ವೇದವೆಂದರೆ ಜ್ಞಾನ.ಸಮಸ್ತ ಜ್ಞಾನಗಳ ಆಗರ.ಭಕ್ತರಿಗೆ ವೇದಬ್ರಹ್ಮನಾದರೆ,ನೀತಿಜ್ಞರಿಗೆ
ನೀತಿಗ್ರಂಥ.ಸಂಶೋಧಕರಿಗೆ ಸಂಶೋಧನಾಗ್ರಂಥ.ವಿದ್ವಾಂಸರಿಗೆ ಜ್ಞಾನನಿಧಿ.ಮನಸ್ಸಿಗೆ
ಸುಧಾನಿಧಿ.ವೇದಮಂತ್ರಗಳು ಕೇವಲ ಧಾರ್ಮಿಕಕಾರ್ಯಕ್ರಮಗಳಿಗಷ್ಟೇ ಸೀಮಿತವೆಂಬುದು
ನಮ್ಮೆಲ್ಲರ ತಪ್ಪು ಕಲ್ಪನೆ.ವ್ಯಕ್ತಿತ್ವವಿಕಸನಕ್ಕೂ ವೇದಮಂತ್ರಗಳು
ಸಹಕಾರಿ.ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅನೇಕ ಉದಾಹರಣೆಗಳು ವೇದಮಂತ್ರಗಳಲ್ಲಿ
ಕಂಡುಬರುತ್ತವೆ.ಕೆಲವು ಉದಾಹರಣೆಗಳನ್ನು ಗಮನಿಸೋಣ..
“ಪರಿಮಾಗ್ನೇ ದುಶ್ಚರಿತಾದ ಬಾಧಸ್ವಾ ಮಾ ಸುಚರಿತೇ ಭವ”
ಅಗ್ನಿದೇವ ! ಸದಾ ನೀನು ನಮ್ಮನ್ನು ದುಶ್ಚಟಗಳಿಂದ ದೂರವಿರುವಂತೇ ಮಾಡು.ಸದಾ
ಸತ್ಕರ್ಮಾಚರಣೆಯತ್ತ ಪ್ರೇರೇಪಿಸು
“ಅಹಮನೃತಾತ ಸತ್ಯಮುಪೈಮಿ”
ನಾನು ಅಸತ್ಯದಿಂದ ಸತ್ಯದತ್ತ ಸಾಗುತ್ತೇನೆ
“ವಯಂ ದೇವಾನಾಂ ಸುಮತೌ ಸ್ಯಾಮ”
ನಾವು ದೇವತೆಗಳಲ್ಲಿರುವ ಕಲ್ಯಾಣಕಾರಿ ಬುದ್ಧಿಯನ್ನೇ ಬಯಸುತ್ತೇವೆ.
“ಮಿತ್ರಸ್ಯ ಚಕ್ಷುಷಾ ಸಮೀಕ್ಷಾಮಹೇ”
ನಾವು ಪ್ರತಿಜೀವಿಗಳನ್ನೂ ಮಿತ್ರರಂತೇ ಕಾಣುತ್ತೇವೆ.
“ಮಾ ಗ್ರಧಃ ಕಸ್ಯಸ್ವಿದ್ಧನಮ್”
ಬೇರೆಯವರ ಸಂಪತ್ತನ್ನು ಬಯಸಬೇಡ.
“ಅಗ್ನೇ ನಯ ಸುಪಥಾರಾಯೇ ಅಸ್ಮಾನ್”
ಹೇ ಅಗ್ನಿ ! ಸನ್ಮಾರ್ಗದಿಂದ ಸಂಪತ್ತನ್ನು ಗಳಿಸುವಂತೇ ನಮ್ಮನ್ನು ಪ್ರೇರೇಪಿಸು
“ಉತ ನಃ ಸುಭಗಾಂ ಅರಿರ್ವೋಚೆಯುದಸ್ಮ ಕೃಷ್ಟಯಃ |ಸ್ಯಾಮೇದಿಂದ್ರಸ್ಯ ಶರ್ಮಾಣಿ”
ದುರ್ಗುಣ ಹಾಗೂ ಪಾಪಗಳನ್ನು ಪರಿಹರಿಸುವ ಹೇ ಪ್ರಭೋ ! ನಮ್ಮ ಶತ್ರುವೂ ಸಹ ನಮ್ಮ
ಸಚಾರಿತ್ರ್ಯತೆಯನ್ನು ಕಂಡು ಶ್ರೇಷ್ಟ ಹಾಗೂ ಸೌಭಾಗ್ಯಶಾಲಿಯೆಂದು ಕರೆಯಲಿ.
