Read - 2 minutes
ರಾಜ್ಯದಲ್ಲಿ ಕಾವೇರಿ ಜಲವಿವಾದ ಆಕ್ರೋಶ ಸೃಷ್ಠಿದ್ದರೆ, ಇನ್ನೊಂದೆಡೆ, ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರ ಭೇಟಿ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದೆ. ಹಾವು-ಮುಂಗುಸಿಯಂತಾಗಿ ೧೦ ವರ್ಷಗಳ ಕಾಲ ಇದ್ದವರು ಈಗ ರಾಗ-ದ್ವೇಷಗಳನ್ನು ಏಕಾಏಕಿ ಮರೆತು ಸ್ನೇಹ ಮೂಡಲು ಕಾರಣವಾದ್ದದು ಕಾವೇರಿ ವಿವಾದ.
ಇಬ್ಬರ ಮಧ್ಯೆ ಇದ್ದ ವೈಮನಸ್ಸಿನ ಗೋಡೆ ಈಗ ಬಿದ್ದು ಹೊಗಿದೆ. ಜಿದ್ದಾಜಿದ್ದಿ ರಾಜಕೀಯಕ್ಕೆ ತೆರೆ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಸ್ವತಃ ದೇವೇಗೌಡರ ಮನೆಗೆ ಹೋಗಿ ಸುಮಾರು ಎರಡು ಗಂಟೆಗಳ ಕಾಲ ಕಾವೇರಿ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದ್ದು ಜನ ಮೂಗಿನ ಮೇಲೆ ಬೆರಳಿಟ್ಟು ಗಮನಿಸುವಂತಾಗಿದೆ. ಹಿರಿಯ ಮುತ್ಸದ್ದಿ ದೇವೇಗೌಡರೂ ಸಹ ಕಾವೇರಿ ವಿಚಾರದಲ್ಲಿ ಎದೆಗುಂದಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮೂಲಕ ರಾಜೀನಾಮೆ ನೀಡಲು ಒಂದು ಹಂತದಲ್ಲಿ ಯೋಚಿಸಿದ್ದ ಸಿದ್ದರಾಮಯ್ಯ ಅವರನ್ನು ಸಂತೈಸಿದ್ದಾರೆ. ಇದರಿಂದ ಸಿಎಂ ಈಗ ನಿರಾಳರಾಗಲು ಅವಕಾಶವಾದಂತಾಗಿದೆ.
ಮೊನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಗೌಡರು ಮತ್ತು ಸಿಎಂ ಅಕ್ಕಪಕ್ಕ ಕುಳಿತು ಚರ್ಚಿಸಿದ್ದಾರೆ. ದೇವೇಗೌಡರು ವಿಧಾನಸೌಧದ ಸಭಾಂಗಣಕ್ಕೆ ಬಂದಾಗ ಸಿಎಂ ಆದಿಯಾಗಿ ಎಲ್ಲರೂ ಎದ್ದು ನಿಂತು ಸ್ವಾಗತಿಸಿದ್ದಾರೆ. ಗೌಡರ ಕೈ ಹಿಡಿದು ಸಿದ್ದು ಕೂಡ್ರಿಸಿದ್ದಾರೆ. ಎರಡು ದೈತ್ಯ ಶಕ್ತಿಗಳ ಮಿಲನಕ್ಕೆ ವೇದಿಕೆ ಮೊನ್ನೆ ಸಿಕ್ಕಿದೆ.
೧೯೯೬ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆದಾಗ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂದ ನಂತರ ಮೊನ್ನೆಯವರೆಗೆ ಪಾಲ್ಗೊಂಡಿರಲಿಲ್ಲ. ೨೦ ವರ್ಷಗಳ ದಾಖಲೆಯನ್ನು ನಿನ್ನೆ ಅಳಿಸಿ ಹಾಕಿ ಹೊಸ ಸಂಬಂಧಕ್ಕೆ ನಾಂದಿ ಹಾಡಿದ್ದಾರೆಂದೇ ವಿಶ್ಲೇಷಿಸಲಾಗುತ್ತಿದೆ. ಗೌಡರು ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ಸ್ವತಃ ಸಿಎಂ ಅವರ ಮನೆಗೆ ಹೋಗಿ ಆಹ್ವಾನಿಸಿದ್ದರು. ಮೊನ್ನೆಯ ಸಭೆಯಲ್ಲಿ ಅರ್ಧ ಗಂಟೆಗಳ ಕಾಲ ಗೌಡರು ಮಾತನಾಡಿದ್ದಾರೆ. ಕಾವೇರಿ ವಿವಾದ ಆರಂಭವಾದ ನಂತರ ಇವರಿಬ್ಬರು ದಿನಕ್ಕೆ ೨-೩ ಬಾರಿ ಮಾತುಕತೆ ನಡೆಸುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ.
