ಸಾಮಾನ್ಯವಾಗಿ ಸರಕಾರಿ ಶಾಲೆಗಳನ್ನು ಮುಚ್ಚುವ ಸುದ್ಧಿ ಬಂದಾಗ ಕನ್ನಡ ಮಾಧ್ಯಮದ ಬಗ್ಗೆ ಇರುವ ಸಾರ್ವಜನಿಕ ಅಸಮಾಧಾನವೇ ಮಕ್ಕಳ ಕೊರತೆಗೆ ಕಾರಣವೆನ್ನಲಾಗುತ್ತದೆ.ಇದನ್ನೇ ಕೆಲವರು ಇಂಗ್ಲಿಷ್ ಮಾಧ್ಯಮದ ಪ್ರೀತಿ ಎಂದೂ ಹೇಳುತ್ತಾರೆ. ಆದರೆ ಈ ಬಗ್ಗೆ ಒಂದಿಷ್ಟು ಆಳಕ್ಕಿಳಿದರೆ ಇನ್ನೂ ಹೆಚ್ಚಿನ ಕಾರಣ ಗೋಚರಿಸುತ್ತದೆ.
ನನ್ನ ಮಗಳಿಗೆ ಶಾಲೆ ಬೇಸರ ತಂದಿದೆ. ಕನ್ನಡ ಮಾಧ್ಯಮವೇ ಬೇಕೆಂದು ಹತ್ತಿರದ ಸರಕಾರಿ ಶಾಲೆಗೆ ಸೇರಿಸಿದೆ. ಆದರೆ ಅವಳಿಗೆ ಅಲ್ಲಿ ಸಾಕಾಗಿದೆ ಇದು ಸುಶಿಕ್ಷಿತತಾಯಿಯೊಬ್ಬಳ ಅಳಲು.
ಏನಾಗಿದೆ? ಎಂಬ ಪ್ರಶ್ನೆಗೆ ಆಕೆಯಿಂದ ಬಂದ ಉತ್ತರ ದಂಗು ಬಡಿಸುವಂತಹದ್ದು. ನಾವೆಲ್ಲರೂ ಗೊತ್ತಿದ್ದು ಗಮನ ಹರಿಸದಿರುವಂತಹದ್ದು. ಆಕೆ ಹೇಳಿದಳು,
ನನ್ನ ಮಗಳಿಗೆ ಸಾವಿರದವರೆಗೂ ಅಂಕೆಗಳು ತಿಳಿದಿವೆ. ಏಕ – ದಶಕ ಸ್ಥಾನ ಗಮನಿಸಿ ಸಂಕಲನ – ವ್ಯವಕಲನ ಮಾಡಬಲ್ಲಳು. ಆದರೆ ಶಾಲೆಯಲ್ಲಿ ಆಕೆಯನ್ನು 19 ರೊಳಗೆಹೊರಳಿಸುತ್ತಿದ್ದಾರೆ. ಅದು ಅವಳಿಗೆ ಬೇಸರ ಉಂಟು ಮಾಡಿದೆ.
ಏನಿದು 19 ರೊಳಗೆ ಹೊರಳಿಸುವಂತಹುದು?
ಒಂದನೇ ತರಗತಿಯ ಗಣಿತ ತೆರೆದು ನೋಡಿ, ಆಗ ತಿಳಿಯುತ್ತದೆ. ಅದರಲ್ಲಿ ಆರಂಭದಿಂದ ಕೊನೆಯತನಕ ನೋಡಿದರೂ ಅಂಕೆಗಳು 19 ದಾಟುವುದಿಲ್ಲ.
ಶಿಕ್ಷಕಿಯನ್ನು ಕೇಳಿದರೆ ಹೇಳುತ್ತಾರೆ – ಸರ್, ಸಿಲೆಬಸ್ ಇರುವುದೇ ಅಷ್ಟು ನಾವು ಅಷ್ಟೇ ಕಲಿಸಬೇಕಾದ್ದು.
ಆದರೆ ಹೆಚ್ಚು ಗೊತ್ತಿರುವ ಮಕ್ಕಳ ಬಗ್ಗೆ ಏನು ಮಾಡುತ್ತೀರಿ?
