Read - 2 minutes
ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ರಾಜಿನಾಮೆ ವಿಚಾರ ರಾಜ್ಯ ಕಾಂಗ್ರೆಸ್‌ನಲ್ಲಿ ಸಣ್ಣಮಟ್ಟಿನ ತಲ್ಲಣವನ್ನುಂಟು ಮಾಡಿದೆ. ದಲಿತ ನಾಯಕ, ಪ್ರಾಮಾಣಿಕ, ಸಜ್ಜನ, ಸಚ್ಚಾರಿತ್ರ್ಯ ಹೊಂದಿದ ರಾಜಕಾರಣಿ ಎಂದೆಲ್ಲ ಹೆಸರುಗಳಿಸಿದ್ದರು. ರಾಜಿನಾಮೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವರು ತೊಡೆತಟ್ಟಿದ್ದಾರೆ. ಈ ಮೂಲಕ ತಮ್ಮ ರಾಜಿನಾಮೆಗೆ ಕಾರಣವಾದ ಸೇಡನ್ನು ತೀರಿಸಿಕೊಳ್ಳುವ ಸೂಚನೆ ನೀಡಿದ್ದಾರೆ.
ಮೇಲ್ನೋಟಕ್ಕೆ ಪ್ರಸಾದ್ ರಾಜಿನಾಮೆಗೆ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದು ಕಾರಣ ಎನ್ನುವುದು ಕಂಡುಬರುತ್ತದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ, ಕಂದಾಯ ಸಚಿವರಾಗಿದ್ದ ಅವರು ಅನಾರೋಗ್ಯದಿಂದ ಸಮರ್ಥವಾಗಿ ಇಲಾಖೆ ನಿಭಾಯಿಸಲಿಲ್ಲ ಎನ್ನುವುದು ಜನಜನಿತ. ಅದರಲ್ಲೂ ಕಂದಾಯದಂತಹ ಪ್ರಮುಖ ಖಾತೆಯನ್ನಿಟ್ಟುಕೊಂಡು ಬರಗಾಲದಂತಹ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿ ಅಧಿಕಾರಿಗಳನ್ನು ಎಚ್ಚರಿಸದಿದ್ದರೆ ರೈತರ ಸ್ಥಿತಿ ಇನ್ನಷ್ಟು ಕಷ್ಟಕ್ಕೆ ಸಿಲುಕುತ್ತದೆ ಎನ್ನುವುದೂ ಕಾರಣವಾಗಿರಬಹುದು.
ಪ್ರಸಾದ್ ಎಷ್ಟೇ ಉತ್ತಮ ಮನುಷ್ಯರಗಿದ್ದರೂ ಸದ್ಯದ ಅವರ ನಡವಳಿಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಬಿ.ಎಸ್ ಯಡಿಯೂರಪ್ಪ ಅವರನ್ನು ನೆನಪಿಸುತ್ತದೆ. ಬಂಗಾರಪ್ಪ ಕಾಂಗ್ರೆಸ್‌ನಿಂದ ಹೊರಬರುವಾಗ ರಾಜೀವ್ ಗಾಂಧಿ, ಪಿ.ವಿ. ನರಸಿಂಹರಾವ್, ರಾಜ್ಯದ ನಾಯಕರನ್ನು ವಾಚಾಮಗೋಚರವಾಗಿ ಬಯ್ಯುತ್ತ ಹೊರಬಂದಿದ್ದರು. ಅದೆ ರೀತಿ ಬಿಜೆಪಿ ಸೇರಿ ಅಲ್ಲಿಂದ ಹೊರಬರುವಾಗಲೂ ಅವರು ಬಿಜೆಪಿ ನಾಯಕರನ್ನು ಬೈದಿದ್ದೇ ಬೈದಿದ್ದು. ಕಾಂಗ್ರೆಸ್‌ನ್ನು ನಿರ್ನಾಮ ಮಾಡುತ್ತೇನೆಂದು ಪಣತೊಟ್ಟಿದ್ದರು. ಅವರ ನಿರ್ಗಮನದಿಂದ ಕಾಂಗ್ರೆಸ್‌ಗೆ ಒಂದಷ್ಟು ಹಾನಿ ಸಂಭವಿಸಿತಾದರೂ ಪಕ್ಷವೇನೂ ನಿರ್ನಾಮವಾಗಲಿಲ್ಲ. ಅದೇ ರೀತಿ ಬಿಜೆಪಿಗೂ ಹೇಳಿದ್ದರು. ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೂ ಬಿಜೆಪಿ ಸೋಲಿಸುವುದೇ ತನ್ನ ಗುರಿ ಎಂದು ತೊಡೆ ತಟ್ಟಿದ್ದರು. ರಾಜ್ಯದಾದ್ಯಂತ ಬಂಗಾರಪ್ಪ ಅವರಂತೆ ಪ್ರವಾಸ ಮಾಡಿ ಪ್ರಚಾರ ಮಾಡಿದ್ದರು. ಅಲ್ಲಿ ಅವರೂ ವಿಫಲರಾದರು, ಬಿಜೆಪಿಯನ್ನೂ ಸೋಲಿಸಿದರು.