ಸೆ. ೫ರಂದು ಸುಪ್ರೀಂ ಕೋರ್ಟ್ ದಿನನಿತ್ಯ ೧೫ ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶಿಸಿದ ನಂತರ ಸಿಎಂ ಸಂಕಷ್ಟಕ್ಕೆ ಸಿಲುಕಿದ್ದರು. ನೀರೇ ಇಲ್ಲದ ವೇಳೆ ಹೇಗೆ ಬಿಡಲಿ ಎಂದು ಚಿಂತೆಗೊಳಗಾಗಿದ್ದರು. ಒಂದೆಡೆ ಸುಪ್ರೀಂ ಆದೇಶ, ಇನ್ನೊಂದೆಡೆ ಜನರ ಆಕ್ರೋಶ. ಇವು ಸಿದ್ದು ಅವರನ್ನು ಹೈರಾಣಾಗಿಸಿದ್ದವು. ಆಗ ಅವರಿಗೆ ನೆನಪಾದವರೇ ಮಾಜಿ ಪ್ರಧಾನಿ ದೇವೇಗೌಡರು. ನೀರಾವರಿ ವಿಚಾರದಲ್ಲಿ ಅಪಾರ ಜ್ಞಾನವುಳ್ಳವರು ದೇವೇಗೌಡರು ಎನ್ನುವುದು ಸಿಎಂಗೆ ಗೊತ್ತಿತ್ತು. ಆ ಪ್ರಕಾರ, ಅವರ ಸಲಹೆ ಕೇಳಲು ಅವರ ಮನೆಗೆ ಹೋದರು. ಅಲ್ಲಿ ಗೌಡರು ನೀಡಿದ ಸಲಹೆ ಮುಖ್ಯಮಂತ್ರಿಯವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಜೊತೆಗೆ ಅಂದು ನೀರು ಬಿಟ್ಟಿದ್ದನ್ನು ಗೌಡರು ಸಹ ಸಮರ್ಥಿಸಿಕೊಂಡಿದ್ದರು.
ಇದಾದ ಎರಡು ದಿನದ ಬಳಿಕ ಸ್ವತಃ ದೇವೇಗೌಡರು ಹೆಲಿಕಾಪ್ಟರ್‌ನಲ್ಲಿ ರಾಜ್ಯದ ಎಲ್ಲ ಜಲಾಶಯಗಳ ಸಮೀಕ್ಷೆ ನಡೆಸಿ ಮಾರನೆಯ ದಿನವೇ ನವದೆಹಲಿಗೆ ತೆರಳಿ ಪ್ರಧಾನಿಯವರನ್ನು ಕಂಡು ಕರ್ನಾಟಕದ ಜಲಾಶಯಗಳ ನೀರಿನ ಸ್ಥಿತಿಗತಿ ಬಗ್ಗೆ ವಿವರಿಸಿದ್ದರು. ಮಧ್ಯಸ್ಥಿಕೆ ವಹಿಸಲು ಮನವಿ ಮಾಡಿದ್ದರು. ಆದರೆ ಪ್ರಧಾನಿ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರಲಿಲ್ಲ.
ಇಲ್ಲಿಂದ ಇಬ್ಬರ ಮಧ್ಯೆ ದಿನನಿತ್ಯ ಸಂಭಾಷಣೆ ಶುರುವಾಗಿದೆ. ಗೌಡರು ಸಿಎಂಗೆ ಈ ವಿಷಯದ ಬಗ್ಗೆ ಸಾಕಷ್ಟು ಸಲಹೆ ಕೊಡುತ್ತಿದ್ದಾರೆ. ಮೊನ್ನೆ ಮತ್ತೆ ಕರ್ನಾಟಕದ ವಿರುದ್ದ ತೀರ್ಪು ಬಂದಾಗ ನೀರು ಬಿಡದಂತೆ ಸೂಚಿಸಿದವರೇ ಗೌಡರು. ಅದನ್ನೇ ಮಂತ್ರಿ ಪರಿಷತ್‌ನಲ್ಲಿ ಮಂಡಿಸಿ ನಿರ್ಧಾರ ತಾಳಲಾಗಿದೆ. ಅದೇನೇ ಪರಿಸ್ಥಿತಿ ಎದುರಾದರೂ ಒಟ್ಟಾಗಿ ಎದುರಿಸೋಣ ಎಂಬ ಮನೋಸ್ಥೈರ್ಯವನ್ನು ಗೌಡರು ತುಂಬಿದ್ದರಿಂದ ಸಿದ್ದರಾಮಯ್ಯ ಇನ್ನಷ್ಟು ಧೈರ್ಯ ತಂದುಕೊಂಡಿದ್ದಾರೆ.