ಅದು ಅವರಿಗೆ ಮನೆಯಲ್ಲಿ ಕಲಿಸುವುದರಿಂದ ಗೊತ್ತಿರುತ್ತದೆ. ಅದಕ್ಕೆ ನಾವು ಏನೂ ಮಾಡುವಂತಿಲ್ಲ ಸರ್, ನಾವು ಅವರ ಕಡೆ ಗಮನ ಕೊಟ್ಟರೆ ಮನೆಯಲ್ಲಿ ಕಲಿಸುವವರಿಲ್ಲದ ಮಕ್ಕಳನ್ನೂನೋಡಿಕೊಳ್ಳಬೇಕಲ್ಲಾ?
ಅದು ಸರಿ, ಆದರೆ ಆ ಮಕ್ಕಳಿಗೂ ನೀವು ಕಲಿಸಿದರೆ ಸಾವಿರದ ತನಕ ಬರಬಹುದಲ್ಲಾ?
ಬರಬಹುದು. ಆದರೆ ನಾವು ಹೇಗೆ ಕಲಿಸುವುದು? ಪಠ್ಯವನ್ನು ಮಿರುವುದು ಹೇಗೆ?
ಹೌದು ಪಠ್ಯವನ್ನು ಮೀರುವುದು ಹೇಗೆಂಬುದೇ ಪ್ರಶ್ನೆ.
ಆದರೆ ನಿಮಗಾದರೂ ವರ್ಷವಿಡೀ ಕಲಿಸಿದ್ದನ್ನೇ ಕಲಿಸಿ ಸಾಕಾಗಿ ಹೋಗುವುದಿಲ್ಲವೇ?
ಆಗ್ತದೆ ಸರ್. ನಮ್ಮಲ್ಲಿ ಶಿಕ್ಷಕರದ್ದೂ ಕೊರತೆ ಇರುವುದರಿಂದ ನಾವು ದೊಡ್ಡ ತರಗತಿಗಳ ಪಾಠ ಮಾಡ್ತೇವೆ. ಒಂದನೇಯವರನ್ನು ಹಾಗೇ ಬಿಡ್ತೇವೆ.
ಈಗ ಸಿಕ್ಕಿತು ಉತ್ತರ- ಸರಕಾರಿ ಶಾಲೆ ಯಾಕೆ ಬೇಡವೆಂದು. ಒಂದನೇ ತರಗತಿಯವರನ್ನು ಹಾಗೇ ಬಿಟ್ಟರೆ ಆ ಮಕ್ಕಳಿಗಾದರೂ ಹೇಗಾಗಬೇಡ? ಶಾಲೆ ಬೇಡವಾಗದಿದ್ದೀತೆ? ಕಡಿಮೆಶಿಕ್ಷಕಿಯರಿರುವ ಬೇರೆ ಸರಕಾರಿ ಶಾಲೆಗಳಲ್ಲಿಯೂ ಈ ಶಾಲೆಯ ಚಿತ್ರಣವೇ ಸ್ವಲ್ಪ ಭಿನ್ನವಾಗಿ ಸಿಗಬಹುದು. ಅಂತೂ ಸರಕಾರಿ ಶಾಲೆ ಬೇಡವೆನ್ನಿಸುವುದಕ್ಕೆ ಪಠ್ಯ ಕ್ರಮದ ವೈಫಲ್ಯವೂಮಕ್ಕಳೊಂದಿಗೆ ಸಂವನಕ್ಕೆ ಅಗತ್ಯವಿರುವಷ್ಟು ಶಿಕ್ಷಕಿಯರಿಲ್ಲದಿರುವುದೂ ಕಾರಣವಲ್ಲವೇ? ಹೀಗಾದಾಗ ಪ್ರತಿಯೊಂದು ತರಗತಿಗೂ ಒಬ್ಬೊಬ್ಬ ಶಿಕ್ಷಕಿಯನ್ನು ನೇಮಿಸಿ ವಿದ್ಯಾರ್ಥಿಗಳಿಗೆಹೊರೆಯೆನಿಸುವಷ್ಟು ಪಠ್ಯವನ್ನೂ ಮನೆಗೆಲಸವನ್ನೂ ತುಂಬುವ ಆಂಗ್ಲಮಾಧ್ಯಮ ಶಾಲೆಗಳ ಕಡೆಗೆ ಆಕರ್ಷಣೆ ಮೂಡದಿದ್ದೀತೆ?
