು ದೇಶದಲ್ಲಿ ಜನರ ಆಹಾರ ಪದ್ದತಿಯ ಬಗ್ಗೆ ವಿವಾದ ಉಂಟಾಗಿದೆ. ಈ ಬಗ್ಗೆ ಚರ್ಚೆ ಮಾಡುವವರು ರಾಮ, ಕೃಷ್ಣ ಅವರೂ ಮಾಂಸಹಾರಿಗಳಾಗಿದ್ದರು ಎಂಬುದನ್ನು ಮರೆಯಬಾರದು ಎಂದು ಪರೋಕ್ಷವಾಗಿ ಸಂಘ ಪರಿವಾರವನ್ನು ಕೆಣಕಿದರು.
ವೇದವ್ಯಾಸರು ಮದುವೆಯಾಗದ ಹೆಣ್ಣಿನಿಂದ ಹುಟ್ಟಿದವರು ಎಂದು ಪ್ರಮೋದ್ ವಾಲ್ಮೀಕಿ ಜಯಂತಿಗೆ ಸಂಬಂಧ ಇಲ್ಲದ ಮಾತುಗಳನ್ನು ತಮ್ಮ ಭಾಷಣಗಳಿಗೆಳೆದುಕೊಂಡರು.
ಜಾತಿಯ ಬಗ್ಗೆ ಏನೆಲ್ಲಾ ಮಾತನಾಡುವ ಹಕ್ಕು ತಮಗಿದೆ ಎಂದು ಕೆಲವರು ಭಾವಿಸುತ್ತಾರೆ, ಜಾತಿಯಲ್ಲಿ ನಾವೇ ಸರ್ವಶ್ರೇಷ್ಟರು ಎನ್ನುತ್ತಾರೆ, ಅವರ ಕಣ್ತೆರೆಸುವ ಉದಾಹರಣೆಗಳು ಪುರಾಣಗಳಲ್ಲಿ, ಇತಿಹಾಸದಲ್ಲಿ ಬೇಕಾದಷ್ಟು ಇದೆ ಎಂದೂ ಅವರು ಹೇಳಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ಪ್ರಮೋದ್ ಅವರು ಈ ರೀತಿ ಮಾತನಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಸಮಾರಂಭದ ವೇದಿಕೆಯಲ್ಲಿದ್ದ ಇತರ ಜನಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ಅವರ ಈ ಮಾತುಗಳು ಕಿರಿಯನ್ನುಂಟು ಮಾಡಿದ್ದು, ಅವರ ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು.
ಮುಖ್ಯವಾಗಿ ರಾಮ ಮತ್ತು ಕೃಷ್ಣ ಮಾಂಸ ತಿನ್ನುತ್ತಿದ್ದರು ಎಂದು ಅವರು ತಾವೇ ಖುದ್ದು ನೋಡಿ ಬಂದವರಂತೆ ಮಾತನಾಡಿದ್ದು, ತಾವೇ ಹೇಳಿದಂತೆ ಕಣ್ತೆರೆಸುವ ಯಾವ ಪುರಾಣದಲ್ಲಿ, ಇತಿಹಾಸದಲ್ಲಿ ರಾಮ, ಕೃಷ್ಣ ಮಾಂಸ ತಿನ್ನುತ್ತಿದ್ದರು ಎಂಬ ಉಲ್ಲೇಖ ಇದೆ ಎಂಬುದನ್ನು ಹೇಳದೇ ಭಾಷಣ ಮುಗಿಸಿದ್ದು, ಅವರ ಬಗ್ಗೆ ಇನ್ನಷ್ಟು ಸಂಶಯಗಳಿಗೆ ಕಾರಣವಾಗಿದೆ.
ಈಗಾಗಲೇ ಯೋಗೇಸ ಮಾಸ್ತರ್, ಭಗವಾನ್ ಸೇರಿದಂತೆ ಹಲವು ಎಡಪಂಥೀಯವಾದಿಗಳು ಹಿಂದೂ ದೇವರುಗಳು ಕುರಿತಾಗಿ ನೀಡಿದ ಹೇಳಿಕೆಗಳು ಹಲವು ವಿವಾದಗಳನ್ನು ಸೃಷ್ಠಿಸಿದ್ದವು. ಆದರೆ ಈಗ, ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಮೋದ್ ಮಧ್ವರಾಜ್ ಈ ರೀತಿಯ ಹೇಳಿಕೆಯನ್ನು ನೀಡಿರುವ ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ.
Discussion about this post