ಸಚಾರಿತ್ರ್ಯತೆಯಿಂದ ಮನಸ್ಸು ಭಕ್ತಿಯಲ್ಲೇ ಮುಳುಗಿರಲಿ.
“ಭದ್ರಂ ಭದ್ರಂ ಕ್ರತಮಸ್ಮಾಸು ಧೇಹಿ”
ನಾವು ಯಾವಾಗಲೂ ಉತ್ತಮ ಸಂಕಲ್ಪ,ಜ್ಞಾನ ಹಾಗೂ ಕರ್ಮವನ್ನು ಧರಿಸೋಣ.
“ಸ್ವಸ್ತಿ ಪಂಥಾಮನುಚರೇಮ”
ಸದಾ ಒಳ್ಳೆಯ ಮಾರ್ಗವನ್ನೇ ಅನುಸರಿಸೋಣ
“ಜೀವಾಜ್ಯೋತಿರಶೀಮಹಿ”
ಶರೀರಧಾರಿ ಪ್ರಾಣಿಗಳು ವಿಶಿಷ್ಟವಾದ ಜ್ಯೋತಿಯನ್ನು ಪಡೆಯಲಿ.
“ಕೃಧೋ ನ ಯಶಸೋ ಜನೇ”
ನಾವು ನಮ್ಮ ದೇಶದಲ್ಲಿ ಯಶಸ್ವಿಗಳಾಗೋಣ.
“ಮಾ ಬ್ರಹ್ಮಾದ್ವಿಷಂ ಜನಃ”
ವಿದ್ವಾಂಸರನ್ನು ದ್ವೇಷಿಸುವ ಜನರಿಂದ ದೂರವಿರೋಣ.
“ವಯಂ ಸರ್ವೇಷು ಯಶಸಃ ಸ್ಯಾಮ”
ಸಮಸ್ತ ಕಾರ್ಯದಲ್ಲೂ ಯಶಸ್ಸನ್ನು ಗಳಿಸೋಣ.
“ಸರ್ವಾ ಆಶಾ ಮಮ ಮಿತ್ರಂ ಭವತು”
ಎಲ್ಲಾ ದಿಕ್ಕೂಗಳೂ ನನ್ನ ಮಿತ್ರರಾಗಿರಲಿ.
“ಶುಕ್ರೋಸಿ ಸ್ವರಸಿ ಜ್ಯೋತಿರಸಿ |
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ|”
ಹೇ ಮನುಷ್ಯ ! ನಿನ್ನ ಆತ್ಮ ವೀರ್ಯವಾನ್,ತೇಜಸ್ವೀ,ಆನಂದಯುಕ್ತ ಹಾಗೂ
ಪ್ರಕಾಶಸ್ವರೂಪಿಯಾಗಿದೆ.ಆದ್ದರಿಂದ ಶ್ರೇಷ್ಟತೆಯನ್ನು ಪಡೆದು,ಬೇರೆಯವರಿಗೂ
ಶ್ರೇಷ್ಟತೆಯನ್ನು ಪಡೆಯಲು ಸಹಕರಿಸು.
