Read - < 1 minute
ನವದೆಹಲಿ, ಸೆ.16: ವಿಶ್ವದ ಭಯಾನಕ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಭಾರತದ ಮಾವೋವಾದಿ ಸಂಘಟನೆ ನಾಲ್ಕನೇ ಸ್ಥಾನ ಪಡೆದಿದೆ. ತಾಲಿಬಾನ್, ಐಎಸ್ಐಎಸ್, ಬೋಕೋ ಹರಾಮ್ ಬಳಿಕದ ನಂತರದ ಸ್ಥಾನದಲ್ಲಿ ಭಾರತದ ಮೂಲದ ನಕ್ಸಲ್ ಸಂಘಟನೆಯಿದೆ.
2015ರಲ್ಲಿ ನಡೆದ ವಿವಿಧ ಭಯೋತ್ಪಾದಕ ಕೃತ್ಯಗಳ ಕುರಿತಂತೆ ಸಂಶೋಧನೆ ನಡೆಸಿದ್ದ ಅಮೆರಿಕದ ನ್ಯಾಷನಲ್ ಕನ್ಸೋರ್ಟ್ಯಂ (ರಾಷ್ಟ್ರೀಯ ಒಕ್ಕೂಟ) ಸಂಸ್ಥೆಯು ಈ ವರದಿ ನೀಡಿದೆ. ಪಾಕಿಸ್ತಾನ ಮೂಲದ ತಾಲಿಬಾನ್ ಉಗ್ರ ಸಂಘಟನೆ ಮೊದಲ ಸ್ಥಾನದಲ್ಲಿದ್ದು, ಇರಾಕ್ ಮತ್ತು ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ 2ನೇ ಸ್ಥಾನದಲ್ಲಿದೆ. ಇನ್ನು ಆಫ್ರಿಕಾ ಖಂಡದಲ್ಲಿ ತನ್ನ ಭೀಬತ್ಸ ಕೃತ್ಯಗಳನ್ನು ಮುಂದುವರೆಸಿರುವ ಬೋಕೋಹರಾಮ್ ಉಗ್ರ ಸಂಘಟನೆ ಮೂರನೇ ಸ್ಥಾನದಲ್ಲಿದ್ದು, ಈಶಾನ್ಯ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಮಾವೋವಾದಿ ಸಂಘಟನೆ ನಾಲ್ಕನೇ ಸ್ಥಾನದಲ್ಲಿದೆ.
2015ರಲ್ಲಿ ಮಾವೋವಾದಿಗಳು ನಡೆಸಿದ 343 ಉಗ್ರ ದಾಳಿಗಳ ಪೈಕಿ 176 ಮಂದಿ ಸಾವನ್ನಪ್ಪಿದ್ದರು. ಇನ್ನು ಮಾವೋವಾದಿಗಳ ದಾಳಿಯಿಂದಾಗಿ ಹೆಚ್ಚು ಹಾನಿಗೊಳಗಾದ ರಾಜ್ಯವೆಂದರೆ ಛತ್ತೀಸ್ ಘಡ. ವೋವಾದಿಗಳ ದಾಳಿಗಳ ಪೈಕಿ ಶೇ.21ರಷ್ಟು ದಾಳಿಗಳು ಛತ್ತೀಸ್ ಗಡದಲ್ಲಿಯೇ ನಡೆದಿದ್ದು, ಮಣಿಪುರದಲ್ಲಿ ಶೇ.12, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.11 ಹಾಗೂ ಜಾರ್ಖಂಡ್ ನಲ್ಲಿ ಶೇ.10 ರಷ್ಟು ದಾಳಿಗಳು ನಡೆದಿವೆ.
2015ರಲ್ಲಿ ತಾಲಿಬಾನ್ ನಡೆಸಿದ 1,093 ದಾಳಿಗಳಿಂದಾಗಿ 4,512 ಮಂದಿ ಸಾವನ್ನಪ್ಪಿದ್ದಾರೆ. ಐಎಸ್ಐಎಸ್ ಉಗ್ರಗಾಮಿ ಸಂಘಟಟನೆ ನಡೆಸಿದ 931 ದಾಳಿಗಳಿಂದಾಗಿ 6,050 ಮಂದಿ ಸಾವಿಗೀಡಾಗಿದ್ದಾರೆ. ಅಂತೆಯೇ ಆಫ್ರಿಕಾ ಮೂಲದ ಬೋಕೋ ಹರಾಮ್ ನಡೆಸಿದ 491 ದಾಳಿಗಳಿಂದಾಗಿ 5,450 ಮಂದಿ ಹತರಾಗಿದ್ದಾರೆ ಎಂದು ವರದಿ ತಿಳಿಸಿದೆ.
Discussion about this post