ಈ ಸಮಸ್ಯೆಯ ಕಡೆಗೆ ಒಂದಿಷ್ಟು ಲಕ್ಷ್ಯ ನೀಡೋಣ. ನಾನಿಲ್ಲಿ ಗಣಿತವನ್ನು ಮತ್ತು ಇಂಗ್ಲಿಷ್ ನಷ್ಟೇ ಚರ್ಚೆಗೆ ಎತ್ತಿಕೊಳ್ಳುತ್ತೇನೆ. ಒಂದನೇಯಲ್ಲಿ 19ರ ತನಕ, 2ನೇಯಲ್ಲಿ 99ರ ತನಕ,ಮೂರನೇಯಲ್ಲಿ 999ರ ತನಕ ನಾಲ್ಕನೇಯಲ್ಲಿ 9999ರ ತನಕ ಮಾತ್ರ ಸಂಕಲನ, ವ್ಯವಕಲನ ಗುಣಾಕಾರ, ಭಾಗಾಕಾರ ಲೆಕ್ಕಗಳನ್ನು ಮಾಡಬೇಕೆಂಬ ನಿಗದಿ ಇದೆ. ಆದರೆ ಒಂದನೇಯಲ್ಲಿಯಮಕ್ಕಳು 999ರ ತನಕವೂ ಲೆಕ್ಕ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಎರಡನೇಯಲ್ಲೇ 9999 ಕ್ಕಿಂತಲೂ ಹೆಚ್ಚಿನ ಲೆಕ್ಕ ಮಾಡುವ ಸಾಮರ್ಥ್ಯ ಗಳಿಸಿರುತ್ತಾರೆ. ಅಂದರೆ ಒಂದನೇಯಲ್ಲಿಪ್ರಸ್ತುತ ಮೂರನೇಯ ಮತ್ತು ಎರಡನೇಯಲ್ಲಿ ಪ್ರಸ್ತುತ ನಾಲ್ಕನೇಯ ಗಣಿತದ ಸಾಮರ್ಥ್ಯ ಪಡೆದಿರುತ್ತಾರೆ. ಹಾಗಿದ್ದಾಗ ಅವರಿಗೆ ಮೂರನೇ ಮತ್ತು ನಾಲ್ಕನೇಯಲ್ಲಿ ಗಣಿತದ ಇನ್ನೂ ಹೆಚ್ಚಿನಕೌಶಲಗಳನ್ನು ಕಲಿಸಬಹುದು. ಆದರೆ ಪರಿಸ್ಥಿತಿ ಏನಿದೆಯೆಂದರೆ ಐದನೇಯಲ್ಲಿ ಮತ್ತೆ ಗಣಿತದ ಪಠ್ಯವನ್ನು ದುರ್ಬಲಗೊಳಿಸಲಾಗಿದೆ. ಇದರ ಬಳಿಕ ಆರನೇಯಲ್ಲಿ ಮತ್ತೊಂದಿಷ್ಟು ಹೆಚ್ಚು ಹಾಗೂಏಳನೇಯಲ್ಲಿ ಅತಿಯಾಗಿ ಹೆಚ್ಚಿನ ಪಠ್ಯವಿದೆ. ಖಾಸಗಿ ಶಾಲೆಯ ಒಬ್ಬ ಶಿಕ್ಷಕಿ ಹೇಳುತ್ತಾರೆ, ನಾನು ಐದನೇಯಲ್ಲೇ ಆರನೇಯ ಸ್ವಲ್ಪ ಗಣಿತವನ್ನೂ 6ನೇಯಲ್ಲಿ 7ನೇಯ ಒಂದಿಷ್ಟು ಗಣಿತವನ್ನೂಕಲಿಸಿ ಸರಿದೂಗಿಸುತ್ತೇನೆ, 5, 6 ಮತ್ತು 7ನೇ ತರಗತಿಗಳಿಗೆ ಆ ಶಾಲೆಯಲ್ಲಿ ಆಕೆಯೊಬ್ಬಳೇ ಗಣಿತ ಕಲಿಸುತ್ತಿರುವುದರಿಂದ ಇದು ಸಾಧ್ಯ. ಆದರೆ ಬೇರೆ ಬೇರೆ ಶಿಕ್ಷಕಿಯರಿದ್ದರೆ ಈಹೊಂದಾಣಿಕೆ ಅಸಾಧ್ಯ. ಹೀಗಾಗಿ ಒಂದನೇಯಿಂದ ಬೆಳೆಸಬೇಕಾದಲ್ಲಿ ಬೆಳೆಸದಿದ್ದ ಮಗುವಿನ ತಿಳುವಳಿಕೆಗೆ ಗಣಿತವು 7ನೇ ತರಗತಿಗೆ ಬರುವಾಗ ಕಷ್ಟವಾಗುತ್ತದೆ. ಲೆಕ್ಕ ನನಗೆ ಕಷ್ಟ, ಅದುನನ್ನಿಂದಾಗುವಂತಹದಲ್ಲ ಎಂಬ ತೀರ್ಮಾನಕ್ಕೆ ಮಕ್ಕಳು ಬಂದರೆ ಅದಕ್ಕೆ ಅವರು ಕಾರಣರೇ? ಅಥವಾ ಪಾಠ ಪಟ್ಟಿ ಮತ್ತು ಶಿಕ್ಷಣ ವ್ಯವಸ್ಥೆ ಕಾರಣವೇ?
