Read - < 1 minute
ನವದೆಹಲಿ, ಸೆ.2: ಬಹುಕೋಟಿ ರೂಪಾಯಿ ಶಾರದಾ ಚಿಟ್-ಫಂಡ್ ಹಗರಣದ ಸಂಬಂಧ ಕೊಲ್ಕತದ ಜಾರಿ ನಿರ್ದೇಶನಾಲಯ (ಇಡಿ) ಹಣಕಾಸು ಖಾತೆ ಮಾಜಿ ಸಚಿವ ಪಿ. ಚಿದಂಬರ್ ಪತ್ನಿ ನಳಿನಿ ಅವರಿಗೆ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಕೋಟ್ಯಂತರ ರೂಪಾಯಿ 2-ಜಿ ಪ್ರಕರಣದಲ್ಲಿ ಅವರ ಪುತ್ರ ಕಾರ್ತಿ ಚಿದಂಬರಂನನ್ನು ಇಡಿ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಏರ್ಸೆಲ್-ಮಾಕ್ಸಿಸ್ ವ್ಯವಹಾರದ ಬಗ್ಗೆ ವಿಚಾರಣೆ ನಡೆಸಲು ದೆಹಲಿಯ ಜಾರಿ ನಿರ್ದೇಶನಾಲಯವು ವಾಣಿಜ್ಯೋದ್ಯಮಿ ಕಾರ್ತಿ ಚಿದಂಬರ್ಗೆ ಬುಧವಾರ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಕಾರ್ತಿ ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. 2-ಜಿ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಭಾಗವಾಗಿ ಮ್ಯಾಕ್ಸಿಸ್ ಸಂಸ್ಥೆಯನ್ನು ಸ್ವಾಧೀನಕ್ಕೆ ಪಡೆದ ಏರ್ಸೆಲ್ನ ಕೆಲವು ವ್ಯವಹಾರಗಳ ಬಗ್ಗೆ ಹಣ ದುರ್ಬಳಕೆ ತಡೆ ಕಾಯ್ದೆ ಅನ್ವಯ ಜಾರಿ ನಿರ್ದೇಶನಾಲಯ ಚಿದಂಬರಂ ಪುತ್ರನನ್ನು ವಿಚಾರಣೆಗೆ ಒಳಪಡಿಸಬೇಕಿದೆ.
ಜಾರಿ ನಿರ್ದೇಶನಾಲಯವು ಮೂರು ಬಾರಿ ಕಾರ್ತಿಗೆ ಸಮನ್ಸ್ ಗಳನ್ನು ಗುಜರಾಯಿಸಿದ್ದರೂ, ಪ್ರತಿಕ್ರಿಯಿಸಿಲ್ಲ. ಖುದ್ದಾಗಿ ಹಾಜರಾಗುವಂತೆ ಬುಧವಾರ ಸಹ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಹಾಜರಾತಿ ಮತ್ತು ವಿಚಾರಣೆಗೆ ಚಕ್ಕರ್ ಹಾಕಿರುವ ಕಾರ್ತಿಯನ್ನು ವಶಕ್ಕೆ ತೆಗೆದುಕೊಳ್ಳಲು ಜಾರಿ ನಿರ್ದೇಶನಾಲಯ ಪರಿಶೀಲಿಸಿದೆ.
ಈ ಬಗ್ಗೆ ಕಾರ್ತಿಯನ್ನು ಪ್ರಶ್ನಿಸಿದಾಗ ನನ್ನನ್ನು ಕೇಳುವುದಕ್ಕಿಂತ ಅವರನ್ನೇ (ಇಡಿ) ಕೇಳಿ ಎಂದು ಹಾರಿಕೆ ಉತ್ತರ ನೀಡಿದ್ದಾರೆ.
Discussion about this post