ನವದೆಹಲಿ, ಅ.18: ಮನುಷ್ಯನ ಅಮಲಿನ ದಾಹಕ್ಕೆ ಇಡೀ ಸರ್ಪ ಸಂಕುಲವೇ ನಾಶವಾಗುತ್ತಿರುವ ಅಂಶ ನಾಗರಿಕ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
ಹೌದು, ವಿಷಪೂರಿತ ಸರ್ಪಗಳಿಂದ ತಯಾರಾಗುವ ಮಾದಕ ದ್ರವ್ಯಗಳಿಂದ ಅಮಲೇರಿಸಿಕೊಳ್ಳುವ ಮಾನವನ ದಾಹಕ್ಕೆ ಸಾವಿರಾರು ಸರ್ಪಗಳು ಬಲಿಯಾಗುತ್ತಿವೆ.
ಒಂದು ಸರ್ಪದಿಂದ 5 ಮಿಲಿಮೀಟರ್ ವಿಷ ಸಂಗ್ರಹಿಸಬಹುದು. 500 ಮಿ.ಲೀ. ಸಂಗ್ರಹಿಸಬೇಕಾದರೆ 100 ಸರ್ಪಗಳನ್ನು ಕೊಲ್ಲಬೇಕಾಗುತ್ತದೆ. ಮೋಜು, ಮಸ್ತಿಯಲ್ಲಿ ಮುಂಚೂಣಿಯಲ್ಲಿರುವ ಇಂದಿನ ನಾಗರಿಕ ಸಮಾಜ ತನ್ನ ಅಮಲು ತೀರಿಸಿಕೊಳ್ಳಲು ಲಕ್ಷಾಂತರ ಮಿಲಿಲೀಟರ್ ಹಾವಿನ ವಿಷ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಪ್ರತಿನಿತ್ಯ ಅದೆಷ್ಟು ಸರ್ಪ ಸಂಕುಲ ನಾಶವಾಗುತ್ತಿದೆ ಎಂದು.
ಹಾವಿನ ವಿಷ ಬಳಸಿ ತಯಾರಿಸಲಾಗುವ ಏ-72ಮತ್ತು ಏ-76 ಎಂಬ ಮಾದಕ ದ್ರವ್ಯಕ್ಕೆ ಭಾರೀ ಬೇಡಿಕೆ ಇದೆ. ಅರ್ಧ ಲೀಟರ್ ಹಾವಿನ ವಿಷಕ್ಕೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ರೂಪಾಯಿಗೂ ಅಧಿಕ ಬೆಲೆ ಇದೆ.
ಆದರೂ ನಾಗರಹಾವು ಮತ್ತು ಕಾಳಿಂಗ ಸರ್ಪದಿಂದ ತಯಾರಿಸಲಾಗುವ ಮಾದಕ ದ್ರವ್ಯಕ್ಕೆ ಇಡೀ ವಿಶ್ವದಾದ್ಯಂತ ಭಾರೀ ಬೇಡಿಕೆ ಇದೆ. ಈ ದ್ರವ್ಯ ಮೋಜು, ಮಸ್ತಿ ಪಾರ್ಟಿಗಳಲ್ಲಿ ಯಥೇಚ್ಛವಾಗಿ ಬಳಕೆಯಾಗುತ್ತಿದೆ.
ಹಾವಿನ ವಿಷದ ಮಾದಕ ದ್ರವ್ಯಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ ಸಾವಿರಾರು ಸರ್ಪಗಳ ಮಾರಣಹೋಮ ಎಗ್ಗಿಲ್ಲದೆ ನಡೆಯುತ್ತಿದೆ. ದಂಧೆಕೋರರು ಹಾವುಗಳನ್ನು ಹತ್ಯೆ ಮಾಡಿ ಅದರ ವಿಷವನ್ನು ನಿರಂತರವಾಗಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ.
ಹಾವಿನ ವಿಷಕ್ಕೆ ಕರ್ನಾಟಕವೂ ಸೇರಿದಂತೆ ದೇಶ-ವಿದೇಶಗಳಲ್ಲೂ ಭಾರೀ ಬೇಡಿಕೆ ಇದೆ. ಹೀಗಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬರುವ ಕಾಳಿಂಗ ಸರ್ಪ ಮತ್ತು ನಾಗರಹಾವುಗಳನ್ನು ಕಾನೂನಿಗೆ ವಿರುದ್ಧವಾಗಿ ಕೊಂದು ಹಾಕಲಾಗುತ್ತಿದೆ.
ಅದೇ ರೀತಿ ಅದೃಷ್ಟದ ಸಂಕೇತ ಎಂದೇ ಬಿಂಬಿತವಾಗಿರುವ ಎರಡು ತಲೆ ಹಾವುಗಳ ಕಳ್ಳಸಾಗಾಣಿಕೆಯೂ ನಿರಂತರವಾಗಿ ನಡೆಯುತ್ತಿರುವುದರಿಂದ ಇಡೀ ಸರ್ಪ ಸಂತತಿಯೇ ಮಾನವನ ದಾಹಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ.