ಇವರಂತೆ ರಾಜ್ಯದಲ್ಲಿ ಬೇರೆ ಬೇರೆ ಪಕ್ಷದ ಇನ್ನೂ ಹಲವು ನಾಯಕರು ಇದೇ ರೀತಿ ಆರ್ಭಟಿಸಿ, ಗುಡುಗಿ, ನಂತರ ಹೇಳಹೆಸರಿಲ್ಲದಂತಾಗಿದ್ದಾರೆ. ಇದೆಲ್ಲ ರಾಜ್ಯದ ಮತದಾರರಿಗೆ ಗೊತ್ತಿರುವ ವಿಚಾರ. ಸದ್ಯ ಪ್ರಸಾದ್ ಈ ಮೇಲಿನ ಇಬ್ಬರು ನಾಯಕರಷ್ಟು ಜನಪ್ರಿಯರಲ್ಲದಿದ್ದರೂ, ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿರುವುದು ಅವರು ಅಧಿಕಾರದ ಖುರ್ಚಿ ಕಳಕೊಂಡ ನಿರಾಸೆ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ಬಗ್ಗೆ ಹತಾಶೆಯಲ್ಲಿದ್ದಂತೆ ತೋರುತ್ತದೆ.
ಸಾಂಸದರಾಗಿ, ಕೇಂದ್ರ ಸಚಿವರಾಗಿ, ಮೂರ್ನಾಲ್ಕು ಬಾರಿ ಪಕ್ಷಾಂತರ ಮಾಡಿಯೂ ಮತ್ತೆ ಕಾಂಗ್ರೆಸ್ ಸೇರಿದಾಗ ಅವರಿಗೆ ನಂಜನಗೂಡು ಮೀಸಲು ಕ್ಷೇತ್ರದಿಂದ ಟಿಕೆಟ್ ಕೊಡಲಾಗಿತ್ತು. ಅಲ್ಲಿ ಗೆದ್ದು ಬಂದು ದಲಿತ ಕೋಟಾದಲ್ಲಿ ಸಚಿವರೂ ಆದರು. ಕೈಕೊಟ್ಟ ಆರೋಗ್ಯ ಅವರು ಉತ್ತಮ ಕೆಲಸ ಮಾಡಲು ಬಿಡಲಿಲ್ಲ. ಆ ಕಾರಣದಿಂದ ಅಧಿಕಾರ ಕಳಕೊಂಡರೆಂದೇ ವಿಶ್ಲೇಷಿಸಲಾಗುತ್ತಿದೆ. ಪ್ರಸಾದ್ ಅವರಂತಹ ವ್ಯಕ್ತಿ ಈಗ ಈ ರೀತಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ನ ಕೆಲವು ನಾಯಕರ, ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವದನ್ನು ಗಮನಿಸಿದಾಗ ಅಧಿಕಾರದ ಚಟ ಎಂತಹವರನ್ನೂ ಬಿಡುವುದಿಲ್ಲ ಎನ್ನುವುದಕ್ಕೆ ಮತ್ತೆ ಸಾಕ್ಷಿಯಾಗುತ್ತಿದೆ. ಉತ್ತಮ ಕೆಲಸ ಮಾಡುತ್ತಿದ್ದ ವೇಳೆ ಕೈ ಬಿಟ್ಟಿದ್ದರೆ ಪ್ರಸಾದ್ ಅವರ ಮಾತನ್ನು ಒಪ್ಪಬಹುದಿತ್ತು. ಆದರೆ ಈಗ ಆಡುತ್ತಿರುವ ಅವರ ಮಾತು ಭ್ರಮನಿರಸನದ ಪ್ರತೀಕವಾಗಿದೆ.
ಸಾಯುವವರೆಗೆ ರಾಜಕಾರಣ ಮಾಡಬೇಕೆನ್ನುವುದೇ ರಾಜಕಾರಣಿಗಳ ಹಠ. ಮಧ್ಯದಲ್ಲಿ ಆರೋಗ್ಯ ಕೆಟ್ಟರೂ ತಾನೇ ಅಧಿಕಾರದಲ್ಲಿ ಇರಬೇಕು. ರಾಜಿನಾಮೆ ಕೊಡಬಾರದು, ಖುರ್ಚಿಗೆ ಅಂಟಿಕೊಂಡೇ ಇರಬೇಕೆಂಬ ನಿಲುವು ವಿಚಿತ್ರವಾಗಿ ಕಾಣುತ್ತಿದೆ. ಸದ್ಯ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಆಸ್ಪತ್ರೆಯ ಐಸಿಯುನಲ್ಲಿ ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಅಧಿಕಾರದ ಚುಕ್ಕಾಣಿ ಬಿಟ್ಟುಕೊಡದಿರುವುದನ್ನು ಇಲ್ಲಿ ಗಮನಿಸಬಹುದು.
