Read - < 1 minute
ಮಡಿಕೇರಿ, ಅ.18: ವಿಶ್ವಕರ್ಮ ಸಮಾಜದ ಬಡ ವಿದ್ಯಾರ್ಥಿಗಳಿಗೆ ಶ್ರೀವಿಶ್ವಕರ್ಮ ಸಮುದಾಯ ಜಾಗೃತಾ ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಲಾಗುವುದೆಂದು ಟ್ರಸ್ಟ್ ನ ಅಧ್ಯಕ್ಷ ಹರೀಶ್ ಜಿ. ಆಚಾರ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವಕರ್ಮ ಸಮಾಜದ ಹಲವು ಕುಟುಂಬಗಳು ಬಡತನದಲ್ಲಿ ಜೀವನ ಸಾಗಿಸುತ್ತಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿನ್ನಾಭರಣಗಳ ಕೆಲಸ, ಕಾರ್ಯಗಳನ್ನು ಯಂತ್ರದ ಮೂಲಕವೇ ಮಾಡಲಾಗುತ್ತಿದ್ದು, ಮೂಲ ವೃತ್ತಿಯೂ ಕೈತಪ್ಪಿ ಹೋಗಿ ಅನೇಕರು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಇದೇ ಕಾರಣದಿಂದ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆ ಕೂಡ ವ್ಯಾಪಾರೀಕರಣಗೊಂಡಿರುವುದರಿಂದ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗದಿಂದ ವಂಚಿತರಾಗುತ್ತಿದ್ದಾರೆ. ದೇಶದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ, ವಿನಾಯಿತಿಗಳು ದೊರೆಯುತ್ತಿದೆ. ಈ ಪದ್ಧತಿಯಿಂದ ನೈಜ ಬಡವರು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹರೀಶ್ ಜಿ. ಆಚಾರ್ಯ ಆರೋಪಿಸಿದ್ದಾರೆ.
ಬಡವರು ಮತ್ತು ಶ್ರೀಮಂತರು ಎಂಬ ಎರಡು ವರ್ಗಗಳನ್ನು ಮಾತ್ರ ಪರಿಗಣಿಸಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದ ವಿನಾಯಿತಿ ಅಥವಾ ಮೀಸಲಾತಿ ಸೌಲಭ್ಯಗಳನ್ನು ನೀಡಿದಲ್ಲಿ ನೈಜ ಫಲಾನುಭವಿಗಳಿಗೆ ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು ದೇಶದಲ್ಲಿ ಏಕ ರೂಪದ ಶಿಕ್ಷಣ ಪದ್ಧತಿ ಜಾರಿಯಾಗಬೇಕೆಂದು ಒತ್ತಾಯಿಸಿದರು.
ವಿಶ್ವಕರ್ಮ ಸಮುದಾಯದ ಬಡ ಮಕ್ಕಳ ಶಿಕ್ಷಣಕ್ಕಾಗಿ ಟ್ರಸ್ಟ್ ಮೂಲಕ ಆರ್ಥಿಕ ನೆರವು ನೀಡಲು ಯೋಜನೆಯನ್ನು ರೂಪಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿರುವ ಕನ್ನಡ, ತುಳು, ಕೊಡವ, ಮಲಯಾಳಿ, ತಮಿಳು, ತೆಲುಗು ಇನ್ನಿತರ ಭಾಷೆಗಳನ್ನಾಡುವ ವಿಶ್ವಕರ್ಮ ಸಮುದಾಯದ 1 ನೇ ತರಗತಿಯಿಂದ 10 ನೇ ತರಗತಿವರೆಗಿನ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳು ತಾವು ವ್ಯಾಸಾಂಗ ಮಾಡುತ್ತಿರುವ ಶಾಲೆ ಹಾಗೂ ತಮ್ಮ ಪೋಷಕರ ವಿವರದೊಂದಿಗೆ ಅರ್ಜಿಗಳನ್ನು ಟ್ರಸ್ಟ್ ಗೆ ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು. 2016 ರ ನವಂಬರ್ 26 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ವ್ಯಾಸಾಂಗದ ವಾರ್ಷಿಕ ಶುಲ್ಕವನ್ನು ಅರ್ಹತೆಯ ಆಧಾರದಲ್ಲಿ ಪಾವತಿಸಲು ಟ್ರಸ್ಟ್ ನಿರ್ಧರಿಸಿದೆ. ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವುದಕ್ಕಾಗಿ ಟ್ರಸ್ಟ್ ಯಾರ ಮೇಲೂ ಒತ್ತಡ ಹೇರಿ ಹಣ ಸಂಗ್ರಹಿಸುವುದಿಲ್ಲವೆಂದು ಹರೀಶ್ ಜಿ. ಆಚಾರ್ಯ ಇದೇ ಸಂದರ್ಭ ಸ್ಪಷ್ಟಪಡಿಸಿದರು. ಲಕ್ಕಿಡಿಪ್ ಯೋಜನೆಯ ಮೂಲಕ ಧನ ಸಂಗ್ರಹಿಸಿ ಬಡ ವಿದ್ಯಾಥರ್ಿಗಳಿಗೆ ಆರ್ಥಿಕ ನೆರವನ್ನು ನೀಡಲಾಗುವುದು ಎಂದರು.
ದಾನಿಗಳು ಬಡ ವಿದ್ಯಾರ್ಥಿಗಳಿಗಾಗಿ ಸ್ವ ಇಚ್ಛೆಯಿಂದ ದೇಣಿಗೆ ನೀಡಿದರೆ ಪಡೆಯಲಾಗುವುದು ಎಂದು ತಿಳಿಸಿದ ಅವರು ಶಿಕ್ಷಣದಿಂದ ಒಬ್ಬ ವ್ಯಕ್ತಿಯ ಅಭ್ಯುದಯ, ಶಿಕ್ಷಿತ ವ್ಯಕ್ತಿಯಿಂದ ದೇಶದ ಅಭಿವೃದ್ಧಿ ಎನ್ನುವಂತೆ ಪ್ರತಿಯೊಂದು ಜನಾಂಗದ ಬಡ ವಿದ್ಯಾರ್ಥಿಗಳು ವಿದ್ಯಾವಂತರಾಗುವ ಮೂಲಕ ದೇಶದ ಸತ್ಪ್ರಜೆಗಳಾಗಬೇಕೆನ್ನುವುದು ಉದ್ದೇಶವನ್ನು ಟ್ರಸ್ಟ್ ಹೊಂದಿದೆ ಎಂದರು. ಸರಕಾರ ನೀಡುವ ಎಲ್ಲಾ ಮೂಲಭೂತ ಸೌಲಭ್ಯಗಳಿಗಿಂದ ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು, ಈ ಬಗ್ಗೆ ಸರಕಾರಗಳು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಹರೀಶ್ ಆಚಾರ್ಯ ತಿಳಿಸಿದರು.
ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಮೊ. 94497 60402, 78992 60138 ನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಟಿಯಲ್ಲಿ ಸಂಘಟನಾ ಕಾರ್ಯದರ್ಶಿ ಗಣೇಶ್ ಆಚಾರ್ಯ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಎ.ಬಿ.ಮುರಳಿಧರ್ ಹಾಗೂ ಕಾರ್ಯದರ್ಶಿ ಚಂದನ್ ಆಚಾರ್ಯ ಉಪಸ್ಥಿತರಿದ್ದರು.
—>
News by: ಇಂದ್ರೇಶ್, ಮಡಿಕೇರಿ
—>
Discussion about this post