ಪ್ರಸ್ತುತ ಐದನೇ ತರಗತಿಯ ಮೊದಲ ಸೆಮಿಸ್ಟರ್ ಗಣಿತ ಪಠ್ಯದಲ್ಲಿರುವ (ಪುಟ 67) ಒಂದು ಅಭ್ಯಾಸ ಲೆಕ್ಕ ಹೀಗಿದೆ: ಒಬ್ಬ ರೈತನಲ್ಲಿ 20,000 ರೂ.ಗಳಿವೆ. ಆ ಹಣದಲ್ಲಿ ಅವನು 9,575.50ರೂ.ಗೆ ಒಂದು ಹಸುವನ್ನು 7,368.75 ರೂ.ಗೆ ಒಂದು ಎಮ್ಮೆಯನ್ನು ಹಾಗೂ 2,179.50 ರೂ.ಗೆ ಒಂದು ಕುರಿಯನ್ನು ಕೊಂಡನು. ಅವನಲ್ಲಿ ಉಳಿಯುವ ಹಣವೆಷ್ಟು? ಇದನ್ನು ಓದಿದಾಗವಿದ್ಯಾರ್ಥಿಗಳ ಪ್ರತಿಕ್ರಿಯೆ ಹೀಗಿತ್ತು: ದನ, ಎಮ್ಮೆ, ಕುರಿ ವ್ಯಾಪಾರ ಪೈಸೆ ಹಣಕ್ಕೆ ಮಾಡ್ತಾರಾ ಟೀಚರ್?
ಇನ್ನು, ಹೈಸ್ಕೂಲಿನ ಗಣಿತ ಪಾಠಪಟ್ಟಿ ನೋಡಿದರೆ ಎಂಟನೇ ತರಗತಿಗೆ 5, 6 ಮತ್ತು 7ರ ಪಾಠಗಳ ಪುನರಾವರ್ತನೆ ಸ್ವಲ್ಪ ಪ್ರೌಢವಾಗಿದೆ. ಆದರೆ 9ನೇ ತರಗತಿಗೆ ಅದು ಒಮ್ಮೆಲೇಹೆಚ್ಚುತ್ತದೆ; ಹತ್ತರಲ್ಲಿ ಹೊಸ ಹೊಸ ಸಂಗತಿಗಳು ಸೇರ್ಪಡೆಗೊಂಡು ವಿದ್ಯಾರ್ಥಿಯ ಧಾರಣ ಶಕ್ತಿಯನ್ನು ಕೆಣಕುತ್ತದೆ.