ಈಗ ಸಿದ್ದರಾಮಯ್ಯ ಮತ್ತು ದೇವೇಗೌಡರ ಮಧ್ಯೆ ೧೯೯೭ರಿಂದ ಇದ್ದ ದ್ವೇಷವೆಲ್ಲ ಕರಗಿದಂತಾಗಿದೆ. ತಾನು ಪ್ರಧಾನಿಯಾಗುವಾಗ ಮುಖ್ಯಮಂತ್ರಿ ಹುದ್ದೆಗೆ ತನ್ನನ್ನು ನಿರ್ಲಕ್ಷಿಸಿ ಜೆ.ಎಚ್. ಪಟೇಲರನ್ನು ಹಿರಿತನದ ಆಧಾರದ ಮೇಲೆ ಘೋಷಿಸಿದ್ದು ವಿರಸಕ್ಕೆ ಮೊದಲ ಕಾರಣವಾಗಿತ್ತು. ಬಳಿಕ ೨೦೦೪ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಧಿಕಾರ ಹಿಡಿದಾಗ ದೇವೇಗೌಡರು ತನ್ನನ್ನು ಮುಖ್ಯಮಂತ್ರಿ ಮಾಡದೆ ಕಾಂಗ್ರೆಸ್‌ಗೆ ಆ ಸ್ಥಾನ ಬಿಟ್ಟುಕೊಟ್ಟಿದ್ದರು. ಧರಂಸಿಂಗ್ ಸಿಎಂ ಆಗುವಂತೆ ಮಾಡಿದ್ದರೆನ್ನುವುದು ಎರಡನೆಯ ಸಿಟ್ಟಾಗಿತ್ತು. ನಂತರ ಯಾವ ಕಾರಣಕ್ಕೂ ಸಿದ್ದರಾಮಯ್ಯಗೆ ಅಧಿಕಾರ ಸಿಗಬಾರದೆಂದು ಎಚ್.ಡಿ. ಕುಮಾರಸ್ವಾಮಿ ಪಕ್ಷವನ್ನೇ ಹೈಜಾಕ್ ಮಾಡಿ ತಾನೇ ಮುಖ್ಯಮಂತ್ರಿಯಾಗಿದ್ದರು. ಇದು ಮೂರನೆಯ ಸಿಟ್ಟು. ಇಲ್ಲಿಂದ ಗೌಡರ ವಿರುದ್ಧ ಸಾಕಷ್ಟು ಸಲ ಪುತ್ರ ವ್ಯಾಮೋಹ ಎಂದೆಲ್ಲ ಸಿದ್ದು ಜರಿದಿದ್ದರು. ಗೌಡರೂ ಸಹ ಇದಕ್ಕೆ ಉತ್ತರಿಸಿದ್ದರು. ತನ್ನಿಂದ ಬೆಳೆದು ತನಗೇ ಎದುರು ಮಾತನಾಡುತ್ತಾರೆಂದು ಹೇಳಿದ್ದರು.
ಬದಲಾದ ರಾಜಕೀಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ ಮತ್ತೆ ಆ ಪಕ್ಷ ಅಧಿಕಾರ ಪಡೆದಾಗ ಸಿಎಂ ಆದರು. ಆಗ ದೇವೇಗೌಡರು ಅಭಿನಂದನೆ ಸಲ್ಲಿಸಿದ್ದರು. ಪ್ರತಿಯಾಗಿ ಸಿದ್ದರಾಮಯ್ಯ ಸಹ ಅವರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದರು. ಇದಾದ ಬಳಿಕ ಅವರ ಭೇಟಿ ಇತ್ತೀಚೆಗೆ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ನಿಧನರಾದಾಗ ನಡೆದಿತ್ತು. ದೇವೇಗೌಡರು ಸಿಎಂ ಮನೆಗೆ ಭೇಟಿ ಕೊಟ್ಟು ಎರಡು ತಾಸು ಸಂತೈಸಿದ್ದರು.