ಬೆಂಗಳೂರಲ್ಲೂ ಹಾವಿನ ಮಾದಕದ್ರವ್ಯಕ್ಕೆ ಬೇಡಿಕೆ: ಕೆಲ ತಿಂಗಳ ಹಿಂದೆ ನಗರದ ಐಷಾರಾಮಿ ಬಾರ್ಗಳ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಮದ್ಯ ತುಂಬಿದ ದೊಡ್ಡ ದೊಡ್ಡ ಬಾಟಲಿಗಳಲ್ಲಿ ಸತ್ತ ಸರ್ಪಗಳು ಪತ್ತೆಯಾಗಿದ್ದವು.
ಸತ್ತ ಸರ್ಪಗಳನ್ನು ಮದ್ಯದೊಂದಿಗೆ ಬೆರೆಸಿ ಸೇವಿಸಿದರೆ ನಶೆ ಜೋರಾಗುವುದಂತೆ. ಇದರ ಜೊತೆಗೆ ಹಾವಿನಿಂದ ಇಲ್ಲವೆ ಚೇಳಿನಿಂದ ಕುಟುಕಿಸಿಕೊಂಡು ಡ್ರಗ್ಸ್ ಸೇವಿಸಿದರೆ ಅದರ ಮಜವೇ ಬೇರೆ ಇರುತ್ತಂತೆ.
ಮಾನವನ ಈ ಅಮಲಿಗೆ ಕೇವಲ ಕರ್ನಾಟಕ ಮಾತ್ರವಲ್ಲ, ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ, ಪಶ್ಚಿಮಬಂಗಾಳ ಮತ್ತಿತರ ರಾಜ್ಯಗಳಲ್ಲೂ ಭಾರೀ ಬೇಡಿಕೆ ಇದೆ.
ಕೋಟ್ಯಂತರ ಮೌಲ್ಯದ ಹಾವಿನ ವಿಷ ಕಳ್ಳ ಸಾಗಾಣಿಕೆಯಾಗುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ಪೊಲೀಸರು ಭದ್ರತೆ ಹೆಚ್ಚಿಸಿದ ನಂತರ ಕೆಲ ಖತರ್ನಾಕ್ ವ್ಯಕ್ತಿಗಳು ಪ್ರಯಾಣಿಕರು ಸಂಚರಿಸುವ ಬಸ್ ಗಳಲ್ಲೇ ಸರಕು ಸಾಗಾಣಿಕೆ ಮಾಡುವ ನೆಪದಲ್ಲಿ ಹಾವಿನ ವಿಷ ಕಳ್ಳ ಸಾಗಾಣಿಕೆ ಮಾಡುತ್ತಿರುವ ಅಂಶ ಇತ್ತೀಚೆಗೆ ಬಯಲಾಗಿದೆ.
ಈ ದಂಧೆಗೆ ಪುಷ್ಟಿ ನೀಡುವಂತೆ ಇತ್ತೀಚೆಗೆ ಪಶ್ಚಿಮ ಬಂಗಾಳದ ಫಲ್ಬುರಿ ಪ್ರದೇಶದಲ್ಲಿ ಬಂಧಿಸಲಾದ ನಾಲ್ವರು ಕಳ್ಳಸಾಗಾಣಿಕೆದಾರರ ಬಳಿ 200 ಕೋಟಿ ರೂ. ಮೌಲ್ಯದ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿತ್ತು.
ಹೊಸ ವರ್ಷ, ಪ್ರೇಮಿಗಳ ದಿನ, ಗಣ್ಯವ್ಯಕ್ತಿಗಳ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಹಾವಿನ ವಿಷ ಬಳಸಿ ತಯಾರಿಸಲಾದ ಮಾದಕ ದ್ರವ್ಯ ಬಳಕೆ ಮಾಡಲಾಗುತ್ತಿದೆ.
ಸರ್ಪ ಸಂಕುಲಕ್ಕೆ ದೇವರ ಸ್ಥಾನಮಾನ ನೀಡಿರುವ ಭಾರತದಲ್ಲಿ ತಮ್ಮ ಕರ್ಮ ಕಳೆದುಕೊಳ್ಳಲು ದೇವಾಲಯಗಳಲ್ಲಿ ಸರ್ಪಸಂಸ್ಕಾರ ಮಾಡಿಸಿಕೊಳ್ಳುವ ವಾಡಿಕೆ ಇದೆ. ಇಂತಹ ದೇವರ ಬೀಡಲ್ಲಿರುವ ನಿರ್ದಯಿಗಳು ಇಡೀ ನಾಗಸಂಕುಲವನ್ನೇ ಸರ್ವನಾಶ ಮಾಡಲು ಮುಂದಾಗಿರುವುದು ದೈವ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.
ಈಗಲಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಾನೂನು ರಕ್ಷಕರು ಎಚ್ಚೆತ್ತುಕೊಂಡು ಪ್ರತಿನಿತ್ಯ ಮಾನವನ ತೆವಲಿಗೆ ಬಲಿಯಾಗುತ್ತಿರುವ ಸರ್ಪಸಂಕುಲವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವ ಅವಶ್ಯಕತೆ ಇದೆ.
Discussion about this post