Read - 2 minutes
ಶಿವಮೊಗ್ಗ, ಅ.4: ಪೂರ್ಣಚಂದ್ರ ತೇಜಸ್ವಿ ಅವರನ್ನು ನೋಡಲೆಂದು ಒಮ್ಮೆ, ಶಾಲಾ ಮಕ್ಕಳನ್ನು ಕರೆದುಕೊಂಡು ಮೇಷ್ಟ್ರೊಬ್ಬರು ಮೂಡಿಗೆರೆಗೆ ಹೋಗಿದ್ದರು.
ಆಗ ಆ ಮೇಷ್ಟ್ರು ಅವರೊಂದಿಗೆ ಮಾತನಾಡುತ್ತಾ ‘ಮಕ್ಕಳಿಗೆ ಬೇಲೂರು, ಹಳೇಬೀಡು ತೋರಿಸಿಕೊಂಡು ಬಂದೆವು. ಹಾಗೆಯೇ ತಮ್ಮನ್ನೂ ತೋರಿಸಿಕೊಂಡು ಹೋಗೋಣ ಎಂದು ಕರೆದುಕೊಂಡು ಬಂದೆವು’ ಎಂದರು.
ಇದನ್ನು ಕೇಳಿ ತೇಜಸ್ವಿ ‘ಹಾಗೇ ನೋಡಿಕೊಂಡು ಹೋಗಲು, ನಾನೇನು ಮಾನ್ಯುಮೆಂಟೇ’ ಅಂದಿದ್ದರಂತೆ.
ಇದನ್ನೇ ಸ್ವಲ್ಪ ಬದಲಾಯಿಸಿ ಶಿವಮೊಗ್ಗ ಮಹಾನಗರಪಾಲಿಕೆಗೆ ಹೇಳಬೇಕಾಗಿದೆ.
ಅಂತರ್ರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿಯನ್ನು ನಾಗರಿಕರ ಪರವಾಗಿ ನಿನ್ನೆ ಸನ್ಮಾನಿಸಿತು. ಆ ಮುಖಾಂತರ ಶಿವಮೊಗ್ಗ ಇನ್ನೊಂದು ಸ್ವರ್ಣಗರಿಯನ್ನು ಮೂಡಿಸಿಕೊಂಡಿತು. ಆದರೆ, ಅವರನ್ನು ಅಧಿಕೃತವಾಗಿ ಆಹ್ವಾನಿಸದೇ, ಕಾಟಾಚಾರಕ್ಕೆಂಬಂತೆ, ಯುವದಸರಾದಲ್ಲಿ ಅವರನ್ನು ಸನ್ಮಾನಿಸಿದ್ದು, ಎಷ್ಟರಮಟ್ಟಿಗೆ ಸರಿ ಎಂಬ ಜಿಜ್ಞಾಸೆ ಮೂಡಿದೆ.
ಆ ವಿಜ್ಞಾನಿ ಅಂತರ್ರಾಷ್ಟ್ರೀಯ ಖ್ಯಾತಿ ಹೊಂದಿದ್ದರೂ, ಸರಳ-ಸಜ್ಜನತೆಯಿಂದ ಪಾಲಿಕೆ ಆಹ್ವಾನ ಮನ್ನಿಸಿ ಆಗಮಿಸಿದ್ದರು. ಈ ಆಹ್ವಾನ ಅಧಿಕೃತವಾಗಿ ಇರಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯೊಂದು ಅವರನ್ನು ಕಾರ್ಯಕ್ರಮಕ್ಕೆ ಕರೆಯಿಸಿತ್ತು. ಇದೇ ನೆಪದಲ್ಲಿ ಪಾಲಿಕೆ ಅವರನ್ನು ತನ್ನ ದಸರಾದಲ್ಲಿ ಸನ್ಮಾನ ಮಾಡಿತು. ಆದರೆ, ಅಂತ ಓರ್ವ ವಿಜ್ಞಾನಿಗೆ ಪೌರಸನ್ಮಾನ ಮಾಡಲು, ನಿರ್ದಿಷ್ಟ ವೇದಿಕೆ, ಸಾರ್ವಜನಿಕರ ಸಹಭಾಗಿತ್ವ ಬೇಡವೇ? ಶಿಷ್ಟಾಚಾರ ಎಂಬುದೊಂದಿದೆ ಎನ್ನುವುದಾದರೂ ಪಾಲಿಕೆಗೆ ಗೊತ್ತಿದೆಯೇ? ಇದು ಒಂದು ರೀತಿಯಲ್ಲಿ ಆ ಶ್ರೇಷ್ಠ ವಿಜ್ಞಾನಿಗೆ ಅಪಚಾರ ಮಾಡಿದಂತಾಗಲಿಲ್ಲವೇ ಎಂಬ ಪ್ರಶ್ನೆಗಳಿಗೆ ಉತ್ತರಿಸುವವರಾರು?