ಗಣಿತ ಪಠ್ಯ ತಯಾರಿಸಿದವರು ತಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳ ಬಹುದು. ಆದರೆ ಪ್ರಶ್ನೆ ಇರುವುದು ಅದಲ್ಲ. ವಿದ್ಯಾರ್ಥಿಗಳ ಧಾರಣಾ ಸಾಮರ್ಥ್ಯ ಒಂದರಿಂದ ನಾಲ್ಕರತನಕ ಹೆಚ್ಚಿದ್ದಾಗ ಅದನ್ನು ಸ್ಥಬ್ಧಗೊಳಿಸಿ 9 ನೇ 10 ನೇಗಾಗುವಾಗ ಒಮ್ಮಿಂದೊಮ್ಮೆಗೇ ಪಠ್ಯವನ್ನು ಹೊರಿಸಿದರೆ ಅವರಾದರೂ ಏನು ಮಾಡಿಯಾರು? ಗಣಿತವನ್ನು ಕೌಶಲವಾಗಿ ಕಲಿಯುವಲ್ಲಿನಾನು ಕಂಡಂತೆ ಎಳೆಯ ಮಕ್ಕಳಿಗೆ ಆತುರವಿರುತ್ತದೆ; ಅದರಲ್ಲಿ ಆನಂದವೂ ಇರುತ್ತದೆ. ಆದರೆ ನಮ್ಮ ಸದ್ಯದ ಪಾಠಪಟ್ಟಿ ಅದನ್ನು ತಪ್ಪಿಸುತ್ತಿರುವುದರಿಂದ ಸರಕಾರಿ ಶಾಲೆಗಳ ಮಕ್ಕಳುದಡ್ಡರೆನಿಸುತ್ತಾರೆ. ಶಿಕ್ಷಕರಿಗೂ ಪಾಠ ಮಾಡುವುದೆಂದರೆ ಪಾಠಪಟ್ಟಿಯನ್ನು ಮುಗಿಸುವುದು ಎಂತ ಇರುವುದರಿಂದ ಮಕ್ಕಳ ಧಾರಣಾ ಸಾಮರ್ಥ್ಯದ ಮೇಲೆ ವಿವಿಧ ತರಗತಿಗಳಲ್ಲಾಗುವಅನಿಯಮಿತತೆಯನ್ನು ಪರಿಶೀಲಿಸಲು ಸಮಯವೆಲ್ಲಿದೆ?
ಸರಕಾರಿ ಶಾಲೆಗಳಿಗೆ ಮಕ್ಕಳನ್ನುಆಕರ್ಷಿಸಲು ಇಂಗ್ಲಿಷ್ ನ್ನು ಒಂದನೇಯಿಂದಲೇ ಒಂದು ಅವಧಿಯ ಕಲಿಕೆಯನ್ನಾಗಿ ಸೇರಿಸಲಾಗಿದೆ. ಮಾಡಬೇಕಾಗಿದ್ದದ್ದು ಅದಲ್ಲ.ವಿದ್ಯಾರ್ಥಿಗಳ ಧಾರಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿತ್ತು. ಈ ನ್ಯೂನತೆ ಇರುವಾಗಲೇ ಇಂಗ್ಲಿಷ್ ನ್ನು ಸೇರಿಸಿದರು, ಇರಲಿ, ಆದರೆಅದಕ್ಕೆ ವಿಧಿಸಿದ ಪಠ್ಯಕ್ಕೆ ದಿನದ ಇಡೀ ಅವಧಿ ಸಾಲದು. ಈ ಪಠ್ಯವನ್ನು ತಯಾರಿಸಿದವರು ಅದನ್ನು ಕೇವಲ ‘ಕೇಳುವ ಮೂಲಕ ಕಲಿಯುವ’ ತಂತ್ರಕ್ಕೆ ಸೀಮಿತವಾಗಿ ಮಾಡಿದ್ದಾರೆ. ಆದರೆಮಕ್ಕಳಿಗೆ ಇಂಗ್ಲಿಷನ್ನು ಕೇಳಿಸುವುದಕ್ಕಾಗಿ ಶಿಕ್ಷಕಿ ತರಗತಿಯಲ್ಲಿ ಕತೆ ಹೇಳಬೇಕು. ಆ ಸಾಮರ್ಥ್ಯವಿರುವವರು ಎಷ್ಟಿದ್ದಾರೆ? ಅದಕ್ಕಾಗಿ ರೂಪಿಸಿದ ಪುಸ್ತಕವನ್ನು ನೋಡಿದರೆ ಅದರ ಪ್ರೌಢತೆತಿಳಿಯುತ್ತದೆ. ಆದರೂ ಕಷ್ಟಪಟ್ಟು ಒಂದನೇಯಿಂದಲೇ ಕೇಳಿಸಿ ಕಲಿಸುವ ಪ್ರಯತ್ನ ಮಾಡಿದರೆಂದಿಟ್ಟು ಕೊಳ್ಳೋಣ. ಆ ಮಕ್ಕಳು ಐದನೇಗೆ ಬಂದಾಗ ಮತ್ತೆ ಇಂಗ್ಲಿಷ್ನ ಮೂಲ ಪಾಠಶುರುವಾಗುತ್ತದೆ. ನಾಲ್ಕನೇ ತನಕ ಚೆನ್ನಾಗಿ ಕನ್ನಡದೊಂದಿಗೆ ಇಂಗ್ಲಿಷ್ ಕಲಿತ ಮಕ್ಕಳಿಗೆ ಐದನೇಯ ಪಠ್ಯ ನೀರಸವಾದರೆ ಅಚ್ಚರಿ ಇಲ್ಲ.
