Read - < 1 minute
ಬೆಂಗಳೂರು, ಅ.5: ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಆಂತರಿಕ ಭಿನ್ನಮತ ಶಮನಕ್ಕೆ ಪಕ್ಷದ ವರಿಷ್ಠರು ಗಮನ ಹರಿಸಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ನಿಮ್ಮ ಭಿನ್ನಾಭಿಪ್ರಾಯಗಳೇನೇ ಇದ್ದರೂ ಅದನ್ನು ಬದಿಗಿಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಸೂಚನೆ ನೀಡಿರುವ ಬೆನ್ನಲ್ಲೇ ಶುಕ್ರವಾರ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದೆ.
ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಈ ಸಭೆಗೆ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ. ಸದಾನಂದಗೌಡ , ರಾಜ್ಯ ಪ್ರಮುಖರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಕೋರ್ ಕಮಿಟಿಯ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ.
ಕೋರ್ ಕಮಿಟಿ ಸಭೆಯಲ್ಲಿ ಪ್ರಮುಖವಾಗಿ ರಾಜ್ಯ ಕಾರ್ಯಕಾರಿಣಿಯಲ್ಲಿ ಕೈಗೊಂಡಿರುವ ನಿರ್ಣಯಗಳ ಅನುಷ್ಠಾನ ಹಾಗೂ ಭವಿಷ್ಯದಲ್ಲಿ ಪಕ್ಷ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವೈಮನಸ್ಸಿಗೆ ಕಾರಣವಾಗಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕುರಿತು ಇಬ್ಬರ ನಡುವೆ ವಾಕ್ಸಮರ ನಡೆಯುವುದನ್ನು ತಳ್ಳಿ ಹಾಕುವಂತಿಲ್ಲ.
ಹಾವೇರಿಯಲ್ಲಿ ನಡೆದ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಕೆ.ಎಸ್. ಈಶ್ವರಪ್ಪ ಪರೋಕ್ಷವಾಗಿ ಯಡಿಯೂರಪ್ಪ ಅವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು.
ಬಿಜೆಪಿಯ ಯಾವುದೇ ಕಾರ್ಯಕರ್ತರಾಗಲಿ ಅಥವಾ ಪದಾಧಿಕಾರಿಗಳಾಗಲೀ ಸಮಾವೇಶದಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ ಜರುಗಿಸುವುದಾಗಿ ಬಿಎಸ್ ವೈ ಎಚ್ಚರಿಕೆ ಕೊಟ್ಟಿದ್ದು ಈಶ್ವರಪ್ಪ ಅವರ ಕಣ್ಣು ಕೆಂಪಾಗುವಂತೆ ಮಾಡಿತ್ತು.
ಇದೀಗ ಕೋರ್ ಕಮಿಟಿ ಸಭೆಯಲ್ಲಿ ಪದಾಧಿಕಾರಿಗಳ ನೇಮಕಾತಿಯಲ್ಲಿ ಉಂಟಾಗಿರುವ ಅಸಮಾಧಾನ, ಪಕ್ಷ ಸಂಘಟನೆ , ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಹಾಗೂ ಕೇಂದ್ರ ಸರ್ಕಾರದ ಸಾಧನೆಯನ್ನು ಜನರ ಬಳಿಗೆ ಕೊಂಡೊಯ್ಯುವ ಕುರಿತು ಚರ್ಚೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಮೇಲೆ ಎರಡನೆಯ ಕೋರ್ ಕಮಿಟಿ ಸಭೆ ಇದಾಗಿದೆ. ಬಹು ದಿನಗಳ ನಂತರ ಬಿಎಸ್ ವೈ ಮತ್ತು ಈಶ್ವರಪ್ಪ ಮುಖಾಮುಖಿಯಾಗುತ್ತಿರುವುದು ಮತ್ತೇನು ಅವಾಂತರ ನಡೆಯಲಿದೆ ಎಂಬ ಕುತೂಹಲ ಕೆರಳಿಸಿದೆ.
Discussion about this post