ಪಾಲಿಕೆ ಯುವದಸರಾ ಸಮಿತಿ ಅಧ್ಯಕ್ಷ ವಿಶ್ವನಾಥ (ಕಾಶಿ)ಗಾಗಲಿ ಅಥವಾ ಪಾಲಿಕೆಗಾಗಲಿ ಆ ವಿಜ್ಞಾನಿ ಶಿವಮೊಗ್ಗಕ್ಕೆ ಬರುವವರೆಗೂ, ಅವರ ಬಗ್ಗೆ ತಿಳಿದಿರಲಿಲ್ಲ. ಇಲ್ಲಿಗೆ ಬಂದಾಗ ಇವರಿಗೆ ಇದ್ದಕಿದ್ದಂತೆ ಜ್ಞಾನೋದಯವಾಗಿದೆ. ತತಕ್ಷಣಕ್ಕೆ ಇಲ್ಲಿ ನಡೆಯುತ್ತಿದ್ದ ದಸರೋತ್ಸವ ಕಣ್ಣಿಗೆ ಕಂಡಿದ್ದು, ಅದರಲ್ಲಿಯೇ ಸನ್ಮಾನ ಮಾಡಿ ಬೀಗಿದ್ದಾರೆ. ನಿಸ್ಪಹ, ನಿಗರ್ವಿ ವಿಜ್ಞಾನಿ ಇದರ ಬಗ್ಗೆ ಚಕಾರವೆತ್ತದೆ, ಸನ್ಮಾನಿಸಿಕೊಂಡಿದ್ದಾರೆ.
ಆದರೆ, ನಾಗರಿಕರಾದ ನಾವಾದರೂ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಲ್ಲವೇ ?
ಶಾಸಕರು ಜನಪ್ರತಿನಿಧಿ ಸರಿ, ಆದರೆ ಅವರ ಪತ್ನಿ ನೇರವಾಗಿ ದಸರಾ ವೇದಿಕೆಗೆ ಪ್ರವೇಶಪಡೆದುಕೊಳ್ಳುತ್ತಾರೆ. ಮಹಿಳಾ ದಸರಾದಲ್ಲಿ ಶಾಸಕ ಪ್ರಸನ್ನಕುಮಾರ್ ಪತ್ನಿಗೂ ಅವಕಾಶ ಮಾಡಿಕೊಟ್ಟಿರುವುದು ಹುಬ್ಬೇರುವಂತೆ ಮಾಡಿದೆ. ಸಾಧಕರನ್ನು ವೇದಿಕೆಗೆ ಕರೆದು, ಗೌರವಿಸುವುದು ಲೋಕಾರೂಢಿ. ಆದರೆ, ಶಾಸಕರ ಪತ್ನಿ ಯಾವ ಲೆಕ್ಕದಲ್ಲಿ ಸಾಧಕಿ ಎಂಬುದು ಸಾರ್ವಜನಿಕರಿಗೆ ಅರ್ಥವಾಗಿಲ್ಲ.
