ವಾಷಿಂಗ್ಟನ್, ಸೆ.೨೧: ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸುವಲ್ಲಿ ಈಶಾನ್ಯ ರಾಜ್ಯದ ಸಿಕ್ಕಿಂ ಮುಂಚೂಣಿಯಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿ ಅತ್ಯಂತ ಕಳಪೆ ಸಾಧನೆ ಹೊಂದಿದೆ.
ಅಮೆರಿಕ ಮೂಲದ ಚಿಂತಕರ ಚಾವಡಿಯಾಗಿರುವ ಅಂತರ‌್ರಾಷ್ಟ್ರೀಯ ಅಧ್ಯಯನ ಕೆಂದ್ರ ಹಾಗೂ ನಾಥನ್ ಅಸೋಸಿಯೇಟ್ಸ್ ಜಂಟಿಯಾಗಿ ನಡೆಸಿದ ಅಧ್ಯಯನ ಪ್ರಕಾರ, ಭಾರತದಲ್ಲಿ ದುಡಿಯುವ ಮಹಿಳೆಯರಿಗೆ ಪೂರಕ ವಾತಾವರಣ ಕಲ್ಪಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಸಿಕ್ಕಿಂ ಮೊದಲ ಸ್ಥಾನ ಪಡೆದಿದೆ.
ಅಧ್ಯಯನ ವರದಿಯಲ್ಲಿ ಸಿಕ್ಕಿಂ ಗೆ ೪೦ ಪಾಯಿಂಟ್ ರೇಟಿಂಗ್ ದೊರೆತಿದ್ದರೆ, ರಾಷ್ಟ್ರ ರಾಜಧಾನಿ ದೆಹಲಿಗೆ ಕೇವಲ ೮.೫ ರೇಟಿಂಗ್ ಪಾಯಿಂಟ್ ದೊರೆತಿದೆ. ಕೈಗಾರಿಕೆ, ಐಟಿ ಉದ್ಯಮ ಕ್ಷೇತ್ರಗಳಲ್ಲಿ ಮಹಿಳೆಯರ ಕಾರ್ಯನಿರ್ವಹಿಸುವ ಅವಧಿಗೆ ಸಂಬಂಧಿಸಿದ ಕಾನೂನು ನಿರ್ಬಂಧನೆಗಳು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕಿರುಕುಳ ಸೇರಿದಂತೆ ಕ್ರಿಮಿನಲ್ ಪ್ರಕರಣಗಳ ಬಗ್ಗೆ ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ಸ್ಪಂದನೆ, ಒಟ್ಟಾರೆ ಉದ್ಯೋಗಸ್ಥರಲ್ಲಿ ಮಹಿಳೆಯರ ಶೇಕಡಾವಾರು ಸ್ಥಾನ. ಉದ್ಯೋಗದಲ್ಲಿ ಮಹಿಳೆಯರಿಗೆ ನಿಡಲಾಗುವ ಭಡ್ತಿ ಹಾಗೂ ಪ್ರೋತ್ಸಾಹಗಳ ಆಧಾರದ ಮೇಲೆ ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸುವ ರಾಜ್ಯವನ್ನು ಆಯ್ಕೆ ಮಾಡಲಾಗಿದೆ.
ಅಧ್ಯಯನದಲ್ಲಿ ಸಿಕ್ಕಿಂಗೆ ಮೊದಲ ಸ್ಥಾನ ನಂತರ ತೆಲಂಗಾಣ (೨೮.೫ ಪಾಯಿಂಟ್), ಪುದುಚೇರಿ(೨೫.೬ ಪಾಯಿಂಟ್), ಕರ್ನಾಟಕ (೨೪.೭ ಪಾಯಿಂಟ್), ಹಿಮಾಚಲ ಪ್ರದೇಶ(೨೪.೨ ಪಾಯಿಂಟ್), ಆಂಧ್ರ ಪ್ರದೇಶ (೨೪.೦ ಪಾಯಿಂಟ್), ಕೆರಳ (೨೨.೨ ಪಾಯಿಂಟ್),ಮಹಾರಾಷ್ಟ್ರ (೨೧.೪ ಪಾಯಿಂಟ್) , ತಮಿಳುನಾಡು (೨೧.೧), ಹಾಗೂ ಛತ್ತಿಸ್‌ಗಢ(೨೧.೧) ರಾಜ್ಯಗಳು ಮೊದಲ ಹತ್ತು ಸ್ಥಾನಗಳನ್ನು ಪಡೆದಿವೆ.
Discussion about this post