ಈಗ ಕಾವೇರಿ ಕಿಚ್ಚು ಮತ್ತೆ ಇಬ್ಬರನ್ನು ಒಂದುಗೂಡಿಸಿದೆ. ಇಬ್ಬರ ಮಧ್ಯೆ ಇದ್ದ ದ್ವೇಷ ಕೊಚ್ಚಿ ಹೋಗಿದೆ. ರಾಜ್ಯ ಸಂಕಷ್ಟದಲ್ಲಿರುವ ವೇಳೆ ಜನನಾಯಕರಿಗೆ ಜನಹಿತ ಮುಖ್ಯ ಎನ್ನುವುದನ್ನು ಇಬ್ಬರೂ ಸಾಬೀತು ಮಾಡಿದ್ದಾರೆ. ಈ ಮೂಲಕ ರಾಜ್ಯದ ರಾಜಕೀಯದಲ್ಲಿ ಹೊಸ ಭಾಷ್ಯವೊಂದನ್ನು ಬರೆದಿದ್ದಾರೆ.
ಸಿದ್ದರಾಮಯ್ಯ ಮತ್ತು ದೇವೇಗೌಡರ ಮಧ್ಯೆ ೧೯೯೭ರಿಂದ ಇದ್ದ ದ್ವೇಷವೆಲ್ಲ ಕರಗಿದಂತಾಗಿದೆ. ತಾನು ಪ್ರಧಾನಿಯಾಗುವಾಗ ಮುಖ್ಯಮಂತ್ರಿ ಹುದ್ದೆಗೆ ತನ್ನನ್ನು ನಿರ್ಲಕ್ಷಿಸಿ ಜೆ.ಎಚ್. ಪಟೇಲರನ್ನು ಹಿರಿತನದ ಆಧಾರದ ಮೇಲೆ ಘೋಷಿಸಿದ್ದು ವಿರಸಕ್ಕೆ ಮೊದಲ ಕಾರಣವಾಗಿತ್ತು. ಬಳಿಕ ೨೦೦೪ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಧಿಕಾರ ಹಿಡಿದಾಗ ದೇವೇಗೌಡರು ತನ್ನನ್ನು ಮುಖ್ಯಮಂತ್ರಿ ಮಾಡದೆ ಕಾಂಗ್ರೆಸ್‌ಗೆ ಆ ಸ್ಥಾನ ಬಿಟ್ಟುಕೊಟ್ಟಿದ್ದರು. ಧರಂಸಿಂಗ್ ಸಿಎಂ ಆಗುವಂತೆ ಮಾಡಿದ್ದರೆನ್ನುವುದು ಎರಡನೆಯ ಸಿಟ್ಟಾಗಿತ್ತು. ನಂತರ ಯಾವ ಕಾರಣಕ್ಕೂ ಸಿದ್ದರಾಮಯ್ಯಗೆ ಅಧಿಕಾರ ಸಿಗಬಾರದೆಂದು ಎಚ್.ಡಿ. ಕುಮಾರಸ್ವಾಮಿ ಪಕ್ಷವನ್ನೇ ಹೈಜಾಕ್ ಮಾಡಿ ತಾನೇ ಮುಖ್ಯಮಂತ್ರಿಯಾಗಿದ್ದರು. ಇದು ಮೂರನೆಯ ಸಿಟ್ಟು. ಇಲ್ಲಿಂದ ಗೌಡರ ವಿರುದ್ಧ ಸಾಕಷ್ಟು ಸಲ ಪುತ್ರ ವ್ಯಾಮೋಹ ಎಂದೆಲ್ಲ ಸಿದ್ದು ಜರಿದಿದ್ದರು. ಗೌಡರೂ ಸಹ ಇದಕ್ಕೆ ಉತ್ತರಿಸಿದ್ದರು. ತನ್ನಿಂದ ಬೆಳೆದು ತನಗೇ ಎದುರು ಮಾತನಾಡುತ್ತಾರೆಂದು ಹೇಳಿದ್ದರು.
Discussion about this post