“ಉಲೂಕಯಾತಂ ಶುಶುಲೂಕಯಾತುಂ ಜಹಿ ಶ್ವಯಾತುಮುತ ಕೋಕಯಾತುಮ್ |
ಸುಪರ್ಣಾಯಾತುಮುತ ಗೃಧಯಾತುಂ ದೃಷದೇವ ಪ್ರಮೃಣಾ ರಕ್ಷ ಇಂದ್ರ |”
ಹೇ ಇಂದ್ರದೇವ ! ಗೂಬೆಯಂತಿರುವ ಮೋಹವನ್ನು,ಗೂಬೆಯ ಮರಿಗಳಂತಿರುವಈರ್ಷ್ಯೆ ಹಾಗೂ
ದ್ವೇಷಗಳನ್ನು,ನಾಯಿಯಂತಿರುವ ಆತುರತೆಯನ್ನು,ಪಾರಿವಾಳದಂತಿರುವ
ಕಾಮವಾಸನೆಯನ್ನು,ಗರುಡದಂತಿರುವ ಅಹಂಕಾರವನ್ನು,ಹದ್ದಿನಂತಿರುವ ಲೋಭವನ್ನು ನಾಶ ಮಾಡು.
“ವೈಶ್ವದೇವೀಂ ವರ್ಚಸ ಆ ರಭಧ್ವಂ ಶುದ್ಧಾ ಭವತಃ ಶುಚಯಃ ಪಾವಕಾಃ |ಅತಿಕ್ರಾಮಂತೋ
ದುರಿತಾ ಪದಾನಿ ಶತಂ ಹಿಮಾಃ ಸರ್ವವೀರಾ ಮದೇಮ ||”
ಹೇ ಪ್ರಭೋ ! ಪವಿತ್ರತೆ ಹಾಗೂ ತೇಜಸ್ಸನ್ನು ಗಳಿಸಲು ಉತ್ತಮ ಮಾರ್ಗವಾಗಿರುವ ವೇದವಾಣಿಯ
ಮೂಲಕ ಜೀವನವನ್ನು ಪವಿತ್ರವನ್ನಾಗಿಸಿ,ಬೇರೆಯವರಿಗೂ ಪವಿತ್ರತೆಯ ಮಾರ್ಗವನ್ನು ಗಳಿಸಲು
ಪ್ರೇರಣೆ ನೀಡು.ಪಾಪಪ್ರೇರಕ ಕಾರ್ಯಗಳನ್ನು ದೂರೀಕರಿಸಿ ಶತಸಂವತ್ಸರಗಳ ಕಾಲ ಪವಿತ್ರತೆ
ಹಾಗೂ ಆನಂದದೊಂದಿಗೆ ಜೀವಿಸುವಂತೇ ಮಾಡು.
“ಉದ್ಯಾನಂ ತೇ ಪುರುಷ ನಾವಯಾನಂ ಜೀವಾತುಂ ತೇ ದಕ್ಷತಾತಿಂ ಕೃಣೋಮಿ |
ಆ ಹಿಂ ರೋಹೇಮಮಮೃತಂ ಸುಖಂ ರಥಮಥ ಜೀವಿರ್ವಿದಥಮಾ ವದಾಮಿ ||”
ಹೇ ಮನುಷ್ಯ ! ನಿನ್ನ ಜೀವನದ ಲಕ್ಷ್ಯ ಉನ್ನತಿಗೇರುವುದು.ಅಧಃಪತನ
ಹೊಂದುವುದಲ್ಲ.ಉನ್ನತಿಯನ್ನೇ ಹೊಂದು,ಅವನತಿಯನ್ನಲ್ಲ.ಈ ಪ್ರಕಾರ ಜೀವಿಸಲು ನಾನು ನಿನಗೆ
ಬಲವನ್ನು ನೀಡಿದ್ದೇನೆ.ಜೀವನರೂಪಿ ರಥದಲ್ಲಿ ಹತ್ತಿ ಉನ್ನತಿಯನ್ನು ಪಡೆದು,ಬೇರೆಯವರಿಗೂ
ಪ್ರೇರಣೆಯನ್ನು ನೀಡು.
