ಬೆಂಗಳೂರು: ಸೆ:22; ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರನ್ನು ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ಸಚಿವೆ ಉಮಾಭಾರತಿ ಅವರನ್ನು ಭೇಟಿ ಮಾಡಿ, ರಾಜ್ಯದ ಸ್ಥಿತಿಗತಿ ಕುರಿತು ಮನವರಿಕೆ ಮಾಡಿದ್ದಲ್ಲದೇ, ಮಳೆ ಇಲ್ಲದೇ ಜಲಾಶಯಗಳು ಬರುಡಾಗಿದ್ದು, ಕುಡಿಯುವ ನೀರಿಗೂ ತತ್ವಾರ ಎದುರಾಗಿದ್ದು, ಕಾವೇರಿ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದರು.
ಅಲ್ಲದೇ ಕಾವೇರಿ ನಿರ್ವಹಣ ಮಂಡಳಿ ರಚನೆಯಿಂದ ರಾಜ್ಯಕ್ಕೆ ಹೆಚ್ಚು ಅನಾನುಕೂಲವಾಗಲಿದ್ದು, ಸುಪ್ರೀಂಕೋರ್ಟ್ ಆಕ್ಷೇಪಣೆ ಸಲ್ಲಿಸಬೇಕೆಂದು ಕೋರಿದರು.
ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಸಚಿವೆ ಉಮಾಭಾರತಿ ಭರವಸೆ ನೀಡಿದ್ದಾರೆ.
ಈ ಮುನ್ನ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಅವರು, ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಪ್ರಧಾನಮಂತ್ರಿ ಅವರ ಭೇಟಿಗೂ ಸಮಯ ಕೇಳಲಾಗಿದ್ದು, ಈವರೆಗೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿಲ್ಲ. ಉಮಾಭಾರತಿ ಅವರು ಸಿದ್ದರಾಮಯ್ಯ ಅವರ ಭೇಟಿಗೆ ಸಮಯ ನೀಡಿದ್ದಾರೆ ಎಂದು ಹೇಳಲಾಗಿದೆ.
ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧ:
ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ಸೆ.20ರಂದು ನೀಡಿರುವ ಆದೇಶವನ್ನು ಪಾಲಿಸಬಾರದು ಎಂದು ಮುಖ್ಯಮಂತ್ರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕವಾಗಲಿ ಅಥವಾ ತಮಿಳುನಾಡಾಗಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಮನವಿ ಮಾಡಿಲ್ಲ. ಏಕಾಏಕಿ ಸುಪ್ರೀಂಕೋರ್ಟ್ ನ್ಯಾಯಾಂಗ ವ್ಯಾಪ್ತಿ ಮೀರಿ ಈ ಆದೇಶ ನೀಡಿದೆ. ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಕುರಿತು ತಗಾದೆ ಇದ್ದು, ಅದನ್ನು ವಿಶೇಷ ಮೇಲ್ಮನವಿಯ ಮೂಲಕ ಸುಪ್ರೀಂಕೋರ್ಟನಲ್ಲಿ ಪ್ರಶ್ನಿಸಲಾಗಿದ್ದು, ಇದುರೆಗೂ ಇತ್ಯರ್ಥವಾಗಿಲ್ಲ. ಅ.18ರಂದು ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ. ಅಲ್ಲಿ ತೀರ್ಪು ಬರುವ ಮುನ್ನವೇ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಮೂರ್ತಿಗಳಾದ ಉದಯ್ಲಲಿತ್ ಮತ್ತು ದೀಪಕ್ಮಿಶ್ರಾ ಅವರ ಪೀಠ ನೀರು ನಿರ್ವಹಣಾ ಮಂಡಳಿ ರಚನೆಗೆ ಆದೇಶ ನೀಡಿರುವುದು ಸರಿಯಲ್ಲ.
ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಮಂಡಳಿ ರಚನೆಗೆ ಮುಂದಾಗಬಾರದು ಎಂದು ಉಮಾ ಭಾರತಿ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Discussion about this post