Read - < 1 minute
ನವದೆಹಲಿ, ಸೆ.20: ಗಡಿ ದಾಟಿ ನಡೆಯುವ ಯಾವುದೇ ಭಯೋತ್ಪಾದನಾ ದಾಳಿಗೆ ತಕ್ಕ ಉತ್ತರ ನೀಡುವ ಹಕ್ಕನ್ನು ನಾವು ಹೊಂದಿದ್ದೇವೆ ಎಂದಿರುವ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ (ಡಿಜಿಎಂಒ) ಲೆ.ಜನರಲ್ ರಣಬಿರ್ ಸಿಂಗ್, ನಾವು ಸೂಕ್ತ ಸಮಯ ಹಾಗೂ ಸ್ಥಳದಲ್ಲಿ ಬಿಸಿ ಮುಟ್ಟಿಸುತ್ತೇವೆ ಎಂದಿದ್ದಾರೆ.
ಉರಿ ದಾಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಲೆ. ಜನರಲ್ ರಣಬೀರ್ ಸಿಂಗ್, ಪಾಕ್ ನೆನಪಿಟ್ಟುಕೊಳ್ಳುವಂತಹ ದಾಳಿ ನಡೆಸಲು ಭಾರತೀಯ ಸೇನೆ ಸಿದ್ಧವಾಗಿದ್ದು, ಉಗ್ರರ ದಾಳಿಗಳಿಗೆ ಪ್ರತಿದಾಳಿ ನಡೆಸಲು ಸಮಯ ಮತ್ತು ಸ್ಥಳ ನಮ್ಮ ಆಯ್ಕೆಗೆ ಬಿಟ್ಟಿದ್ದು, ಆ ಬಗ್ಗೆ ನಾವು ನಿರ್ಧರಿಸುತ್ತೇವೆ ಎಂದಿದ್ದಾರೆ.
ಉರಿ ಕಾರ್ಯಾಚರಣೆಯಲ್ಲಿ ಸೇನೆಯು ಒಟ್ಟು ನಾಲ್ಕು ಎಕೆ ರೈಫಲ್ಸ್, 4 ಗ್ರೆನೇಡ್, 4 ಅಂಡರ್ ಬ್ಯಾರೆಲ್ ಗ್ರೆನೇಡ್, 5 ಹ್ಯಾಂಡ್ ಗ್ರೆನೇಡ್ ಹಾಗೂ ಎರಡು ರೆಡಿಯೋ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ಸೇನಾ ಕೇಂದ್ರದ ಮೇಲೆ ಭಾನುವಾರ ಬೆಳಗಿನ ಜಾವ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ 21ಯೋಧರು ಹುತಾತ್ಮರಾಗಿದ್ದಾರೆ. ಘಟನೆಗೆ ಸಂಬಂಸಿದಂತೆ ವಿವಿಧ ದೇಶಗಳು ಭಾರತಕ್ಕೆ ಸಹಾಯಹಸ್ತ ನೀಡಲು ಮುಂದಾಗಿವೆ.
ಭಾರತಕ್ಕೆ ಬೆಂಬಲ:
ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿರುವ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಷ್ಯಾ, ಹುತಾತ್ಮರಾದ ಹಾಗೂ ಗಾಯಗೊಂಡ ಯೋಧರ ಬಗ್ಗೆ ಸಹಾನುಭೂತಿ ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ಹೇಳಿದೆ. ಇದೇ ವೇಳೆ ಗಡಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಎಲ್ಲ ರೀತಿಯ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.
ಇತ್ತ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಜಪಾನ್, ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಹೇಳಿದೆ. ಜಪಾನ್ ಕೂಡ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದಿದೆ.
Discussion about this post