ಶಿವಮೊಗ್ಗ, ಸೆ.22: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಹೊರ ವರ್ತುಲ ರಸ್ತೆಯನ್ನು ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎನ್. ರಮೇಶ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಗೆ ಶಿವಮೊಗ್ಗ ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಾಧಿಕಾರದ ವತಿಯಿಂದ ಈ ಯೋಜನೆಯನ್ನು ಕೈಗೆತ್ತಿಕೊಂಡು ಇನ್ನಷ್ಟು ಸ್ಮಾರ್ಟ್ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಬೆಂಗಳೂರಿನ ಕೆಯುಐಡಿಎಫ್‌ಸಿ ವತಿಯಿಂದ ಸಾಲ ಪಡೆಯಲಾಗುವುದು. ಈಗಾಗಲೆ ಸಂಸ್ಥೆಗೆ ಸಂಬಂಧಿತ ಮಾಹಿತಿಯನ್ನು ನೀಡಲು ಎಲ್ಲಾ ಕ್ರಮ ಜರುಗಿಸಲಾಗಿದೆ ಎಂದರು.
ಹೊರವರ್ತುಲ ರಸ್ತೆಯ ಒಟ್ಟು ಉದ್ದ 32.50 ಕಿಮೀ ಇರಲಿದೆ. ರಸ್ತೆಗೆ ಬೇಕಾಗುವ ಜಮೀನಿನ ಅಗಲ 60 ಮೀಟರ್ ಆಗಿದ್ದು, ಚತುಷ್ಪಥ ಮಾರ್ಗದ ಜೊತೆ ಸರ್ವೀಸ್ ರಸ್ತೆಯನ್ನು ಸಹ ನಿರ್ಮಿಸಲಾಗುವುದು. ಈ ಮಾರ್ಗದಲ್ಲಿ ತುಂಗಾ ನದಿಗೆ 2 ಅಡ್ಡ ಸೇತುವೆಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಸ್ವಾಧೀನ ಪಡಿಸಿಕೊಳ್ಳಬೇಕಾದ ಜಮೀನು ಸುಮಾರು 482 ಎಕರೆ ಆಗಿದ್ದು, ಇದಕ್ಕೆ ಪ್ರತಿ ಎಕೆರೆ ತಲಾ 20 ಲಕ್ಷದಂತೆ ಭೂಸ್ವಾಧೀನ ವೆಚ್ಚ ತಗುಲಲಿದೆ. ಈ ಯೋಜನೆಗೆ ಸರ್ಕಾರದ ಅನುಮತಿ ಕೋರಿ 2015ರ ಮೇನಲ್ಲಿ ಪ್ರಾಸ್ತಾಪ ಸಲ್ಲಿಲಾಗಿದೆ. ಸಾಲ ಪಡೆಯಲಾಗುವ ಸಂಸ್ಥೆಗೆ 15 ವರ್ಷದಲ್ಲಿ ಮರುಪಾವತಿ ಮಾಡುವ ಷರತ್ತು ನೀಡಲಾಗಿದೆ. 50:50ರ ಆಧಾರದಲ್ಲಿ ಜಮೀನು ಪಡೆದ ಮಾಲಕರಿಗೆ ಅವಕಾಶಕೊಡಲಾಗುವುದು ಎಂದು ವಿವರಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ಯಾನ್ ಸಿಟಿಯನ್ನು ರಚಿಸಲು ಪ್ರಾಧಿಕಾರ ಸಹಕಾರ ನೀಡಲಿದೆ. ಅಂರ‌್ರಾಷ್ಟ್ರೀಯ ಮಟ್ಟದ ನಗರಗಳ ಅಭಿವೃದ್ಧಿಗೆ ತಕ್ಕಂತೆ ಅಭಿವೃದ್ಧಿ ಪಡಿಸಲು ಎಲ್ಲಾ ಸಹಕಾರವನ್ನು ತಾವು ನೀಡುವುದಾಗಿ ರಮೇಶ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯರಾದ ಶಿವಾನಂದ, ಮಮತಾ ಸಿಂಗ್, ಚಂದ್ರಶೇಖರ್ ಉಪಸ್ಥಿರಿದ್ದರು.
Discussion about this post