Read - < 1 minute
ಉಡುಪಿ, ಸೆ.28: ದೇಶದಲ್ಲಿ ಬಯಲು ಶೌಚ ಮುಕ್ತ ಪ್ರಮಾಣ ಪತ್ರ ಪಡೆದ ನಗರಗಳನ್ನು ಪ್ರತಿ 6 ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಯಲು ಶೌಚ ಪತ್ತೆಯಾದಲ್ಲಿ ಅಂತಹ ಪಟ್ಟಣಗಳಿಗೆ ನೀಡಿದ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗುತ್ತದೆ ಎಂದು ಸ್ವಚ್ಛ ಭಾರತ ಅಭಿಯಾನದ ಬಯಲು ಶೌಚ ಮುಕ್ತ ಯೋಜನೆಯ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಅಭಿನವ್ ಯಾದವ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ನಗರ ಸಭೆಗೆ ಸ್ವಚ್ಚ ಭಾರತ್ ಅಭಿಯಾನದ ಅಂಗವಾಗಿ ಬಯಲು ಶೌಚ ಮುಕ್ತ ನಗರ ಎಂಬ ಪ್ರಮಾಣ ಪತ್ರವನ್ನು ಹಸ್ತಾಂತರಿಸಿ ಅವರು ಇಂದು ಮಾತನಾಡಿದರು.
ರಾಜ್ಯದಲ್ಲಿ ಮೊದಲ 6 ತಿಂಗಳಿಗೆ ಉಡುಪಿ, ಮಂಗಳೂರು ಹಾಗೂ ಮೈಸೂರು ನಗರಗಳನ್ನು ಬಯಲು ಶೌಚ ಮುಕ್ತ ನಗರಗಳೆಂದು ಗುರುತಿಸಲಾಗಿದೆ ಎಂದವರು ಹೇಳಿದರು.
ಸ್ವಚ್ಛ ಭಾರತ್ ಅಭಿಯಾನದಡಿ ಇಡೀ ದೇಶವನ್ನು ಬಯಲು ಶೌಚಮುಕ್ತವಾಗಿ ಮಾಡುವ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಗುಜರಾತನಲ್ಲಿ 11, ಆಂಧ್ರ ಹಾಗೂ ತೆಲಂಗಾಣದಲ್ಲಿ ತಲಾ 7 ನಗರ ಹಾಗೂ ಕರ್ನಾಟಕ 3 ನಗರ ಸೇರಿದಂತೆ ದೇಶದಾದ್ಯಂತ 25 ನಗರಗಳನ್ನು ಬಯಲು ಶೌಚ ಮುಕ್ತ ನಗರವಾಗಿ ಘೋಷಣೆ ಮಾಡಲಾಗಿದೆ ಎಂದರು.
ಕೋರಿಕೆ ಸಲ್ಲಿಸಿದ ನಗರಗಳಿಗಷ್ಟೇ ಪ್ರತಿ ಆರು ತಿಂಗಳಿಗೊಮ್ಮೆ ಸ್ವಚ್ಛ ಭಾರತ್ ಅಭಿಯಾನದ ಅಧಿಕಾರಿಗಳು ಬಂದು, ಪರಿಶೀಲನೆ ನಡೆಸಿ, ಬಯಲು ಶೌಚ ಮುಕ್ತವಾಗಿದೆ ಎಂಬುದು ದೃಢವಾದ ನಂತರ ಪ್ರಮಾಣ ಪತ್ರ ನೀಡಲಾಗುತ್ತದೆ. ಅದರೇ ದೇಶದ ಅನೇಕ ನಗರಗಳು ಈ ಕೋರಿಕೆಯನ್ನೇ ಸಲ್ಲಿಸುತ್ತಿಲ್ಲ. 6 ತಿಂಗಳ ನಂತರ ಪುನರ್ ಕೋರಿಕೆ ಸಲ್ಲಿಸಬೇಕು. ಆಗ ಮತ್ತೆ ಪರಿಶೀಲನೆ ನಡೆಸುತ್ತೇವೆ. ಬಯಲು ಶೌಚಾಲಯ ಇರುವುದು ದೃಢಪಟ್ಟರೆ ಪ್ರಮಾಣ ಪತ್ರವನ್ನು ರದ್ದು ಮಾಡುತ್ತೇವೆ. ಇದೊಂದು ನಿರಂತರ ಹಾಗೂ ಸಹಜ ಪ್ರಕ್ರಿಯೆಯಾಗಿ ಮುಂದುವರಿಯಬೇಕೆಂಬುದೆ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು.
ಬಯಲು ಶೌಚ ಮುಕ್ತ ಉಡುಪಿ ನಿರ್ಮಾಣದಲ್ಲಿ ವಿದ್ಯಾರ್ಥಿಗಳು, ನಾಗರಿಕರು, ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಜಿಪಿಎಸ್ ವಿಧಾನ ಮೂಲಕ ಪರಿಶೀಲನೆ ನಡೆಸುತ್ತಿರುತ್ತೇವೆ ಎಂದವರು ಹೇಳಿದರು.
ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು, ಮಲವನ್ನು ತಲೆಯ ಮೇಲೆ ಹೊರುವ ಪದ್ಧತಿಯನ್ನು ಮೊದಲು ಉಡುಪಿಯಲ್ಲಿ ನಿಷೇಧ ಮಾಡಿದ್ದು, ಈಗ ಬಯಲು ಶೌಚ ಮುಕ್ತ ನಗರವಾಗಿ ಘೋಷಣೆಯಾಗಿದೆ. 65 ಕುಟುಂಬಕ್ಕೆ ಶೌಚಾಲಯ ಹಾಗೂ 101 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನೂ 50 ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ. 2017ರಲ್ಲಿ 500 ನಗರ – ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತ ಪಟ್ಟಿಗೆ ಸೇರಲಿದ್ದು, ಅವುಗಳಲ್ಲಿ ಉಡುಪಿ ಮೊದಲ ಸ್ಥಾನ ಪಡೆಯುವುದಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.
ನಗರಸಭೆಯ ಪೌರಾಯುಕ್ತ ಮುಂಜುನಾಥಯ್ಯ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಶೇ. 99.99ರಷ್ಟು ಮನೆಗಳಲ್ಲಿ ಶೌಚಾಲಯಗಳಿವೆ ಎಂದು ಹೇಳಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಭಟ್, ಪರಿಸರ ಅಭಿಯಂತರ ರಾಘವೇಂದ್ರ, ನಗರಸಭೆ ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರಾದ ಅಮೃತ ಕೃಷ್ಣಮೂರ್ತಿ, ಪಿ.ಯುವರಾಜ್, ಜನಾರ್ದನ್ ಭಂಡಾರಕರ್, ಶಶಿರಾಜ್ ಕುಂದರ್, ಶ್ಯಾಮ್ ಪ್ರಸಾದ್ ಕುಡ್ವ, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಮೊದಲಾದವರು ಉಪಸ್ಥಿತರಿದ್ದರು.
Discussion about this post