ಪಾಲಿಕೆಗೆ ಸಾಧಕರನ್ನು ಹುಡುಕುವ ಮನಸ್ಸಿಲ್ಲವೇ? ಹುಡುಕಿಲ್ಲವೇ? ಅಥವಾ ಶಾಸಕ ಕಮ್ ಪಾಲಿಕೆ ಸದಸ್ಯ ಪ್ರಸನ್ನಕುಮಾರ್‌ರ ಹುಕುಂ ಎನ್ನಬಹುದೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಷ್ಟೋ ಮಂದಿ ಎಲೆ ಮರೆಯ ಕಾಯಿಯಂತೆ ಇದ್ದಾರೆ. ಇಂತಹವರ ಕುರಿತಾಗಿ ಹಲವು ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಅಂತಹ ಸಾಧಕರನ್ನು ಗುರುತಿಸಿ, ವೇದಿಕೆಗೆ ಕರೆದು ಸನ್ಮಾನಿಸಬಹುದು. ಅದರ ಬದಲಾಗಿ, ಶಾಸಕರ ಪತ್ನಿ ಎಂಬ ಕಾರಣಕ್ಕಾಗಿ ಅವರನ್ನು ವೇದಿಕೆಗೆ ಕರೆಯಲಾಗುತ್ತದೆ ಎಂದರೆ, ಈ ನಿರ್ಧಾರದ ಹಿಂದೆ ಒತ್ತಡ ಇಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂಬುದು ನಾಗರಿಕ ಅಂಬೋಣ.
* ಚಲನಚಿತ್ರ ದಸರಾದಲ್ಲಿ ಪ್ರದರ್ಶನವಾಗಲಿರುವ ಚಿತ್ರಗಳಲ್ಲಿ ಕೆಲವು ಅದೆಷ್ಟು ಬಾರಿ ವಾಹಿನಿಗಳಲ್ಲಿ ಪ್ರದರ್ಶನವಾಗಿದೆ ಎಂಬುದಕ್ಕೆ ಲೆಕ್ಕವಿಲ್ಲ. ಅವನ್ನೇ ಮತ್ತೆ ಪ್ರದರ್ಶನ ಮಾಡುವುದರ ಹಿಂದಿರುವ ಮರ್ಮವೇನು?
* ಡೊಳ್ಳು ಕಲಾವಿದರನ್ನು ಮಹಾರಾಷ್ಟ್ರದಿಂದ ಕರೆಸಲಾಗುತ್ತಿದೆ. ಸ್ಥಳೀಯ ಕಲಾವಿದರನ್ನು ಉತ್ತೇಜಿಸಬೇಕಿದ್ದ, ಪಾಲಿಕೆ ನೆರೆಯ ರಾಜ್ಯದ ಕಲಾವಿದರಿಗೆ ಸಂಭಾವನೆ ನೀಡಿ ಕರೆಸುವ ಹಕೀಕತ್ತ್ ಆದರೂ ಏನು ?
* ಜಿಲ್ಲೆಯಾದ್ಯಂತ ಬರ ಪರಿಸ್ಥಿತಿ ಇದೆ. ಈ ಸಮಯದಲ್ಲಿ ದಸರಾಕ್ಕೆ ಸರ್ಕಾರ ಒಂದು ಕೋಟಿ ನೀಡಿದೆ ಎಂದ ಮಾತ್ರಕ್ಕೆ ಅದಷ್ಟನ್ನೂ ಖರ್ಚು ಮಾಡಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರಾ ಪಾಲಿಕೆ ಸದಸ್ಯರು ಹಾಗೂ ಶಾಸಕರು?
* ಇಂತಹ ಮಾತುಗಳು ಕೇಳಿಬರಬಾರದೆಂದೇ ರೈತದಸರಾ ಎಂಬುದನ್ನು ಮಾಡಲಾಗುತ್ತಿದೆಯೇ?
Discussion about this post