ನಮ್ಮ ಮಕ್ಕಳಿಗೆ ಇಂಗ್ಲಿಷ್ನ ಅನೇಕ ಶಬ್ದಗಳು ಗೊತ್ತಿವೆ. ಅವರ ಶಬ್ದ ಭಂಡಾರ ಪರವಾಗಿಲ್ಲ. ಆದರೆ ಗೊತ್ತಿರುವ ಶಬ್ದಗಳನ್ನು ಸರಿಯಾಗಿ ಜೋಡಿಸಿ ವಾಕ್ಯಮಾಡಿ ಹೇಳಲು ತಿಳಿದಿಲ್ಲ. ಈ ಅಸಾಮರ್ಥ್ಯ. ಹಾಗೇನೇ ಮುಂದುವರಿಯುತ್ತದೆ. ಅನೇಕ ಹೈಸ್ಕೂಲು ಅಧ್ಯಾಪಕರ ಹಾಗೂ ಕಾಲೇಜು ಉಪನ್ಯಾಸಕರ ಇಂಗ್ಲಿಷ್ ಭಾಷಾ ಪ್ರಯೋಗ ಸರಿಯಾಗಿಲ್ಲದಿರುವುದಕ್ಕೆ ಈಬಗೆಯ ಮುಂದುವರಿಕೆಯೇ ಕಾರಣ. ಆಂಗ್ಲಭಾಷೆಯಲ್ಲಿ ಬರೆದು ಎಂ.ಫಿಲ್., ಪಿ.ಎಚ್.ಡಿ ಗೆ ಸಲ್ಲಿಸಲಾದ ಪ್ರಬಂಧಗಳ ಭಾಷೆಯನ್ನು ನೋಡಿದರೆ ದಿಗಿಲಾಗುತ್ತದೆ. ಬದಲಿಗೆ ವಾಕ್ಯಗಳನ್ನುಮಾಡುವುದು, ಕಿರು ಸಂಭಾಷಣೆಗಳನ್ನು ಬರೆಯುವುದು, ಸಣ್ಣ ಪ್ರಬಂಧಗಳನ್ನು ಬರೆಯುವುದು ಹೀಗೆ ಐದನೇ ಆರನೇಯಲ್ಲಿಯೇ ಮಾಡಿದರೆ ಮಕ್ಕಳ ಇಂಗ್ಲಿಷ್ ಶುದ್ಧವಾಗಿಯೇರೂಪುಗೊಳ್ಳುತ್ತದೆ. ಅವರ ಇಂಗ್ಲಿಷ್ ಸಂಭಾಷಣಾ ಸಾಮಥ್ರ್ಯವೂ ವೃದ್ಧಿಸುತ್ತದೆ. ಆದರೆ ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿ ಇದಕ್ಕೆ ಸಂಬಂಧಿಸಿದ ನಿರೀಕ್ಷೆಗಳೇ ಇಲ್ಲವಲ್ಲ!
ಮುಂದಿನ ವರ್ಷದಿಂದ ಸಿ.ಬಿ.ಎಸ್.ಸಿ ಮಟ್ಟದಲ್ಲಿ 5ನೇ ಮತ್ತು 8ನೇ ಗೆ ಹೊಸ ಪಠ್ಯಗಳು ಬರಲಿವೆಯೆಂದು ಈಗ ಸುದ್ದಿ ಇದೆ. ಅದು ನಿಜಕ್ಕೂ ಹೌದಾದರೆ ಇಷ್ಟರೊಳಗೆ ಪಠ್ಯಪುಸ್ತಕಗಳಪೂರೈಕೆ ಆಗಬೇಕಿತ್ತು. 5ನೇ ಪಠ್ಯಕ್ಕೆ ಸರಿಯಾಗಿ 4ನೇ ತರಗತಿಯ ಮಕ್ಕಳನ್ನೂ 8ನೇ ಪಠ್ಯಕ್ಕೆ 7ನೇ ತರಗತಿಯ ಮಕ್ಕಳನ್ನೂ ಸಿದ್ಧಪಡಿಸ ಬಹುದಿತ್ತು. ಆದರೆ ಅವು ಮುಂದಿನಜುಲೈಗಾಗುವಾಗ ತಲುಪಿದರೆ ಅವುಗಳ ಲಾಭವನ್ನು ಪಡೆಯಲು ಒಂದು ವರ್ಷ ತಡವಾಗುತ್ತದೆ. ಆದರೆ ಸದ್ಯ 5ನೇ ಪಠ್ಯಕ್ಕೆ ತಳಹದಿಯವುದು? ಈಗಿನ ನಾಲ್ಕನೇ ಪಠ್ಯವೊ ಅಥವಾಅದಕ್ಕಿಂತ ಹೆಚ್ಚಿನದ್ದೊ? ಅದಕಿಂತ ಹೆಚ್ಚಿನದಾದರೆ ಒಂದರಿಂದ ನಾಲ್ಕನೇಯ ತನಕದ ಪಠ್ಯದ ಸಿದ್ಧತೆ ಯಾವಾಗ? ಅದನ್ನು ಮಾಡುವಾಗ ಮಕ್ಕಳ ಧಾರಣಾ ಶಕ್ತಿಯ ಅಧ್ಯಯನಮಾಡಲಾಗುವುದೇ?