“ಉತ್ತಿಷ್ಠತ ಸಂನಹ್ವಾಧ್ವಂ ಮಿತ್ರಾ ದೇವಜನಾ ಯೂಯಮ್ |
ಇಮಂ ಸಂಗ್ರಾಮಂ ಸಂಜಿತ್ಯ ಯಥಾಲೋಕಮ್ ವಿತಿಷ್ಠಧ್ವಮ್ ||”
ಹೇ ಮಾನವ ! ಆತ್ಮಬಲದೊಂದಿಗೆ ನೀನು ಈ ಶರೀರದ,ಮನಸ್ಸಿನ ಹಾಗೂ ಇಂದ್ರಿಯಗಳ
ಶಾಸಕನಾಗಿರುವೆ.ನಿನ್ನ ಸರ್ವಶ್ರೇಷ್ಟ ಮಿತ್ರರೊಂದಿಗೆ ಪಾಪವಾಸನೆಗಳನ್ನು ತ್ಯಾಗ ಮಾಡಲು
ಸನ್ನದ್ಧನಾಗು.ಪಾಪದ ವಿರುದ್ಧದ ಈ ಸಂಗ್ರಾಮದಲ್ಲಿ ವಿಜಯಿಯಾಗಿ,ಜೀವನದ ಅಂತಿಮ
ಲಕ್ಷ್ಯವಾಗಿರುವ ಮೋಕ್ಷತ್ವವನ್ನು ಪ್ರಾಪ್ತಿ ಮಾಡಿಕೋ.
“ಅನುವೃತಃ ಪಿತುಃ ಪುತ್ರೋ ಮಾತ್ರಾ ಭವತು ಸಂಮನಾಃ |
ಜಾಯಾ ಪತ್ಯೇ ಮಧುಮತೀಂ ವಾಚಂ ವದತು ಶಾಂತಿವಾಮ ||”
ಮಗ,ತಂದೆ ಹಾಗೂ ತಾಯಿಯೊಂದಿಗೆ ಅನುಕೂಲವಾದ ವ್ಯವಹಾರವನ್ನು ಮಾಡಿ.ಪತ್ನಿ ಹಾಗೂ
ಪತಿಯೊಂದಿಗೆ ಮಧುರ ಹಾಗೂ ಶಾಂತಿಪ್ರಿಯವಾದಂತಹ ಮಾತನ್ನಾಡಿ.
“ಸಹೃದಯಂ ಸಾಂಮನಸ್ಯಮಿವಿದ್ವೇಷ್ಯಂ ಕೃಣೋಮಿ ವಃ |
ಅನ್ಯೋ ಅನ್ಯಮಭಿದೂರ್ಯತ ವತ್ಸಂ ಜಾತಮಿವಾಘ್ನ್ಯಾ ||”
ಹೇ ಮನುಷ್ಯ ! ಸದಾಚಾರದ ಮಾರ್ಗವನ್ನನುಸರಿಸಿ ನೀನು ಸ್ನೇಹಯುಕ್ತಹೃದಯ,ಉತ್ತಮವಿಚಾರ
ಹಾಗೂ ತ್ಯಾಗಕರ ಜೀವನವನ್ನು ನಡೆಸು.ಹೇಗೆ ಗೋವು ತನ್ನ ಕರುವಿಗೆ ನಿಃಸ್ವಾರ್ಥ
ಪ್ರೀತಿಯನ್ನು ನೀಡುವುದೋ ಹಾಗೇ ನೀನೂ ಸಹ ನಿಃಸ್ವಾರ್ಥಪೂರ್ಣನಾಗಿ ಎಲ್ಲರನ್ನೂ
ಪ್ರೀತಿಸು.
ಇವು ಕೇವಲ ಉದಾಹರಣೆಗಳಷ್ಟೇ.ವೇದವಾಂಗ್ಮಯದಲ್ಲಿ ಇಂತಹ ಅದೆಷ್ಟೋ
ವ್ಯಕ್ತಿತ್ವವಿಕಸನಕ್ಕೆ ಸಂಬಂಧಿಸಿದ ಮಂತ್ರಗಳು ಸಿಗುತ್ತವೆ.ವೇದಮಂತ್ರಗಳು ಸದಾ
ಸಮಸ್ತ ಜೀವಿಗಳ ಅಭ್ಯುದಯವನ್ನೇ ಬಯಸುತ್ತವೆ.ಸರ್ವಧರ್ಮಗಳ ಸಾರವೇ ವೇದ.ಹಾಗಾಗಿಯೇ
“ವೇದೋಖಿಲಂ ಧರ್ಮಮೂಲಂ” ಎಂಬ ಮಾತಿದೆ.
Discussion about this post