ಹೇಳುವುದು ಒಂದು ಮಾಡುವುದು ಇನ್ನೊಂದು, ತಮ್ಮ ಎಲೆಯಲ್ಲಿ ಕತ್ತೆ ಸತ್ತುಬಿದ್ದಿದ್ರೂ, ಪಕ್ಕದ ಎಲೆಯ ನೊಣ ಓಡಿಸಕ್ಕೆ ಹೋದರಂತೆ ಇಂತಹ ಮಾತುಗಳು ಎನ್‌ಎಸ್‌ಯುಐ ಎಂಬ ವಿದ್ಯಾರ್ಥಿ ಸಂಘಟನೆಗೆ ಸೂಕ್ತವಾಗಿ ಒಪ್ಪುತ್ತದೆ.
ನಿನ್ನೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶ ಕುರಿತಾಗಿ ತಮ್ಮ ಅಪಸ್ವರ ಎತ್ತಿದೆ. ರಂಗಮಂದಿರ ಸಾಂಸ್ಕೃತಿಕ ಸ್ಥಳವಾಗಿದ್ದು, ಇಲ್ಲಿ ರಾಯಣ್ಣ ಬ್ರಿಗೇಡ್‌ನಂತಹ ರಾಜಕೀಯ (?) ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು ತಪ್ಪು ಎಂದು ಆರೋಪಿಸಿದ್ದಾರೆ.
ಎನ್‌ಎಸ್‌ಯುಐಗೆ ತನ್ನ ಸ್ಮತಿ ತಪ್ಪಿಹೋಗಿದೆ ಎನಿಸುತ್ತಿದೆ. ಏಕೆಂದರೆ ೨೦೧೩ರಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಶಿವಮೊಗ್ಗ ನಗರಕ್ಕೆ ಕರೆಸಿದ್ದರು. ಆಗ, ಅವರ ಜೊತೆಗೆ ವಿದ್ಯಾರ್ಥಿಗಳ ಸಂವಾದ ನಡೆದಿದ್ದು ಇದೇ ಕುವೆಂಪು ರಂಗಮಂದಿರದಲ್ಲಿ. ಅದು ಅಂದಿಗೆ ರಾಜಕೀಯವಾಗಿರಲಿಲ್ಲ. ರಂಗಮಂದಿರದಂತಹ ಒಂದು ಸಾಂಸ್ಕೃತಿಕ ಸ್ಥಳದಲ್ಲಿ ದೂರದೂರಿನ ಓರ್ವ ಸಾಂಸದ, ಇಲ್ಲಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ರಾಜಕೀಯ ಪ್ರೇರಿತ ಎನಿಸಲಿಲ್ಲ. ಅದು ಔಚಿತ್ಯವೇ ಎಂದು ಒಮ್ಮೆಯಾದರೂ ಆತ್ಮವಿಮರ್ಶೆ ಮಾಡಿಕೊಳ್ಳಲಿಲ್ಲ. ಅದನ್ನು ಎನ್‌ಎಸ್‌ಯುಐ ಸ್ವತಃ ಆಯೋಜಿಸಿದ್ದೂ, ಅದನ್ನೇ ತಾನು ಮರೆತಿದೆ. ನಿನ್ನೆ ನಡೆದ ಸಮಾರಂಭದಲ್ಲಿ ಎಲ್ಲರೂ ಬಿಜೆಪಿ ಬೆಂಬಲಿಸುತ್ತೇವೆ ಎಂದಾಕ್ಷಣ ಅದು ಬಿಜೆಪಿ ಸಮಾರಂಭವಾಗುತ್ತದಾ? ಅದು ರಾಜಕೀಯ ಸಭೆಯಾಗುತ್ತದಾ? ಇದನ್ನು ಮೊದಲು ಅರ್ಥಮಾಡಿಕೊಳ್ಳಲಿ.
ರಂಗಮಂದಿರ ಸಾಂಸ್ಕೃತಿಕ ಸ್ಥಳ ಎಂದು ಇದ್ದಕ್ಕಿದ್ದಂತೆ ಎಚ್ಚರಗೊಂಡು ಬೊಬ್ಬಿಡಲು ಆರಂಭಿಸಿದ ಎನ್‌ಎಸ್‌ಯುಐನ ಮುಖಂಡರು ಅದೆಷ್ಟು ಬಾರಿ ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಂದಿದ್ದಾರೆ? ಅದನ್ನು ಆಸ್ವಾದಿಸಿದ್ದಾರೆ? ರಂಗಮಂದಿರದಲ್ಲಿನ ಅಭಿವೃದ್ಧಿ ಚಟುವಟಿಕೆಗಳು, ಕಲಾವಿದರ ನೋವುನಲಿವುಗಳಿಗೆ ಅದೆಷ್ಟು ಸ್ಪಂದಿಸಿದ್ದಾರೆ? ಇದನ್ನು ಬಿಡಿ, ಜಿಲ್ಲಾ ಸಾಹಿತ್ಯ ಸಮ್ಮೇಳನ ಇಲ್ಲಿಯೇ ನಡೆಯುತ್ತದೆ. ಇದರಲ್ಲಿ ಸಂಘಟನೆ ಎಷ್ಟು ಸಕ್ರಿಯವಾಗಿ ತೊಡಗಿಸಿಕೊಂಡಿದೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಇದರ ನಿರ್ವಹಣೆ, ಇದರ ದುರಸ್ತಿಗಾಗಿ ಹೆಣಗಾಡುವಾಗ ಸಂಘಟನೆಯ ಯಾರೊಬ್ಬರಾದರೂ ತಲೆಕೆಡಿಸಿಕೊಂಡಿರೇ? ಇದೇ ರಂಗಮಂದಿರದಲ್ಲಿ ಯುವಸಂಘಟನೆಗಳು ಸಂಸ್ಕೃತಿ ಮರೆತಂತಹ ಕಾರ್ಯಕ್ರಮ ನಡೆಸುವಾಗ, ಇದು ತಪ್ಪು ಎಂದು ಎಂದಾದರೂ ಎನ್‌ಎಸ್‌ಯುಐಗೆ ಅನಿಸಿದೆಯೇ?
ಇಂತಹ ಹಲವು ಪ್ರಶ್ನೆಗಳು ಜಿಲ್ಲೆಯ ಸಾರ್ವಜನಿಕರನ್ನು ಕಾಡತೊಡಗಿವೆ. ಎನ್‌ಎಸ್‌ಯುಐನಂತಹ ವಿದ್ಯಾರ್ಥಿ ಸಂಘಟನೆ ವಿದ್ಯಾರ್ಥಿ ಮುಖಿಯಾಗಿರಬೇಕೇ ಹೊರತು, ಮೊಸರಿನಲ್ಲಿ ಕಲ್ಲುಹುಡುಕಿ ನಗೆಪಾಟಲಿಗೀಡಾಗಬಾರದು.
ಸಂಘಟನೆ ಹಾಗೂ ವಿದ್ಯಾರ್ಥಿ ಮಿತ್ರರ ಮೇಲಿನ ಕಾಳಜಿಯಿಂದಾಗಿ ಇದನ್ನು ಹೇಳಿರುವುದು.
ಲೇಖನ: ಕೆ.ವಿ. ಅಜೇಯ ಸಿಂಹ
Discussion about this post