ಪ್ರಸ್ತುತ ಪ್ರಸಾದ್ ತಮ್ಮ ಅಧಿಕಾರದ ದುರಾಸೆಯಿಂದ ಈವರೆಗೆ ತಾನು ಸಂಪಾದಿಸಿದ್ದ ಹೆಸರಿಗೆ ಕಳಂಕ ತಂದುಕೊಳ್ಳುತ್ತಿದ್ದಾರೆ. ಅವರು ಮತ್ತೆ ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಬಹುದು, ಇನ್ನಾವುದೇ ಪಕ್ಷ ಸೇರಬಹುದು. ಆದರೆ ಅವರ ಮಾತುಗಳು ಸಜ್ಜನ ರಾಜಕಾರಣಿ ಎನ್ನುವ ಅವರ ಇಲ್ಲಿಯವರೆಗಿನ ಗೌರವಕ್ಕೆ ಚ್ಯುತಿ ತಂದಿದ್ದಂತೂ ನಿಶ್ಚಿತ. ಅವರ ರಾಜಿನಾಮೆಯಿಂದಾಗುವ ನಷ್ಟದ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿರಬಹುದು. ಇದೇ ವೇಳೆ ಇತರೇ ಪ್ರತಿಪಕ್ಷಗಳು ಅವರ ಸೇರ್ಪಡೆ ಮಾಡಿಕೊಂಡು ಲಾಭ ಪಡೆಯಲು ಹವಣಿಸುತ್ತಿರಲೂ ಇರಬಹುದು. ಏನಿದ್ದರೂ ಪ್ರಸಾದ್ ಅವರಿಂದ ಮೈಸೂರು ಜಿಲ್ಲೆಯಲ್ಲಿ ಒಂದಷ್ಟು ಲಾಭ, ಹಾನಿ ಆಗಬಹುದೇ ವಿನಾ ಇತರೆ ಜಿಲ್ಲೆಗಂತೂ ಅದರ ಪರಿಣಾಮ ತಟ್ಟುವುದಿಲ್ಲ.
ಸಜ್ಜನ ಎನ್ನುವುದನ್ನು ಬಿಟ್ಟರೆ ದಲಿತರ ಸಂಘಟನೆಯನ್ನು, ಉದ್ಧಾರವನ್ನು, ಸರ್ಕಾರಿ ಯೋಜನೆಗಳ ಲಾಭವನ್ನು ರಾಜ್ಯದ ಎಲ್ಲೆಡೆ ದಲಿತರಿಗೆ ಸಿಗುವಂತೆ ಮಾಡುವಲ್ಲಿ ಅವರ ಪಾತ್ರ ಎಲ್ಲೂ ಕಂಡುಬರುತ್ತಿಲ್ಲ. ಏಕೆಂದರೆ ರಾಜ್ಯನಾಯಕನಾಗಿ ಅವರು ಮಿಂಚಲೇ ಇಲ್ಲ.
ಪ್ರಸ್ತುತ ಪ್ರಸಾದ್ ತಮ್ಮ ಅಧಿಕಾರದ ದುರಾಸೆಯಿಂದ ಈವರೆಗೆ ತಾನು ಸಂಪಾದಿಸಿದ್ದ ಹೆಸರಿಗೆ ಕಳಂಕ ತಂದುಕೊಳ್ಳುತ್ತಿದ್ದಾರೆ. ಅವರು ಮತ್ತೆ ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಬಹುದು, ಇನ್ನಾವುದೇ ಪಕ್ಷ ಸೇರಬಹುದು. ಆದರೆ ಅವರ ಮಾತುಗಳು ಸಜ್ಜನ ರಾಜಕಾರಣಿ ಎನ್ನುವ ಅವರ ಇಲ್ಲಿಯವರೆಗಿನ ಗೌರವಕ್ಕೆ ಚ್ಯುತಿ ತಂದಿದ್ದಂತೂ ನಿಶ್ಚಿತ. ಅವರ ರಾಜಿನಾಮೆಯಿಂದಾಗುವ ನಷ್ಟದ ಬಗ್ಗೆ ಕಾಂಗ್ರೆಸ್ ಚಿಂತಿಸುತ್ತಿರಬಹುದು. ಇದೇ ವೇಳೆ ಇತರೇ ಪ್ರತಿಪಕ್ಷಗಳು ಅವರ ಸೇರ್ಪಡೆ ಮಾಡಿಕೊಂಡು ಲಾಭ ಪಡೆಯಲು ಹವಣಿಸುತ್ತಿರಲೂ ಇರಬಹುದು. ಏನಿದ್ದರೂ ಪ್ರಸಾದ್ ಅವರಿಂದ ಮೈಸೂರು ಜಿಲ್ಲೆಯಷಲ್ಲಿ ಒಂದಷ್ಟು ಲಾಭ, ಹಾನಿ ಆಗಬಹುದೇ ವಿನಾ ಇತರೆ ಜಿಲ್ಲೆಗಂತೂ ಅದರ ಪರಿಣಾಮ ತಟ್ಟುವುದಿಲ್ಲ.
Discussion about this post