ಪ್ರಸ್ತುತ ನಮ್ಮ ಮಕ್ಕಳು ಕಷ್ಟ ಎಂತ ಭಾವಿಸಿಕೊಂಡಿರುವುದು ಗಣಿತ ಮತ್ತು ಇಂಗ್ಲಿಷ್ ಭಾಷಾ ಪರೀಕ್ಷೆಗಳನ್ನು ಎನ್ನುವುದನ್ನು ಎಲ್ಲರೂ ಬಲ್ಲರು. ಆದರೆ ಇವುಗಳುಕಷ್ಟವಾಗುವುದರ ಹಿಂದೆ ಕಲಿಸುವ ಪ್ರಕ್ರಿಯೆಯಲ್ಲಿಯೇ ತಪ್ಪಿದೆ ಎನ್ನುವುದರ ಅರಿವು ಎಲ್ಲರಿಗೂ ಇಲ್ಲ. ಆದುದರಿಂದ ಶಿಕ್ಷಣದ ಆಡಳಿತ ನಡೆಸುವವರು ಈ ವಿಷಯಗಳನ್ನು ಗಂಭೀರವಾಗಿಪರಿಗಣಿಸಬೇಕು. ಪಠ್ಯದ ರೂಪೀಕರಣದಲ್ಲಿ ವೈಜ್ಞಾನಿಕ ತಳಹದಿ ಇರಬೇಕು. ಐದಾರು ಮಂದಿಯನ್ನು ತಜ್ಞರೆಂದು ಕರೆದು ಅವರ ಚಿತ್ತಕ್ಕೆ ತೋಚಿದಂತೆ ಮಾಡುವುದಲ್ಲ. ಅವರ ಖಾಸಗಿಐಡಿಯಾಲಜಿಗಳು ಪಠ್ಯದಲ್ಲಿ ಸೇರುವ ಅಗತ್ಯವಿಲ್ಲ. ಹಾಗಾಗಿ ಶಿಕ್ಷಣ ಸುಧಾರಣೆಯ ಸಂಕೀರ್ಣತೆಯನ್ನು ಗಮನದಲ್ಲಿಟ್ಟು ಕೊಂಡು ಮುಂದಡಿ ಇಡಬೇಕಾದ ಅಗತ್ಯವಿದೆ.
ಇನ್ನುಳಿದಿರುವ ಪ್ರಶ್ನೆಯೆಂದರೆ ಆ ಸುಶಿಕ್ಷಿತ ಮಹಿಳೆ (ಸುಶಿಕ್ಷಿತ ಯಾಕೆಂದರೆ ಸದ್ಯ ಆಕೆ ಸರಕಾರಿ ಶಾಲೆಗೆ ಮಗುವನ್ನು ಕಳಿಸುತ್ತಿದ್ದಾಳೆ) ಮುಂದಿನ ವರ್ಷ ಮಗುವನ್ನು ಎಲ್ಲಿಗೆಕಳಿಸುತ್ತಾಳೋ ಗೊತ್ತಿಲ್ಲ. ಆಕೆ ಹೇಳಿದ್ದಾಳೆ, ಇನ್ನು ನನಗೆ ನನ್ನ ಮಗುವಿನ ಭವಿಷ್ಯ ಮುಖ್ಯ, ಸರಕಾರಿ ಶಾಲೆಯದ್ದಲ್ಲ.
Discussion about this post